ವ್ಹಾ ವಾಹನ

ಸಣ್ಣ ಮಕ್ಕಳಿಂದ ವಯಸ್ಸಾಗುವ ಹಂತದವರೆಗೆ ನಾವು ವಾಹನಗಳನ್ನು ಗಮನಿಸುವ ರೀತಿಯೇ ಬೇರೆ.

  • ಡಾ. ಅಜಕ್ಕಳ ಗಿರೀಶ ಭಟ್
  • www.bantwalnews.com ಅಂಕಣಗಿರಿಲಹರಿ

 ವಾಹನದ ಬಗ್ಗೆ ಆಕರ್ಷಣೆ ಮನುಷ್ಯರಿಗೆ ಬಹುಶಃ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮೂಡುತ್ತದೆಯೆಂದು ತೋರುತ್ತದೆ. ಚಿಕ್ಕ ಮಕ್ಕಳಿಗೂ ಆಟದ ಬೈಕುಗಳು, ಕಾರುಗಳು, ಜೀಪುಗಳು, ಲಾರಿಗಳು ಹೀಗೆ ಎಲ್ಲ ವಾಹನಗಳೂ ಬಹಳ ಇಷ್ಟ ನೋಡಿ. ಅದರಲ್ಲೂ ಗಂಡು ಮಕ್ಕಳಿಗೆ. ಇದೇ ಆಕರ್ಷಣೆ ಮುಂದಕ್ಕೆ ಯೌವನ ಬರುತ್ತಿದ್ದಂತೆ ಹುಡುಗರೆಲ್ಲ ಅಪ್ಪ ಅಮ್ಮಂದಿರನ್ನು ಬೈಕಿಗಾಗಿ ಪೀಡಿಸುವಂತೆ ಅಥವಾ ಅಪ್ಪ ಅಮ್ಮನಲ್ಲಿ ಹಣವಿಲ್ಲದಿದ್ದರೆ ಸ್ವಂತ ಕೂಲಿ ನಾಲಿ ಮಾಡಿಯಾದರೂ ಒಂದು ಬೈಕು ಖರೀದಿಸುವಂತೆ ಮಾಡುತ್ತದೆ. ಈಗೀಗ ಹುಡುಗಿಯರೂ ಸ್ಕೂಟರಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆಂದು ಬಲ್ಲ ಮೂಲಗಳು ಹೇಳುತ್ತಿವೆ. ಆ ಹುಡುಗಿಯರು ಚಿಕ್ಕಂದಿನಲ್ಲಿ ಆಟವಾಡಲು ಹೆಣ್ಣುಗೊಂಬೆಗಳನ್ನು ಕೇಳುತ್ತಲಿದ್ದರೇ ಅಥವಾ ಕಾರು ಬೈಕುಗಳನ್ನು ಕೇಳುತ್ತಲಿದ್ದರೇ ಅಂತ ಸಂಶೋಧನೆ ಮಾಡಬೇಕಾಗಿದೆ.

ನಾವೆಲ್ಲ ಚಿಕ್ಕ ಮಕ್ಕಳಾಗಿದ್ದಾಗ ನಮ್ಮೂರಿಗೆ ವಾಹನ ಬರುವುದೇ ಅಪರೂಪವಾಗಿತ್ತು. ಅದರಲ್ಲೂ ಮಳೆಗಾಲದಲ್ಲಿ ಬಂದರೆ ಪುನಃ ಹೋಗುವುದು ಕಷ್ಟವಾಗುತ್ತಿತ್ತು. ಅಂಥ ಸಂದರ್ಭಗಳಲ್ಲಿ ನಮಗೆ ಅಂದರೆ ಮಕ್ಕಳಿಗೆ ಅವುಗಳನ್ನು ದೂಡುವ ಸದವಕಾಶ ಸಿಗುತ್ತಿತ್ತು. ಅದರಲ್ಲೂ ವಿಶೇಷವಾಗಿ ಅಂಬಾಸಡರು ಕಾರು ಬಂದರೆ ಹೀಗಾಗುವುದಿತ್ತು. ಆಗ ಮಳೆಗಾಲದ ಜಾರುರಸ್ತೆಯಲ್ಲಿ ಸಿಕ್ಕಿ ಬೀಳುತ್ತಿದ್ದ ಕಾರನ್ನು ನೂಕಬೇಕಾಗುತ್ತಿತ್ತು. ಹಾಗೆ ನೂಕುವಾಗ ಹಿಂದಿನ ಚಕ್ರದಿಂದ ಕೆಸರು ಮಣ್ಣು ಚಡ್ಡಿಗಳಲ್ಲಿ ಚಿತ್ತಾರ ಬಿಡಿಸಿದರೂ ನಮಗೆ ಸಂತೋಷವೇ. ಅಂತೂ ದೂಡಿ ದೂಡಿ ಅದು ಚಡವು ಹತ್ತಿ ದೂಡಿದವರನ್ನು ಕ್ಯಾರೇ ಮಾಡದೆ ಹೋಗುವಂತೆ ಹೋದಾಗ ನಮಗೆ ಐಸ್ ಕ್ರೀಮ್ ಮುಗಿದಾಗ ಆಗುವ ಬೇಸರವೇ ಆಗುತ್ತಿತ್ತು, ಇನ್ನಷ್ಟು ಹೊತ್ತು ಆ ಕಾರಿನ ಪರಿಮಳವನ್ನು ಅನುಭವಿಸುತ್ತ ಮುಟ್ಟಿ ನೂಕುತ್ತ ಇರಬೇಕಿತ್ತು ಅಂತ ಅನಿಸುತ್ತಿತ್ತು. ಈ ಅನಿಸಿಕೆಗಳೆಲ್ಲ ಬಹುಶಃ ವೈಯಕ್ತಿಕವಾಗಿದ್ದವು. ಕಾರು ದೂಡುವ ನಾವು ಆಗ ಈ ಭಾವನೆಯನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರೆ ಕಡಿಮೆ ಶಕ್ತಿ ಹಾಕಿ ದೂಡುವ ಮೂಲಕ ಹೆಚ್ಚು ಹೊತ್ತು ಸುಖಾನುಭವ ಪಡೀಬಹುದಿತ್ತು ಅಂತ ಈಗ ಹೊಳೆಯುತ್ತಿದೆ. ಏನು ಮಾಡೋಣ; ಮಿಂಚಿದ್ದಕ್ಕೆ ಚಿಂತಿಸಿ ಫಲವಿಲ್ಲ!

