- ಡಾ.ಅಜಕ್ಕಳ ಗಿರೀಶ್ ಭಟ್
- ಅಂಕಣ: ಗಿರಿಲಹರಿ
- www.bantwalnews.com
ಪ್ರವಾಸವು ಅನೇಕ ಬಾರಿ ಪ್ರಯಾಸವಾಗುವುದು ಸಹಜ. ಕೆಲದಿನಗಳ ಹಿಂದೆ, ತಾಲೂಕಿನಿಂದ ಒಟ್ಟು ಐವತ್ತು ವಿದ್ಯಾರ್ಥಿಗಳನ್ನು(ಕಾಲೇಜು ಹುಡುಗ ಹುಡುಗಿಯರನ್ನು) ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾದ ಅವಕಾಶ ಅನಿವಾರ್ಯವಾಗಿ ಬಂತು. ಹೌದು, ಅವಕಾಶ ಮತ್ತು ಅನಿವಾರ್ಯತೆ ಇವೆರಡೂ ಜೊತೆಯಾಗಿ ಸಾಮಾನ್ಯವಾಗಿ ಬಳಕೆಯಾಗದಿದ್ದರೂ ಅದು ಅನಿವಾರ್ಯ ಅವಕಾಶವಾಗಿತ್ತು.
ಬಸ್ಸೊಂದು ಬುಕ್ಕಾಯಿತು. ಬರಬೇಕಾದ ವಿದ್ಯಾರ್ಥಿಗಳೆಲ್ಲ ಹೇಳಿದ ಸಮಯಕ್ಕೆ ಹೇಳಿದ ಜಾಗದಲ್ಲಿ ಸಿದ್ಧವಾಗಿದ್ದರು. ಬಸ್ಸೂ ಸಮಯಕ್ಕೆ ಸರಿಯಾಗಿ ಬಂತು. ರಾತ್ರಿ ಹತ್ತು ಗಂಟೆಗೆ ನಮ್ಮೂರಿನಿಂದ ಬಸ್ಸು ಹೊರಟಿತು. ಲಕ್ಸುರಿ ಬಸ್ಸು ಆದರೂ ಆಸನಗಳು ಏನೂ ಹಿಂದೆ ಮುಂದೆ ಹೋಗುತ್ತಿರಲಿಲ್ಲ. ಅಂತೂ ಬಸ್ಸು ಮುಂದೆ ಹೋಗುತ್ತಿತ್ತಾದ್ದರಿಂದ ಮಕ್ಕಳದೇನೂ ಕಂಪ್ಲೇಂಟು ಇರಲಿಲ್ಲ. ನಾನಾದರೋ ಹಿಂದೆಲ್ಲ ಬಸ್ಸಲ್ಲಿ ನಿಂತುಕೊಂಡಾದರೂ ನಿದ್ದೆ ಮಾಡಬಲ್ಲವನಾಗಿದ್ದರೂ ಈ ಬಸ್ಸಲ್ಲಿ ಸರಿಯಾಗಿ ನಿದ್ದೆ ಬರಲಿಲ್ಲ.
