ಸತ್ಯ, ಪ್ರಾಮಾಣಿಕತೆಯ ನಡುವೆ

  • ಡಾ.ಅಜಕ್ಕಳ ಗಿರೀಶ ಭಟ್ಟ
  • ಅಂಕಣ: ಗಿರಿಲಹರಿ

ಯಾವುದೇ ಸಂಸ್ಕೃತಿಯಾದರೂ ಕೆಲವು ಮೌಲ್ಯಗಳನ್ನು ಹೊಂದಿರುತ್ತದೆ. ಅಂಥ ಮೌಲ್ಯಗಳನ್ನು ಎಲ್ಲರೂ ಪಾಲಿಸುತ್ತಾರೆ ಎಂದಲ್ಲ. ಪಾಲಿಸದಿದ್ದರೂ ಕೆಲವು ಆದರ್ಶಗಳು, ಮೌಲ್ಯಗಳು ಇರಲೇಬೇಕು ಅಂತ ಎಲ್ಲರೂ ಒಪ್ಪುತ್ತಾರೆ. ಪ್ರಾಮಾಣಿಕತೆ ಅನ್ನುವುದು ಒಂದು ಮಹಾಮೌಲ್ಯವೆಂದು ಸಾಮಾನ್ಯವಾಗಿ ಜಗತ್ತಿನ ಎಲ್ಲ ಸಂಸ್ಕೃತಿಗಳೂ ನಂಬುತ್ತವೆ. ಸತ್ಯ ಎನ್ನುವ ಮೌಲ್ಯ ಕೂಡ ಪ್ರಾಮಾಣಿಕತೆಯ ಜೊತೆಗೇ ಬರುವಂಥದ್ದು. ಇವೆರಡರ ಮಧ್ಯೆ ಸೂಕ್ಷ್ಮ ವ್ಯತ್ಯಾಸ ಮಾಡಬಹುದಾದರೂ ಸಾಮಾನ್ಯ ಬಳಕೆಯಲ್ಲಿ ಇವು ಒಟ್ಟೊಟ್ಟಿಗೇ ಅಥವಾ ಒಂದೇ ಅರ್ಥದಲ್ಲಿ ಬಳಕೆಯಾಗುತ್ತವೆ.

ಸತ್ಯ, ಪ್ರಾಮಾಣಿಕತೆಗಳು ಮೌಲ್ಯಗಳೇ ಅಲ್ಲವೇ ಎಂಬುದು ಸಮಸ್ಯೆಯಲ್ಲ. ಆದರೆ ಯಾವುದು ಸತ್ಯ ಅಥವಾ ಪ್ರಾಮಾಣಿಕತೆ ಎಂಬ ಬಗ್ಗೆ ಕೆಲವೊಮ್ಮೆ ಭಿನ್ನ ಭಿನ್ನ ಅಭಿಪ್ರಾಯಗಳು ಇರಬಹುದು.ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗಲೊಮ್ಮೆ ಸತ್ಯ ಹೇಳುವ ಬಗೆಗಿನ ಒಂದು ಕತೆಯನ್ನು ನಮ್ಮಅಧ್ಯಾಪಕರು ಹೇಳಿದ್ದರು. ಅದನ್ನು ಆ ಬಳಿಕ ತುಂಬ ಕಡೆ ನಾನು ಕೇಳಿದ್ದೇನೆ. ಯಾರೋ ಒಬ್ಬದಾರಿಹೋಕ ಕಾಡುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದನಂತೆ. ದರೋಡೆಕೋರರನ್ನು ನೋಡಿ ಓಡಿ ಬಂದು ತಪಸ್ವಿಯೊಬ್ಬನ ಆಶ್ರಮವನ್ನು ಹೊಕ್ಕು ಒಳಗೆ ಆಶ್ರಯ ಪಡೆದನಂತೆ. ಕೆಲವೇ ಕ್ಷಣಗಳಲ್ಲಿ ದರೋಡೆಕೋರರು ಅವನನ್ನು ಹುಡುಕಿಕೊಂಡು ಬಂದು ಈ ಕಡೆಯಾರಾದರೂ ದಾರಿಹೋಕರು ಬಂದರೇ ಎಂದು ತಪಸ್ವಿಯನ್ನು ಕೇಳಿದರಂತೆ. ತಪಸ್ವಿ ಮತ್ತೊಂದು ದಿಕ್ಕು ತೋರಿಸಿ ಆ ಕಡೆ ಯಾರೋ ಓಡಿಹೋದಂತಾಯಿತು ಎಂದು ಹೇಳಿ ದರೋಡೆಕೋರರ ದಿಕ್ಕು ತಪ್ಪಿಸಿದನಂತೆ. ಈ ತಪಸ್ವಿ ಸತ್ಯವಂತನೋ ಸುಳ್ಳುಗಾರನೋ ಎಂದು ತರಗತಿಯಲ್ಲಿದ್ದ ಮಕ್ಕಳನ್ನು ನಮ್ಮಅಧ್ಯಾಪಕರು