ಜಾಹೀರಾತು

ಯಾವುದೇ ವಾಹನವನ್ನು ಓಡಿಸಬೇಕೆನ್ನುವ ಬಯಕೆ ಕೂಡ ಹಾಗೆಯೇ. ಮಕ್ಕಳಿಗೂ ಯುವಕರಿಗೂ ಮತ್ತು ಈಗೀಗ ಯುವತಿಯರಿಗೂ ಇದೊಂದು ದೊಡ್ಡ ಆಕರ್ಷಣೆ. ಜಗತ್ತಿನಲ್ಲಿ ಅತಿ ಖುಷಿ ಕೊಡುವ ಉದ್ಯೋಗ ಯಾವುದು ಎಂದು ಚಿಕ್ಕ ಮಕ್ಕಳಲ್ಲಿ ಕೇಳಿದರೆ,(ಅಂದರೆ ಗಂಡು ಹುಡುಗರಲ್ಲಿ ಕೇಳಿದರೆ – ಗಂಡು ಬುದ್ಧಿ ಹೆಚ್ಚು ಇರುವವರು ’ಗಂಡು’ ಹುಡುಗರು ಅಂತಿಟ್ಟುಕೊಳ್ಳಿ) ಅವರು ಹೇಳುವುದು ಚಾಲಕವೃತ್ತಿ ಅಂತಲೇ. ಮಕ್ಕಳು ಆಚೀಚೆ ಓಡುವಾಗ ಕೂಡ ಕೈಯಲ್ಲಿ ಸ್ಟೇರಿಂಗು ತಿರುಗಿಸಿಕೊಂಡು, ಕೆಲವೊಮ್ಮೆ ತಿರ್ಗಾಸುಗಳಲ್ಲಿ ಒಮ್ಮೆ ನಿಂತು ರಿವರ್‍ಸ್ ತೆಗೆದು ಮತ್ತೆ ಮುಂದಕ್ಕೆ ಓಡುವುದನ್ನು ನೀವೆಲ್ಲ ನೋಡಿರುತ್ತೀರಿ. ಹೆಣ್ಣು ಹುಡುಗಿಯರು ಹೀಗೆ ಸ್ಟೇರಿಂಗು ತಿರುಗಿಸಿಕೊಂಡು ಓಡುವುದನ್ನು ಕಾಣುವುದು ಕಷ್ಟ. ನಾನಂತೂ ನೋಡಿಲ್ಲ.

ಮಕ್ಕಳು ಬಸ್ಸಿನಲ್ಲಿ ಚಾಲಕನ ಬಳಿಯೇ ನಿಂತೋ ಅಥವಾ ಎದುರಿನ ಉದ್ದ ಸೀಟಿನಲ್ಲಿ ಕುಳಿತೋ ಚಾಲಕನ ಕೈಚಳಕವನ್ನು ನೋಡುವುದನ್ನು ಗಮನಿಸಿ. ನಾನು ಹೀಗೆಯೇ ಅವಕಾಶ ಸಿಕ್ಕಾಗಲೆಲ್ಲ ಚಾಲಕನನ್ನು ಗಮನಿಸುತ್ತಿದ್ದೆ. ನಾಲ್ಕು ಚಕ್ರದ ವಾಹನವನ್ನು ನಾನು ಮೊದಲು ಚಲಾಯಿಸಿದ್ದು ಹೀಗೆ ನೋಡಿದ್ದರ ಆಧಾರದಲ್ಲಿಯೇ. ಸರಿಯಾಗಿಯೇ ಚಲಾಯಿಸಿದ್ದೆ ಅನ್ನಿ. ಅಂದು ನನ್ನ ಕೈಯಲ್ಲಿ ವಾಹನ ಕೊಟ್ಟವರಿಗಂತೂ ನಾನು ಆವರೆಗೆ ಸ್ಟೇರಿಂಗು ಹಿಡಿದಿರಲಿಲ್ಲ ಅಂತ ಗೊತ್ತಾಗಿರಲಿಲ್ಲ. ವಾಹನವನ್ನು ಕೈಯಲ್ಲಿ ಕೊಟ್ಟವರು ಅಂದೆನಲ್ಲ, ನನಗೆ ಚಿಕ್ಕಂದಿನಲ್ಲಿ ಅಚ್ಚರಿಯಾಗುತ್ತಿದ್ದುದು  ಅಷ್ಟು ದೊಡ್ಡ ಬಸ್ಸು ಅಷ್ಟು ಸಣ್ಣ ಮನುಷ್ಯನ ಕೈಯಲ್ಲಿ, ಅಷ್ಟು ಸಣ್ಣ ಬ್ರೇಕು, ಗೇರುಕುಟ್ಟಿ, ಇವುಗಳಿಂದ ನಿಯಂತ್ರಣಕ್ಕೆ ಒಳಗಾಗುವುದು ಹೇಗೆ ಅಂತ. ಅದರಲ್ಲೂ ಬಸ್ಸಿನ ಸ್ಟೇರಿಂಗು ಒಂದು ಬದಿಯಲ್ಲಿ ಇರುವುದಲ್ಲವೇ? ಹಾಗೆ ನೋಡಿದರೆ ನಮ್ಮ ಬಸ್ಸು, ಕಾರು, ಜೀಪು, ಲಾರಿ ಇವಾವುದಕ್ಕೂಸೌಂದರ್ಯದ ಮೂಲಭೂತ ತತ್ವವಾದ ಸಿಮ್ಮೆಟ್ರಿಯೇ ಇಲ್ಲ. ಒಂದು ಬದೀಯಲ್ಲಿ ಕುಳಿತುಕೊಂಡು ಅವುಗಳನ್ನು ಚಲಾಯಿಸಬೇಕು. ಎರಡು ಸದ್ದಿಲಿಗಳು(ಸೈಲೆನ್ಸರ್) ಇರುವ ಕೆಲವೇ ಹಳೇ ಮಾದರಿ ಬೈಕುಗಳನ್ನು ಮತ್ತು ಅಟೊ ರಿಕ್ಷಾಗಳನ್ನು ಬಿಟ್ಟರೆ ಯಾವ ವಾಹನಕ್ಕೂ ಸಿಮ್ಮೆಟ್ರಿ ಇಲ್ಲ. ಸ್ಕೂಟರುಗಳಲ್ಲಿ ಇಂಜಿನು ಒಂದು ಬದಿಯಲ್ಲಿ ಇರುವುದಾದರೂ ಹೊರನೋಟಕ್ಕೆ ಅದು ಸಿಮ್ಮೆಟ್ರಿಯನ್ನು ಮತ್ತು ಆ ಮೂಲಕ ಸೌಂದರ್ಯವನ್ನು ಹೊಂದಿರುವುದರಿಂದ ಹುಡುಗಿಯರಿಗೆ ಅದು ಇಷ್ಟವೋ ಏನೋ?

 