ಅಂತೂ ಬಸ್ಸು ಬೆಳಗ್ಗೆ ಆರೂವರೆಗೆ ಬೆಂಗಳೂರಿಗೆ ತಲುಪಿತು. ಆನಂದರಾವು ಸರ್ಕಲ್ಲಿನ ಬಳಿಯಿರುವ ಟೂರಿಸ್ಟ್ ಹೋಟೆಲು ಇಂಥ ಹೋಲ್ ಸೇಲ್ ಲೋಡ್ಜ್ ಗೆ ಚೆನ್ನಾದ ವ್ಯವಸ್ಥೆಯನ್ನು ಹೊಂದಿದ್ದುದು ಗೊತ್ತಿತ್ತು. ಅಲ್ಲಿ ಪ್ರಾಥರ್ವಿಧಿಗಳೆಲ್ಲ ಸಾಂಗವಾಗಿ ಮುಗಿದ ನಂತರ ಮೊದಲೇ ವ್ಯವಸ್ಥೆ ಮಾಡಿದ ಹೋಟೆಲಿಗೆ ಹೋಗಿ ಸೆಟ್ಟು ದೋಸೆಯನ್ನೂ (ಗಳನ್ನೂ) ಹೊಡೆದು ಅವುಗಳ ಮೇಲೆ ಇಡ್ಳಿಯನ್ನೂ ಲೋಡು ಮಾಡಿ ಅದರ ಮೇಲೆ ಚಹಾದ ಅಭಿಷೇಕವೂ ಆಯಿತು. ಆನಂದರಾವು ಸರ್ಕಲ್ಲಿನಿಂದ ಹೊರಟು ನಾವು ಹೋಗಿದ್ದ ಬಸ್ಸಿನಲ್ಲೇ ಹತ್ತಿರ ಹತ್ತಿರ ಒಂದು ಗಂಟೆ ಸಮಯ ತೆಗೆದುಕೊಂಡು ನಾವು ಭಾಗವಹಿಸಬೇಕಾಗಿದ್ದ ಕಾರ್ಯಕ್ರಮ ನಡೆಯಲಿದ್ದ ಅರಮನೆ ಮೈದಾನಕ್ಕೆ ತಲುಪಿದೆವು. ಮೈದಾನಕ್ಕೆ ಅಂದರೆ ಮೈದಾನಕ್ಕಲ್ಲ. ಅರಮನೆ ಮೈದಾನಕ್ಕೆ ಪೂರ್ತಿಯಾಗಿ ಒಂದು ಪ್ರದಕ್ಷಿಣೆ ಬಂದು ಬಸ್ಸು ನಿಲ್ಲಿಸುವ ಜಾಗಕ್ಕೆ ತಲುಪಿದೆವು. ಅಲ್ಲಿ ನೋಡಿದರೆ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ಬಂದ ನೂರಾರು ಕೆಂಪು ಬಸ್ಸುಗಳು ವಾತಿ ಮಾಡುತ್ತಿದ್ದವು. ಈ ವಾಂತಿಗಳೆಲ್ಲ ಒಂದೇ ಕಡೆ ಪ್ರವಾಹದಂತೆ ಮತ್ತೆ ಪ್ರದಕ್ಷಿಣಾಕಾರವಾಗಿ ಅರಮನೆ ಮೈದಾನಕ್ಕೆ ಸುತ್ತು ಬರುವತ್ತ ಹೋಗುತ್ತಿದ್ದವು. ನಾವೂ ಆ ಪ್ರವಾಹದಲ್ಲಿ ಸೇರಿಕೊಂಡೆವು. ಅಂತು ಹೀಗೆ ಪ್ರದಕ್ಷಿಣೆ ಬಂದು ಕಾರ್ಯಕ್ರಮಕ್ಕೆ ತಲುಪಲು ಮತ್ತೆ ಒಂದು ಗಂಟೆ ಬೇಕಾಯಿತು. ಅಂದರೆ ಸುಮಾರು ಒಂಬತ್ತೂ ಮುಕ್ಕಾಲಿಗೆ ಬೆಳಗಿನ ತಿಂಡಿ ಮುಗಿಸಿ ಹೋಟೆಲಿನಿಂದ ಹೊರಟಿದ್ದ ನಾವು ಸಭಾಂಗಣ ತಲುಪುವಾಗ ಹನ್ನೆರಡಕ್ಕೆ ಹತ್ತಿರವಾಗಿತ್ತು. ನಾವು ಭಾಗವಹಿಸಬೇಕಾಗಿದ್ದ ಕಾರ್ಯಕ್ರಮ ಹೇಗೂ ಸರಿಯಾದ ಸಮಯಕ್ಕೆ ಅಂದರೆ ಸರಿಯಾಗಿ ಒಂದೂವರೆ ಗಂಟೆ ತಡವಾಗಿಯೇ ಆರಂಭವಾಗುವುದರಲ್ಲಿದ್ದುದರಿಂದ ನಾವು ತಲುಪಿದ್ದು ತಡವೇನೂ ಆಗಿರಲಿಲ್ಲ.