ಕೇಳಿದ್ದರು. ಹೆಚ್ಚು ಕಡಿಮೆ ಅರ್ಧದಷ್ಟು ಮಕ್ಕಳು ಅವನು ಸತ್ಯವಂತನೆಂದೂ ಇನ್ನುಳಿದವರು ಸುಳ್ಳುಗಾರನೆಂದೂ ತೀರ್ಪಿತ್ತು ಕೈಯೆತ್ತಿದರು. ಆಗ ಮೇಷ್ಟರು ಹೌದು, ಇದು ತೀರ್ಮಾನಿಸಲು ಕಷ್ಟವಾದ ವಿಚಾರ ಎಂದು ಹೇಳಿ ಪ್ರಶ್ನೆಯನ್ನು ಬದಲಿಸಿದರು. ಹೇಳಿ ಮಕ್ಕಳೇ, ಆ ತಪಸ್ವಿ ಮಾಡಿದ್ದು ಸರಿಯೋ ತಪ್ಪೋ? ಸರಿ ಎನ್ನುವವರು ಕೈಯೆತ್ತಿಎಂದು ಮೇಷ್ಟರು ಹೇಳಿದಾಗ ಎಲ್ಲರೂಕೈಯೆತ್ತಿದರು. ಆಗ ಮೇಷ್ಟರು ಕೆಲವೊಮ್ಮೆಇಂಥ ಸಮಸ್ಯೆ ಬಂದಾಗ ನಾವು ಹೇಳಿದ್ದು ಸತ್ಯವೋ ಸುಳ್ಳೋ ಎನ್ನುವುದು ಮುಖ್ಯವಾಗುವುದಿಲ್ಲ. ಅದಕ್ಕಿಂತಲೂ ನಾವು ಮಡಿದ ಕೆಲಸ ಸರಿಯಾದದ್ದೋತಪ್ಪಾದದ್ದೋ ಎನ್ನುವುದು ಹೆಚ್ಚು ಮುಖ್ಯವಾಗುತ್ತದೆ ಎಂದರು. ಬಹುಶಃ ನಾವು ಚಿಕ್ಕ ಮಕ್ಕಳಾಗಿದ್ದರೂ ನಮಗೆ ಅದು ತಕ್ಕಮಟ್ಟಿಗೆ ಅರ್ಥವಾಗಿತ್ತು ಅನಿಸುತ್ತದೆ. ಹಾಗೆ ಅರ್ಥವಾಗಿದ್ದರಿಂದಲೇ ನನಗೆ ಅವರು ಹೇಳಿದ ಆ ಕಥೆ ನೆನಪಿನಲ್ಲಿ ಉಳಿದದ್ದಿರಬಹುದು.

ನಾನು ಕಾಲೇಜಿನಲ್ಲಿರುವಾಗಒಬ್ಬರು ಮೇಷ್ಟರು, ಯಾರಿಗೆ ಸತ್ಯವನ್ನು ತಿಳಿಯಲು ಅಧಿಕಾರವಿರುವುದೋ ಅವರಲ್ಲಿ ಸತ್ಯ ಹೇಳಬೇಕು; ಉಳಿದವರಲ್ಲಿ ಸುಳ್ಳು ಹೇಳಿದರೂ ಅದು ಅಸತ್ಯವೆಂದಾಗುವುದಿಲ್ಲ ಎಂದು ಹೇಳಿದ್ದರು. ಉದಾಹರಣೆಗೆ, ತರಗತಿ ತಪ್ಪಿಸಿ ಸಿನಿಮಾಕ್ಕೆ ಹೋದರೆ ಮರುದಿನ ಮೇಷ್ಟರು ಕೇಳಿದಾಗ ಸಿನಿಮಾದ ಬದಲು ಜ್ವರ ಇತ್ಯಾದಿ ಬೇರೇನಾದರೂ ಹೇಳಿದರೆ ಅದು ಸುಳ್ಳು ಆಗುತ್ತದೆ. ಅಸತ್ಯ ಆಗುತ್ತದೆ. ಹಾಗೆಯೇ ತಂದೆತಾಯಲ್ಲಿ ಸತ್ಯ ಹೇಳಬೇಕಾದ ವಿಚಾರವಿದ್ದಾಗ ಸತ್ಯವನ್ನೇ ಹೇಳಬೇಕು ಅಂದಿದ್ದರು. ತಂದೆ ತಾಯಲ್ಲೂ ಸತ್ಯ ಹೇಳುವ ಅಗತ್ಯವಿಲ್ಲದ ಕೆಲವು ಸತ್ಯಗಳಿರುತ್ತವೆ ಎಂದೂ ಹೇಳಿದ್ದರು. ಅದಕ್ಕೆಉದಾಹರಣೆ ನೀಡಿರಲಿಲ್ಲ. ಜೀವನಾನುಭವವಾದಂತೆ ಉದಾಹರಣೆಗಳು ನಿಮಗೆ ಸಿಗಬಹುದು ಎಂದಿದ್ದರು. ಯಾರಿಗೆ ಸತ್ಯ ತಿಳಿವ ಅರ್ಹತೆಯಿದೆ? ಯಾರಿಗಿಲ್ಲ ಎಂದು ನಿರ್ಧರಿಸುವವರು ಯಾರು? ಅದೂ ಕಷ್ಟವೇ?