ಜಾಹೀರಾತು

ಮಕ್ಕಳಿಗೆ, ಯುವಕರಿಗೆ ವಾಹನಗಳ ಆಕರ್ಷಣೆ ಹೆಚ್ಚು ಎಂಬುದು ಸರಿ. ಆದರೆ ವಯಸ್ಸು ಹೆಚ್ಚಾಗುತ್ತ  ಬಂದಂತೆ ಬಹಳಷ್ಟು ಜನರಲ್ಲಿ ವಾಹನ ಓಡಿಸುವ ಬಯಕೆ ಕಡಿಮೆಯಾಗುತ್ತದೆ ಎಂದು ತೋರುತ್ತದೆ. ಬಹುಶಃ ಆಯುಷ್ಯದ ಗ್ರಾಫ್ ಇಳಿಮುಖವಾಗಲು ತೊಡಗಿದಾಗ ಬದುಕಿನ ಹಲವು ಸಂಗತಿಗಳ ಕುರಿತ ದೃಷ್ಟಿಕೋನವೇ ಬದಲಾಗತೊಡಗುತ್ತದೆ. ಅದೇ ಬಗೆಯಲ್ಲಿ ತಮ್ಮ ತಮ್ಮ ಮಕ್ಕಳು ವಾಹನ ಬೇಕು ಎಂದು ಕೇಳಲು ಅರಂಭಿಸಿದಾಗ ಅಥವಾ ಮಕ್ಕಳು ವಾಹನ ಓಡಿಸಲು ಆರಂಭಿಸಿದಾಗ ನಿಧಾನವಾಗಿ ವಾಹನವೆಂದರೆ ಭಯವೇ ಆರಂಭವಾಗುತ್ತದೆ. ಅದರಲ್ಲೂ ಅಲ್ಲಿ ಇಲ್ಲಿ ಅಪಘಾತಗಳ ವರದಿ ಕೇಳಿದಾಗ ಒಳಗೊಳಗೇ ವಾಹನಗಳೆಂದರೆ ಒಂಥರಾ ಯಮದೂತರಂತೆ ಭಾಸವಾಗುತ್ತದೆ. ಪರವಾನಗಿ ಆಗುವ ಮೊದಲು ಅನ್ನುವುದಕ್ಕಿಂತಲೂ ಕಲಿಯುವ ಮೊದಲೇ ಚಲಾಯಿಸುವುದರಿಂದಲೂ ಅಪಘಾತಗಳಾಗುತ್ತವೆ. ಆದರೆ ಚಲಾಯಸದೆ ಕಲಿಯುವುದು ಹೇಗೆ? ಹಾಗೆ ನೋಡಿದರೆ ಕಲಿಯುವವರಿಂದ ಅಪಘಾತಗಳಾಗುವುದು ಕಡಮೆ. ಕಲಿತಾದವರದ್ದೇ ಅಲಕ್ಷ್ಯ ಹೆಚ್ಚು. ಕಲಿತಾಗದವರಲ್ಲಿ ಕಲಿತಾಗಿಲ್ಲವೆಂಬ ಅರಿವಿದ್ದರೆ, ಅಷ್ಟರಮಟ್ಟಿಗೆ ವಿನಯವಾದರೂ ಇರುತ್ತದೆ. ನಿಯಮಪಾಲನೆಯನ್ನು ಪ್ರಜ್ಞಾಪೂರ್ವಕವಾಗಿಯಾದರೂ ಮಾಡುತ್ತಾರೆ. ನಿಜವಾಗಿ ವಾಹನಚಾಲನೆಯಲ್ಲಿ ಪಳಗುವುದೆಂದರೆ ನಿಯಮಗಳನ್ನು ಕಲಿತು ಮರೆಯುವುದು. ನಿಯಮ ಮರೆತರೂ ತನ್ನಿಂತಾನೆ ಅದು ಪಾಲನೆಯಾಗುತ್ತಿರಬೇಕು. ಭಾಷೆಯ ಬಳಕೆಯಲ್ಲಿ ಪಳಗಿದಂತೆ ಅದರ ವ್ಯಾಕರಣವನ್ನು ಮರೆಯುತ್ತೇವಲ್ಲ, ಹಾಗೆ. ಚಾಲನೆಯ ವ್ಯಾಕರಣ ಪಾಲನೆಯಾಗದಿದ್ದಾಗಲೆಲ್ಲ ಚಾಲಕರು ತಮಗೂ ಇತರರಿಗೂ ಯಮದೂತರೇ ಆಗುತ್ತಾರೆ.