ಅರಮನೆ ಮೈದಾನದಲ್ಲಿ ಸುಮಾರು ಐವತ್ತು ಸಾವಿರವೋ ಒಂದು ಲಕ್ಷವೋ ಆಸನಗಳು ನಿಲ್ಲುವಷ್ಟು ಅಥವಾ ಕುಳಿತುಕೊಳ್ಳುವಷ್ಟು ದೊಡ್ಡ ಹಂದರ. ಪ್ರವಾಹದೋಪಾದಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅನಿವಾರ್ಯ ಅವಕಾಶವೆಂದು ಬಂದಿದ್ದ ವಿದ್ಯಾರ್ಥಿಗಳೂ ಅವರನ್ನು ಕರೆದುಕೊಂಡು ಬಂದಿದ್ದ ಪ್ರಾಧ್ಯಾಪಕರೂ, ಪಕಿಯರೂ ಹಂದರದ (ಪಂದರದ-ಪಂಡಾಲಿನ-ಪೆಂಡಾಲಿನ) ಒಳಗೆ ನುಗ್ಗಿ ಸಭಾಂಗಣವೆಲ್ಲ ತುಂಬಿತು. ಮುಖ್ಯ ಭಾಷಣ ಆರಂಭವಾಯಿತು.
ಬಾಷಣ ಆರಂಭವಾದಾಗ ಒಳಬಂದಿದ್ದ ಜನಸಾಗರ ಮತ್ತೆ ಹೊರ ಹೊರಡಲು ಆರಂಭವಾಯಿತು. ಕರ್ನಾಟಕದ ಮೂಲೆಮೂಲೆಗಳಿಂದ ಬಂದಿದ್ದ ವಿದ್ಯಾರ್ಥಿಸಾಗರ ಮತ್ತೆ ಪ್ರವಾಹದೋಪಾದಿಯಲ್ಲಿ ಹೊರ ಹರಿಯಲಾರಂಭಿಸಿತು. ಕುರ್ಚಿಗಳೆಲ್ಲ ಭರ್ತಿಯಾಗಿ ಮತ್ತೆ ಹತ್ತು ನಿಮಿಷಗಳಲ್ಲಿ ಖಾಲಿಯಾದವು. ಇಲ್ಲಿ ಖಾಲಿಯಾದಂತೆ ಹೊರಗಡೆ ಊಟದ ಕೌಂಟರ್ ಗಳು ತುಂಬಿ ತುಳುಕಿದವು. ಅಲ್ಲಿ ಅಷ್ಟೂ ಜನರಿಗೆ ಊಟದ ವ್ಯವಸ್ಥೆ ಇತ್ತು. ಅಲ್ಲೆಲ್ಲೋ ತಾತ್ಕಾಲಿಕ ಮೂತ್ರದೊಡ್ಡಿಗಳ ಕಡೆ ಹೋಗಿದ್ದ ನಮ್ಮ ಮಕ್ಕಳು ಅಲ್ಲೇ ಪಕ್ಕದಲ್ಲಿ ಅಡಿಗೆ ಮಾಡುವುದನ್ನೂ ನೋಡಿದ್ದರಿಂದ ಊಟ ಮಾಡಲು ಅವರಿಗೆ ಮನಸ್ಸು ಇರಲಿಲ್ಲ. ಯಾವುದಾದರೂ ಹೋಟೆಲಿಗೇ ಹೋಗೋಣವೆಂಬುದು ಅವರ ಒತ್ತಾಯವಾಗಿತ್ತು. ಇಲ್ಲಿಯವರು ಅಡುಗೆ ಮಾಡುವ ಕ್ರಮ ನಮ್ಮ ಊರಿನ ಹಾಗಿಲ್ಲ ಎನ್ನುವುದು ಅವರ ವಾದವಾಗಿತ್ತು. ಆದರೆ ನನ್ನ ವಾದ ಬೇರೆಯಿತ್ತು. ಯಾವುದೇ ಭೂರಿ ಭೋಜನ ನಡೆಯುವಲ್ಲಿ ತರಕಾರಿ ಹೆಚ್ಚುವುದನ್ನಾಗಲೀ, ಬೆವರಿಳಿಸುತ್ತ ಮತ್ತು ಅದನ್ನು ಅರಿಸುತ್ತ ಅಡುಗೆ ಮಾಡುವುದನ್ನಾಗಲೀ ಅಡುಗೆಯವರು ಉಟ್ಟ ತೊಟ್ಟ ಬಟೆಯನ್ನಾಗಲೀ ನೋಡಬಾರದು, ಒಂದು ವೇಳೆ ನೋಡಿದರೂ ಇತರರಿಗೆ ಹೇಳಬಾರದು, ಯಾರಾದರೂ ಹೇಳಿದರೂ ಅದನ್ನು ನಾವು ಯಾರೂ ತಲೆಗೆ ತೆಗೆದುಕೊಳ್ಳಬಾರದು ಇತ್ಯಾದಿ. ಅಷ್ಟೇ ಅಲ್ಲ; ಇಷ್ಟು ದೂರ ಬೆಂಗಳೂರಿಗೆ ಈ ಒಂದು ಕಾರ್ಯಕ್ರಮಕ್ಕಾಗಿಯೇ ಬಂದು ಭಾಷಣವನ್ನು ನೀವು ಹೇಗೂ ಕೇಳಲಿಲ್ಲ, ಹೋಗಲಿ ವೇದಿಕೆಯಲ್ಲಿದ್ದ ದೊಡ್ಡ ಮನುಷ್ಯರ ಫೋಟೋ ಕೂಡ ತೆಗೆಯಲಿಲ್ಲ, ಇಲ್ಲಿ ಬಂದೂ ನೀವು ತೆಗೆದದ್ದು ಸೆಲ್ಫೀ ಮಾತ್ರ. ಆದ್ದರಿಂದ ನಾಳೆ ಹೊಟ್ಟೆ ಹಾಳಾದರೂ ತೊಂದರೆಯಿಲ್ಲ, ಇಂದು ಇಲ್ಲಿಯ ಊಟನ್ನಾದರೂ ನಾವು ಹೊಟ್ಟೆಗೆ ಹಾಕಿಕೊಳ್ಳದೆ ಹೋದರೆ ನಾವು ಈ ಕಾರ್ಯಕ್ರಮಕ್ಕೆ ಬಂದದ್ದಕ್ಕೆ ಯವ ಸಾಕ್ಷಿಯೂ ಇಲ್ಲದಂತಾದೀತು ಅಂತೆಲ್ಲ ಹೇಳಿ ಮನವರಿಕೆ ಮಾಡಬೇಕಾಯಿತು. ನಮ್ಮ ಮಕ್ಕಳಿಗೂ ಹೌದೆನಿಸಿತು. ಅಥವಾ ಹೋಟೆಲಿನಲ್ಲಿ ಊಟ ಕೊಡಸಲು ಮೇಷ್ಟ್ರ ಬಳಿ ದುಡ್ಡಿಲ್ಲ ಅಂತ ಕರುಣೆ ಬಂತೋ ಏನೋ. ಅಂತೂ ನಮ್ಮ ಒತ್ತಾಯದ ಮೇರೆಗೆ ನಮ್ಮ ವಿದ್ಯಾರ್ಥಿಗಳು ಊಟದ ಕೌಂಟರಿನತ್ತ ನಮ್ಮೊಂದಿಗೆ ನಡೆದರು. ನಮ್ಮ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಆ ಊಟ ಇಷ್ಟವಾದಂತೆ ತೋರಲಿಲ್ಲ. ಊಟದ ಕೊನೆಗಿದ್ದ ಕ್ಯಾವೆಂಡಿಶ್ ಬಾಳೆಹಣ್ಣನ್ನು ದೂರವಂತಿಲ್ಲದಿದ್ದುದರಿಂದ ನಾನು ಆ ಕ್ಷಣಕ್ಕೆ ಬಚಾವಾದೆ ಅನ್ನಿ.
ಅಂತೂ ಅಲ್ಲಿಂದ ಹೊರಟು ಮತ್ತೆ ಒಂದು ಗಂಟೆ ನಡೆದು ಬಸ್ಸು ನಿಂತಿದ್ದಲ್ಲಿಗೆ ತಲುಪಿ ಮತ್ತೆ ಬಸ್ಸಿನಲ್ಲಿ ಲಾಲಭಾಗಿಗೆ ತಲುಪುವಾಗ ಸಂಜೆ ಐದಾಗಿತ್ತು. ಲಾಲಭಾಗಿನಿಂದ ಈ ಕಾಲೇಜು ಹುಡುಗ ಹುಡುಗಿಯರನ್ನು ಹೊರಡಿಸುವುದೇ ದೊಡ್ಡ ಕೆಲಸ. ಅಲ್ಲಿದ್ದ ಎಲ್ಲ ಹೂಗಳ ಜೊತೆ ಗಿಡಗಳ ಜೊತೆ ಇವರಿಗೆ ಸೆಲ್ಫೀ ಆಗಬೇಕು. ಇವರೆಲ್ಲ ಹೀಗೆ ಕೈಯಲ್ಲಿಸಾಲದೆ ಕೋಲಿನಲ್ಲಿ ಸೆಲ್ಫೀ ತೆಗೆಯುತ್ತ ಹಿಂದೆ ಉಳಿದಾಗ ನಾನು ಮುಂದೆ ಹೋದವನು ಇವರಿಗಾಗಿ ಕಾಯುತ್ತ ನಿಲ್ಲಬೇಕಾಗುತ್ತಿತ್ತು. ಹಾಗೆ ನಿಂತಾಗ ಅಲ್ಲೊಬ್ಬ ಕನಿಷ್ಟ ಎಪ್ಪತ್ತು ವರ್ಷ ಪ್ರಾಯದ ಒಬ್ಬ ವಿದೇಶಿ ಬಿಳಿಯ ಪ್ರಜೆ ಯಾವುದೋ ಸತ್ತ ಮರದ ಕುತ್ತಿಯ ಬುಡಕ್ಕೆ ಎರಡು ಫೀಟು ಉದ್ದದ ಕೆಮರಾವನ್ನು ಇಟ್ಟು ತದೇಕವಾಗಿ ನೋಡುತ್ತಿದ್ದರು. ಅವರೇನನ್ನು ನೋಡಿ ಫೋಟೋ ಹೊಡೆಯುತ್ತಾರೆ ಅಂತ ನಾನೂ ಅವರಿಗೆ ಉಪದ್ರವಾಗದಂತೆ ಬಗ್ಗಿ ನೋಡಿದೆ. ಏನೂ ಕಾಣಲಿಲ್ಲ. ಕನ್ನಡಕ ಹಾಕಿ ನೋಡಿದೆ. ಆಗ ಕಂಡಿತು. ಅಲ್ಲಿ ಎರಡು ಮೂರು ಇರುವೆಗಳು!!
ನಾವೆಲ್ಲ ಸೆಲ್ಫೀಯಲ್ಲಿ ಮಗ್ನವಾದರೆ ಈ ಫೋರೀನರ್ ಈ ಬಡಪಾಯಿ ಇರುವೆಗಳ ಫೋಟೋ ಹಿಡಕೊಂಡು ತನ್ನ ದೇಶಕ್ಕೆ ಹೋಗ್ತಾನೆ. ಬಹುಶಃ ಅದೇ ವ್ಯತ್ಯಾಸ. ಮರುದಿನ ಬೆಳಗ್ಗೆ ಆರಕ್ಕೆ ಮತ್ತೆ ಬೀಸೀರೋಡಿನಲ್ಲಿದ್ದೆವು ಅನ್ನುವಲ್ಲಿಗೆ ಮಂಗಳಂ.
Be the first to comment on "ಒಂದು ಪ್ರವಾಸದ(ಪ್ರಯಾಸದ) ಕಥೆ"