ಮುಂದೆ, ಸ್ನಾತಕೋತ್ತರ ತರಗತಿಗೆ ತಲುಪಿದಾಗ ಸತ್ಯಒಂದಲ್ಲ; ಹಲವು ಸತ್ಯಗಳಿರುತ್ತವೆ ಅಂತೆಲ್ಲ ಬೋಧನೆಗಳು ದೊರೆಯಲಾರಂಭಿಸಿದವು. ಈಗಂತೂ ಬಹುಸಂಸ್ಕೃತಿಗಳ, ಬಹುಮುಖಿ ಚಿಂತನೆಗಳ ಬಗ್ಗೆ ವಿಶೇಷ ಒತ್ತು ನೀಡುವ ನಮ್ಮ ಶೈಕ್ಷಣಿಕ ವಲಯದ ಮಂದಿ ಬಹುಸತ್ಯಗಳ ಮಾತುಗಳನ್ನು ಆಡುತ್ತಿದ್ದಾರೆ. ಎಲ್ಲರ ಅಭಿಪ್ರಾಯಗಳಿಗೂ ಬೆಲೆ ಇದೆಎನ್ನುವುದನ್ನು ಹೇಳುವ ಭರದಲ್ಲಿ ಸತ್ಯಗಳು ಹಲವಿವೆ ಎನ್ನಲು ಆರಂಭಿಸಿದ್ದಾರೆ. ಅಭಿಪ್ರಾಯಗಳು ಬೇರೆ, ಸತ್ಯಗಳು ಬೇರೆ. ಭಾರತಕ್ಕೆ ಸ್ವಾತಂತ್ರ್ಯ ಬರಲು ಗಾಂಧಿಯೇ ಕಾರಣ ಎಂಬುದು ಅಭಿಪ್ರಾಯ. ೧೯೪೭ರಲ್ಲಿ ಸ್ವಾತಂತ್ರ್ಯದೊರೆಯಿತು ಎನ್ನುವುದು ವಾಸ್ತವ ಮತ್ತು ಸತ್ಯ. ಮೇಲಿನ ಗಾಂಧೀಜಿ ಕುರಿತ ಅಭಿಪ್ರಾಯವನ್ನು ನೀವು ಒಪ್ಪಬಹುದು, ಬಿಡಬಹುದು, ನಿಮ್ಮದೇಇನ್ನೊಂದುಅಭಿಪ್ರಾಯ ಹೇಳಬಹುದು. ಆದರೆ, ಸ್ವಾತಂತ್ರ್ಯದೊರಕಿದ್ದು ೧೯೪೭ ಎಂಬುದು ಒಂದೇ ಸತ್ಯ.  ಹಾಗೆಂದು ಭಿನ್ನ ಭಿನ್ನ ಅಭಿಪ್ರಾಯ ಹೊಂದುವ ಸ್ವಾತಂತ್ರ್ಯ ನಮಗೆ ಇದೆ ಎಂದ ಮಾತ್ರಕ್ಕೆಎಲ್ಲಾ ಅಭಿಪ್ರಾಯಗಳೂ ಸಿಂಧು ಆಗಬೇಕಿಲ್ಲ. ಕೆಲವು ಅಭಿಪ್ರಾಯಗಳು ಮೇಲು ನೋಟಕ್ಕೇ ತಪ್ಪು ಎನಿದರೆ ಅಂಥ ಅಭಿಪ್ರಾಯ ಹೊಂದುವುದೇ ತಪ್ಪು ಎನ್ನಲು ದಾಕ್ಷಿಣ್ಯವೇಕೆ? ತಮ್ಮ ತಮ್ಮ ಪೂರ್ವಗ್ರಹಗಳನ್ನು, ತಪ್ಪು ಅಭಿಪ್ರಾಯಗಳನ್ನು ಹಾಗೆಯೇ ಉಳಿಸಿಕೊಳ್ಳಲು ಮತ್ತು ಹರಡಲು ಕೆಲವರು ಈ ಬಹುಸತ್ಯಗಳ ಕಲ್ಪನೆಯನ್ನು ಬಳಸಿಕೊಳ್ಳುತ್ತದ್ದಾರೇನೋ ಎನ್ನುವ ಅನುಮಾನವೂ ನನಗಿದೆ.