ವಾಹನ ಚಾಲಕರಿಗೆ ಅನುಭವ ಅನ್ನುವುದು ದೊಡ್ಡ ಕ್ವಾಲಿಫಿಕೇಶನ್. ಅದರಲ್ಲೂ ದೊಡ್ಡ ಶ್ರೀಮಂತರು ಅಥವಾ ಉದ್ಯಮಿಗಳು ತಮ್ಮ ಚಾಲಕರನ್ನು ನೇಮಕ ಮಾಡಿಕೊಳ್ಳುವಾಗ ತುಂಬ ಅನುಭವ ಇದ್ದವರಿಗೆ ಆದ್ಯತೆ ಕೊಡುತ್ತಾರೆ. ಇದರಲ್ಲಿ ಎಲ್ಲರಿಗೂ ಗೊತ್ತಿರುವ ಇನ್ನೊಂದು ಗುಟ್ಟು ಕೂಡ ಇದೆ. ಅನುಭವ ಇರುವ ಚಾಲಕನಾದರೆ ಸಾಕಷ್ಟು ವಯಸ್ಸಾದವನಾಗಿರುತ್ತಾನೆ. ದಿನಾಲೂ ಕಾಲೇಜಿಗೋ ಸಂಗೀತ ತರಗತಿಗೋ ಬಿಟ್ಟು ಬರುವ ಯುವಕ ಚಾಲಕನ ಚಾಲನಾ ಚಳಕಕ್ಕೆ ಸೋತು ಮಗಳೂ ಚಾಲಕನೂ ವಾಹನವೂ ಒಟ್ಟಿಗೇ ಓಡಬಾರದೆಂಬ ಮುನ್ನೆಚ್ಚರಿಕೆಯೇ ಆ ಗುಟ್ಟು. ಇರಲಿ. ಅನುಭವ ಮುಖ್ಯ ಅಂದೆ. ಕೆಲವರು ಮಾತ್ರ ಎಷ್ಟು ವರ್ಷಗಳಾದರೂ ಅನುಭವವನ್ನು ಪಡೆಯುವುದಿಲ್ಲ. ನೀವು ವಾಹನ ಚಲಾಯಿಸುವವರಾಗಿರಲಿ ಅಥವಾ ವಾಹನದಲ್ಲಿ ಪ್ರಯಾಣಿಸುತ್ತಿರುವವರಾಗಲೀ ಚಾಲನೆಯ ಬಗ್ಗೆ ಸ್ವಲ್ಪ ಗಮನ ಕೊಟ್ಟರೆ ಹಲವು ರೀತಿಗಳಲ್ಲಿ ಆಗುವ ಅಪಘಾತಗಳನ್ನು ತಪ್ಪಿಸಬಹುದು. ಉದಾಹರಣೆಗೆ ನೀವು ಕಾರನ್ನು ಎಲ್ಲೋ ರಸ್ತೆ ಬದಿಯಲ್ಲಿ ನಿಲ್ಲಿಸಬೇಕು ಅಂತಿಟ್ಟುಕೊಳ್ಳಿ. ಈಗ ಎರಡು ಸಾಧ್ಯತೆಗಳಿವೆ. ಒಂದು, ರಸ್ತೆ ಬದಿಯಲ್ಲಿ ನಿಮ್ಮ ಕಾರಿಗೆ ಬೇಕಾದಷ್ಟೇ ಜಾಗ ಉಪಯೋಗಿಸಿಕೊಂಡು ಎಡಬದಿಯಲ್ಲಿ ನಿಲ್ಲಿಸುವುದು. ಇನ್ನೊಂದು, ಎಡದಲ್ಲಿ ಸಾಕಷ್ಟು ಜಾಗವಿದ್ದರೂ ಇತರ ವಾಹನಗಳಿಗೆ ಹೋಗಲು ಬೇಕಾದಷ್ಟೇ ಜಾಗವನ್ನು  ಬಲಬದಿಯಲ್ಲಿ ಉಳಿಸಿ ನಿಮ್ಮ ಕಾರನ್ನು ನಿಲ್ಲಿಸುವುದು. ಈ ಎರಡೂ ಬಗೆಯ ಚಾಲಕರನ್ನು ನೀವು ಖಂಡಿತಾ ನೋಡಿರುತ್ತೀರಿ.ಇದು ಚಾಲಕನ ಸಂಗತಿ ಮಾತ್ರ ಅಲ್ಲ; ತನಗೆ ಬೇಕಾದಷ್ಟೇ ಉಪಯೋಗಿಸುವುದು ಮತ್ತು ಇನ್ನೊಬ್ಬನಿಗೆ ಅನಿವಾರ್ಯವಾದಷ್ಟೇ ಉಳಿಸುವುದು- ಇವೆರಡರ ಮಧ್ಯೆ ಬದುಕಿನ ಬದುಕಿನ ದೊಡ್ಡ ತತ್ವಜ್ಞಾನವೇ ಲೋಲಕದಂತೆ ಓಲಾಡುತ್ತದೆ.

ವಾಹನ ಚಾಲನೆ ಮಾಡುವಾಗ ಕೆಲವು ಶಿಷ್ಟಾಚಾರಗಳನ್ನು ಪಾಲಿಸದಿದ್ದರೆ ಅವನು ಒಳ್ಳೆಯ ಚಾಲಕ ಅಂತ ಅನ್ನಿಸಿಕೊಳ್ಳಲಾರ. ಉದಾಹರಣೆಗೆ, ಯಾರಾದರೂ ನೀವು ಚಲಾಯಿಸುವ ವಾಹನಕ್ಕೆ ಅಡ್ಡ ಬಂದು ಹಠಾತ್ತಾಗಿ ನೀವು ಬ್ರೇಕು ಹಾಕಿ ಅಪಘಾತ ತಪ್ಪಿಸಿದಿರಿ ಅಂತಿಟ್ಟುಕೊಳ್ಳಿ. ತಕ್ಷಣ ನೀವು ಹಾಗೆ ಅಡ್ಡ ಬಂದವರನ್ನು ಉದ್ದೇಶಿಸಿ, ಸಾಯ್ತೀಯೇನೋ ಅಂತಲೋ, ಸ್ವಯ ಇಲ್ಲವೋ ಅಂತಲೋ, ಡೇಶ್ ಡೇಶ್ ಮಗ ಅಂತಲೋ ಏನಾದ್ರೂ ಒಂದು ನುಡಿಮುತ್ತನ್ನು ಉದುರಿಸತಕ್ಕದ್ದು. ಈಗೀಗ ಹೆಚ್ಚಿನ ಕಾರುಗಳೆಲ್ಲ ಕನ್ನಡಿ ಹಾಕಿ ಹವಾನಿಯಂತ್ರಣದಲ್ಲಿ ಚಲಾವಣೆಗೊಳ್ಳುವುದರಿಂದ ಇಂಥ ನುಡಿಮುತ್ತುಗಳು ಒಳಗಿಂದ ಹೊರಬರದೆ ಮತ್ತು ಹೊರಗಿಂದ ಒಳಹೋಗದೆ ಇನ್ನಷ್ಟು ಅಪಾಯಕಾರಿ ಸನ್ನಿವೇಶಗಳೂ ಕದನಕುತೂಹಲವೂ ಉಂಟಾಗುವ ಅವಕಾಶಗಳು ಅಷ್ಟರಮಟ್ಟಿಗೆ ಕಡಿಮೆಯಾಗಿವೆ. ವಾಹನಗಳು ಕದನಮೂಲಗಳಾಗುವ ಹಲವು ಸನ್ನಿವೇಶಗಳನ್ನು ನಾವೆಲ್ಲ ನೋಡುತ್ತಲೇ ಇರುತ್ತೇವೆ. ಒಂದು ಇನ್ನೊಂದಕ್ಕೆ ತಾಗಿ ಇಬ್ಬರ ದೇಹಗಳೂ ಜಗಳ ಮಾಡುವಷ್ಟು ತಾಕತ್ತನ್ನು ಉಳಿಸಿಕೊಂಡಿದ್ದಾಗ ಇಂಥದ್ದು ತೀರಾ ಸಾಮಾನ್ಯ. ಅದಲ್ಲದೆ ಬೇರೆ ಸಂದರ್ಭಗಳೂ ಬರುತ್ತವೆ. ನನ್ನ ಅನುಭವದಲ್ಲೇ ಒಂದೆರಡು ಘಟನೆಗಳಾಗಿವೆ. ಕೆಲವರ್ಷಗಳ ಹಿಂದೆ ದ್ವಿಚಕ್ರಿಯಲ್ಲಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದೆ. ನನ್ನ ಅಂಗಿಯ ಬಲಭುಜಕ್ಕೆ ಮತ್ತು ಅಂಗಿಯನ್ನು ಬೇಧಿಸಿ ನನ್ನ ಭುಜಕ್ಕೆ ’ಪಚಕ್ಕ’ ಅಂತ ಮೇಲಿನಿಂದ ಬಿತ್ತು. ನನ್ನ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್ಸಿನ ಕಿಟಕಿಯಿಂದ, ಗುಟ್ಕಾ ತಿಂದು ಎಂಜಲನ್ನು ತುಂಬ ಹೊತ್ತು ಚೆನ್ನಾಗಿ ಸಂಗ್ರಹ ಮಾಡಿಟ್ಟುಕೊಂಡಿದ್ದ ಯಾವನೋ ಪುಣ್ಯಾತ್ಮ ನನ್ನ ಮುಖಕ್ಕೆ ಉಗಿದು ಮರ್‍ಯಾದೆ ತೆಗೆಯುವ ಬದಲು ಭುಜಕ್ಕೆ ಉಗಿದಿದ್ದ. ಅದಕ್ಕಾಗಿ ಅವನಿಗೆ ಮನಸ್ಸಲ್ಲೇ ಧನ್ಯವಾದ ಹೇಳುವುದು ಬಿಟ್ಟು ನಾನು ಜಗಳ ಮಾಡಲು ಅವಕಾಶ ಎಲ್ಲಿತ್ತು? ಬಸ್ಸು ಹಿಂದಕ್ಕೂ ನಾನು ಮುಂದಕ್ಕೂ ಹೋಗಿ ಆಗಿತ್ತಲ್ಲ. ಮತ್ತೆ ಹಿಂದಿರುಗಿ ಬಸ್ಸನ್ನು ಬೆನ್ನಟ್ಟಿ.. .. ಇದೆಲ್ಲ ಆಗಲಿಕ್ಕುಂಟೋ? ಎಷ್ಟೋ ಬಾರಿ ಅಗಿಯುತ್ತ ಹೋಗುವ ದ್ವಿಚಕ್ರ ಸವಾರರು ಉಗಿಯುತ್ತ ಹೋಗುವುದಿದೆ. ಅಂಥವರ ಹಿಂದೆ ನೀವು ದ್ವಿಚಕ್ರದಲ್ಲಿ ಹೋದರೆ ಮುಗಿಯಿತು. ಒಮ್ಮೆ ಎಲ್ಲೋ ಬೈಕಿನಲ್ಲಿ ನಾನು ಹೋಗುತ್ತಿದ್ದಾಗ ಮುಂದೆ ಬೈಕಿನಲ್ಲಿ ಹೋಗುತ್ತಿದ್ದವನು ಉಗಿದುದರಿಂದ ನನ್ನ ಮುಖಕ್ಕೆ ಪ್ರೋಕ್ಷಣೆಯಾಗಿ, ಹಾಗೆ ಉಗಿದವನಿಗೆ ಬುದ್ಧಿ ಹೇಳಬೇಕೆಂದು ಅವನನ್ನು ಓವರ್ ಟೇಕ್ ಮಾಡುವಾಗ ಎಡಕ್ಕೆ ತಿರುಗಿ ಉಗಿಯಬೇಡಿ ಅಂದೆ. ಅವನು ನನ್ನನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಿ ನಿಲ್ಲಿಸಿ ಏನು ಎಂದು ಕೇಳಿದ ಭಂಗಿ ನೋಡಿದ ನನ್ನ ಬಾಯಿ ಒಣಗಿತ್ತು. ಇವನು ಇನ್ನೊಮ್ಮೆ ಉಗಿದರೆ ಪ್ರತಿಯಾಗಿ ಉಗಿಯಲು ನನ್ನ ಬಾಯಲ್ಲಿ ಗುಟ್ಕ ಹೋಗಲಿ ಎಂಜಲೂ ಉಳಿದಿಲ್ಲ್ಲ ಎಂದು ಹೆದರಿ ಎಲ್ಲಿಗೋ ದಾರಿ ಕೇಳಿದ್ದು ಅಂತ ಹೇಳಿ ಬಚಾವಾದೆ. ಜಗಳಕ್ಕೆ ಕರೆವಂತೆ ಮಾಡಿ ನಂತರ ನನಗೆ ಜಗಳಕ್ಕೆ ವಿಷಯವೇ ಇಲ್ಲ ಎಂಬಂತಾಡಿದರೆ ಜಗಳವಿಲ್ಲದೆ ನಾವು ಗೆದ್ದಂತೆ. ಇದು ನನ್ನಂಥ ಜಗಳಹೇಡಿಗಳ ಪಲಾಯನ ಅಂತಲಾದರೂ ಅನ್ನಿ.