ಈಚೆಗೆ ನನಗೆ ಈ ಸತ್ಯ, ಪ್ರಾಮಾಣಿಕತೆಯ ಕುರಿತು ಜಿಜ್ಞಾಸೆ ಬರಲು ನನ್ನ ಅನುಭವದಲ್ಲಾದ ಒಂದು ಘಟನೆ ಕಾರಣವಾಯಿತು. ಅದಾದದ್ದು ಹೀಗೆ: ನಾನು ಖಾಯಂ ಹಣ್ಣು, ತರಕಾರಿ ಖರೀದಿಸುವ ಅಂಗಡಿಯಲ್ಲಿ ಇತ್ತೀಚೆಗೊಮ್ಮೆ ಆರೇಳು ಏಪಲ್‌ಗಳನ್ನು ಆಯ್ದು ತೂಕ ಮಾಡಲು ಅಂಗಡಿಯ ಕೆಲಸದ ಹುಡುಗನಿಗೆ ನೀಡಿದೆ. ಅವನು ತೂಕ ಮಾಡಿ, ನಾನೇ ತೆಗೆದುಕೊಂಡು ಹೋಗಿದ್ದ ಚೀಲಕ್ಕೆ ಹಾಕಿ ಮಾಲಿಕನಿಗೆ ಕೇಳುವಂತೆ ಒಂದು ನಾನೂರೈವತ್ತು ಏಪಲ್‌ ಎಂದ. ಒಂದು ಎಂದು ಅವನು ಉಚ್ಚರಿಸಿದ್ದು ಸ್ವಲ್ಪ ಸಣ್ಣ ಸ್ವರದಲ್ಲಾಗಿತ್ತಾದ್ದರಿಂದ ಮಾಲಿಕ ಕೇವಲ ಕಿಲೋಗೆ ನೂರರಂತೆ ನಾನೂರೈವತ್ತಕ್ಕೆ ಲೆಕ್ಕ ಹಾಕಿ ನಲವತ್ತೈದು ರೂಪಾಯಿ ಎಂದ. ಈ ಮಾಲಿಕರು ನಲವತ್ತೈದು ಎಂದದ್ದು ಮತ್ಯಾರಿಗೋ ಮತ್ತೇನನ್ನೋತೂಕ ಮಾಡುತ್ತಿದ್ದ ಕೆಲಸದ ಹುಡುಗನಿಗೆ ಕೇಳಿಸಿರಲಿಕ್ಕಿಲ್ಲ. ಅಂತೂ ನನಗೆ ಧರ್ಮಸಂಕಟ ಬಂತು. ನನಗೆ ಗೊತ್ತು ಅದಕ್ಕೆ ನಾನು ನೂರನಲವತ್ತೈದು ರೂಪಾಯಿ ಕೊಡಬೇಕು ಅಂತ. ಆದರೆ ನಾನೀಗ ಅದರಲ್ಲಿ ಒಂದು ಕಿಲೊ ನಾನೂರೈವತ್ತು ಗ್ರಾಂಇದೆ ಎಂದರೆ, ಮಾಲಿಕ ಕೆಲಸದವನ ಪ್ರಾಮಾಣಿಕತೆಯನ್ನು ಅಥವಾ ದಕ್ಷತೆಯನ್ನು ಪ್ರಶ್ನಿಸುತ್ತಾನೆ. ನನ್ನೆದುರು ಅಲ್ಲದಿದ್ದರೂ ಆನಂತರವಾದರೂ ಅವನಿಗೆ ಕ್ಲಾಸು ತೆಗೆದುಕೊಳ್ಳದೆ ಇರಲಾರನು. ಇನ್ನು ಕೆಲಸದ ಹುಡುಗನಾದರೂ ಅಷ್ಟೆ, ತಾನು ಸರಿಯಾಗಿಯೇ ಒಂದೂ ನಾನೂರೈವತ್ತು ಎಂದು ಹೇಳಿದ್ದರೂ ಈ ಮಾಲಿಕ ಯಾಕೆ ತನ್ನನ್ನು ಸುಮ್ಮನೇ ಬೈತಾನೆ ಅಂತ ಅಂದುಕೊಳ್ಳಬಹುದು. ಬರೀ ಒಂದು ನೂರುರೂಪಾಯಿಯಲ್ಲಿ ಮಾಲಿಕ ಹೇಗೂ ಮುಳುಗಿ ಹೋಗುವವನಲ್ಲ ಎಂದುಕೊಂಡೆ. ಎಷ್ಟಾದರೂ ನನ್ನ ಅಪ್ರಾಮಾಣಿಕತೆಗೆ ನಾನೊಬ್ಬನೇ ಸಾಕ್ಷಿ. ಅದರಿಂದ ಮನಸ್ಸಿಗೆ ನೋವಾದರೆ ನನಗೆ ಮತ್ರ ಆಗಬೇಕು. ನಾನೀಗ ಪ್ರಾಮಾಣಿಕನಾದರೆ ಮಾಲಿಕನಿಗೂ ಮನಸ್ಸಿಗೆ ಕಿರಿಕಿರಿ, ಕೆಲಸದ ಹುಡುಗನಿಗೂ ಕಿರಿಕಿರಿ. ಹೀಗೆ ನನ್ನ ಅಪ್ರಾಮಾಣಿಕತೆಗೆ ಒಂದು ಸಮರ್ಥನೆಯಿದೆ ಎಂದುಕೊಂಡು ಕೇವಲ ನಲವತ್ತೈದು ರೂಪಾಯಿ ನೀಡಿ ನಾನು ಮನೆಗೆ ಬಂದೆ. ಆದರೂ ಮನಸಿಗೆ ಪೂರ್ತಿ ಸಮಾಧಾನವಾಗಲಿಲ್ಲ. ಮತ್ತೂ ಒಂದು ಯೋಚನೆ ನನ್ನ ಮನಸ್ಸಿಗೆ ಬಂತು. ಯಾರು ಯಾರಿಗೋ ಮನಸ್ಸಿಗೆ ಕಿರಿಕಿರಿಯಾದೀತು ಅಂತ ಆ ಕಿರಿಕಿರಿಯನ್ನು ನಾನು ಯಾಕೆ ಹೊತ್ತುಕೊಳ್ಳಬೇಕಾಗಿತ್ತು ಅಂತ ನನ್ನ ಮನಸ್ಸೇ ಕೇಳಿತು. ಆ ಹುಡುಗನನ್ನು ತಿದ್ದದೇ ಇದ್ದುದರಿಂದ ಅವನು ಇನ್ನು ಮುಂದೆಯೂ ಇಂಥ ತಪ್ಪುಗಳನ್ನು ಅನುದ್ದಿಶ್ಯವಾಗಿ ಮಾಡುತ್ತಲೇ ಇರಬಹುದಲ್ಲ ಅಂತಲೂ ಮನಸ್ಸು ಹೇಳಿತು.

ಮರುದಿನ ಮತ್ತೇನೋ ತರಲು ಅದೇ ಅಂಗಡಿಗೆ ಹೋದಾಗ ಹಿಂದಿನದ್ದು ಯಾವುದೋ ನೂರು ರೂಪಯಿ ನನ್ನದು ಕೊಡಲು ಬಾಕಿಯಾಗಿತ್ತು, ಮರೆತಿದ್ದೆ ಎಂದು ಹೇಳಿ ಮಾಲಿಕನಿಗೆ ಬಿಲ್ಲಿನಲ್ಲಿ ನೂರು ರೂಪಾಯಿ ಹೆಚ್ಚು ಸೇರಿಸಿ ಕೊಟ್ಟೆ. ಅಲ್ಲಿಗೆ ಅದು ಪರಿಹಾರವಾಯಿತು. ಆದರೂ ಸತ್ಯ- ಪ್ರಾಮಾಣಿಕತೆ ಕುರಿತ ಇಂಥ ಫಲಾಸಫಿಕಲ್ ಪ್ರಶ್ನೆಗಳು ಸುಲಭ ಉತ್ತರದವುಗಳಲ್ಲ.

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಸತ್ಯ, ಪ್ರಾಮಾಣಿಕತೆಯ ನಡುವೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*