ಜಾಹೀರಾತು

ವರ್ತಮಾನ ಕಾಲದ ವರ್ತಮಾನಗಳಾಯಿತು, ಸ್ವಲ್ಪ ಚರಿತ್ರೆಗೆ ಹೋಗೋಣ. ವಾಹನಗಳು ಬಹಳ ಪ್ರಾಚೀನ ಕಾಲದಲ್ಲೇ ಇದ್ದವು ತಾನೆ? ಪ್ರಾಣಿಗಳು ದೇವರುಗಳ ವಾಹನಗಳಾಗಿರುವುದು ಗೊತ್ತೇ ಇದೆ. ಹಳೆಯ ಪುರಾಣಗಳಲ್ಲೆಲ್ಲ ರಾಜರ ಪ್ರಯಾಣಕ್ಕೆ ಕುದುರೆಗಳು ಇದ್ದಂತೆಯೇ ರಥಗಳೂ ಇರುತ್ತ್ತಿದ್ದವಲ್ಲ. ಅಂಥ ರಥಗಳು ಕೂಡ ಬಹಳ ವೇಗವಾಗಿ ಓಡುತ್ತಿದ್ದವು. ಋತುಪರ್ಣನ ರಥವನ್ನು ನಳ ಓಡಿಸಿದ ವೇಗ ಏನು ಎಂದು ನೀವೆಲ್ಲ ಬಲ್ಲಿರಿ. ಪಾಪ, ಹೆಂಡತಿ ದಮಯಂತಿಯ ಸ್ವಯಂವರ ಮುಗಿಯುವ ಮೊದಲೇ ತಲುಪಬೇಕು ಎನ್ನುವ ಅವಸರ ನಳನಿಗೂ ಇತ್ತು. ಈ ಕಾಲದಲ್ಲಾದರೆ ಬಹಳಷ್ಟು ಗಂಡಂದಿರು ರಥ ಹಾಳಾಗಿದೆಯೆಂದು ಸುಳ್ಳು ಹೇಳಿ ನಿಲ್ಲಿಸುತ್ತಿದ್ದರು ಅಥವಾ ಋತುಪರ್ಣನ ಶಾಲು ಬಿದ್ದಾಗ ಹೆಕ್ಕಿ ತರುವ ನೆಪದಲ್ಲಿ ಮತ್ತೆ ಹಿಂದಕ್ಕೆ ಅಷ್ಟೇ ವೇಗದಲ್ಲಿ ಒಡಿಸುತ್ತಿದ್ದರು! ಅದೇನೇ ಇದ್ದರೂ ಪ್ರಾಯಶಃ ಆ ಕಾಲದಲ್ಲಿ ರಥಗಳು ಓಡುತ್ತಿದ್ದ ರಸ್ತೆಗಳು ಈಗಿನಂತೆ ಕರ್ಮಣ್ಯೇ ವ್ಯಾಧಿ ಕಾ ರಸ್ತೇ ಆಗಿರಲಿಲ್ಲ ಅನಿಸುತ್ತದೆ. ರಸ್ತೆಗಳು ಉತ್ತಮವಾಗಿಲ್ಲದೇ ಇರುತ್ತಿದ್ದರೆ ಹಲವು ರಾಜ ಮಹಾರಾಜರು ರಥ ಅಪಘಾತವಾಗಿ ಸತ್ತ ಸಂಗತಿಗಳನ್ನು ನಾವು ಪ್ರಾಚೀನ ಸಾಹಿತ್ಯದಲ್ಲಿ ಓದುತ್ತಿದ್ದೆವು!! ಅಂಥ ಅಪಘಾತಗಳ ವರದಿಗಳೇನಾದರೂ ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಇವೆಯೇ ಎಂಬುದನ್ನು ಯಾರಾದರೂ ಬಲ್ಲವರು ಹೇಳಬೇಕು. ನನಗೆ ನೆನಪಿಗೆ ಬರುತ್ತಿಲ್ಲ. ಏನಿದ್ದರೂ ಆಗ ಇದ್ದಿರಬಹುದಾದ ರಥಗಳ ಸಂಖ್ಯೆಗೆ ಹೋಲಿಸಿದರೆ ಅಪಘಾತಗಳು ವರದಿಯಾದದ್ದೇ ಇಲ್ಲ ಎನ್ನಬಹುದು. ಅಥವಾ ರಸ್ತೆ ಅಪಘಾತದ ವರದಿ ಪ್ರಸಾರ ಮಾಡಬಾರದು ಎಂಬ ನಿರ್ಬಂಧವೇನಾದರೂ ಕವಿಗಳಿಗೆ ಇದ್ದಿರಬಹುದೇ? ಗೊತ್ತಿಲ್ಲ.

ಯಾವುದೋ ಒಂದು ಸಂದರ್ಭದಲ್ಲಿ ದಶರಥನ ರಥದ ಚಕ್ರದ ಒಂದು ಕೀಲು ತಪ್ಪಿದ್ದರಲ್ಲಿ ಎಷ್ಟು ದೊಡ್ಡ ರಾಮಾಯಣವಾಯಿತು ಅಂತ ನಿಮಗೆ ಗೊತ್ತಿದೆ. ಅಂಥದ್ದರಲ್ಲಿ ನಿಜವಾದ ಅಪಘಾತಗಳಾಗುತ್ತಿದ್ದರೆ ಎಂಥೆಂಥ ಮಹಾಕಾವ್ಯಗಳು ಹುಟ್ಟುತ್ತಿದ್ದವೋ ಏನೋ? ಒಟ್ಟಿನಲ್ಲಿ ನಮಗೆ ಇನ್ನಷ್ಟು ಮಹಾ ಕಾವ್ಯಗಳ ಭಾಗ್ಯವಿಲ್ಲ ಅಷ್ಟೆ.

 

ಜಾಹೀರಾತು

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ಮೈಲ್ ಮಾಡಿ: bantwalnews@gmail.com

 

ದಿನಾಕ್ಷರಿಯ ಕಿರಿಕಿರಿ ಬರೆಹಕ್ಕೆ ಸಂಗಮೇಶ್ವರಪೇಟೆಯ ಟಿ.ದೇವಿದಾಸ್ ಪ್ರತಿಕ್ರಿಯೆ ಹೀಗಿದೆ.

ಜಾಹೀರಾತು

ನಾನಂತೂ ಹೊಸ ದಿನಾಕ್ಷರಿಯಲ್ಲಿ ಹೊಸ ವರ್ಷವೇ ಬರೆಯುವ ಗೀಳು ಇದ್ದವನಲ್ಲ. ಆದರೆ ಒಪ್ಪ ಓರಣಗೊಂಡಿರುವ ದಿನಾಕ್ಷರಿ ಹಳತಾದರೂ ಇಷ್ಟ. ಹೊಸತಾದರೂ ಇಷ್ಟ. ಚೆನ್ನೈ ಅಲ್ಲಿ ಇರುವ ನನ್ನ ಅಕ್ಕನ ಹತ್ತಿರ ಹಳೆಯ ಮತ್ತು ಹೊಸ ದಿನಾಕ್ಷರಿಯನ್ನು ಕೊಂಡು ಸಂಗ್ರಹಿಸುವಬರೆಯುವ ಗೀಳಿದೆ ನನಗೆ‌.    ದಿನಾಕ್ಷರಿಯ ಮುಖಪುಟ, ಅದರ ಬಾಯಿಂಡು, ಅದರ ಗರಿ ಗರಿ ಕಾಗದದ ಪುಟಗಳು ನನ್ನಲ್ಲಿ ಕುತೂಹಲವನ್ನು ಹುಟ್ಟಿಸುತ್ತವೆಯಾದ್ದರಿಂದ  ಅದನ್ನು ಒಂಚೂರು ಹಾಳಾಗದಂತೆ ಕಾಪಿಡುತ್ತೇನೆ. ನಾನು ಕನ್ನಡ ಅಧ್ಯಾಪಕ. ಹೀಗೆ ಸಂಗ್ರಹಿಸಿದ ಹಳೆಯ ಮತ್ತು ಹೊಸ  ದಿನಾಕ್ಷರಿಗಳನ್ನು ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನ ರೂಪದಲ್ಲಿ ಕೊಡುತ್ತೇನೆಅವರಿಗೂ ದಿನಾಕ್ಷರಿ ಅಂದರೆ ಇಷ್ಟವಾಗುವಂತೆ ಮಾಡುತ್ತಿದ್ದೇನೆ. ನನ್ನ ಮನಸಲ್ಲಿ ಹುಟ್ಟುವ ಆಲೋಚನೆಗಳು ದಿನಾಕ್ಷರಿಯಲ್ಲಿ ಮೂಡುತ್ತಿದೆ ಎಂಬ ಆತ್ಮತೃಪ್ತಿ ನನ್ನಲ್ಲಿದೆ.

 

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ವ್ಹಾ ವಾಹನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*