ಉರುಳಿ ಬಿದ್ದ ಬೆಟ್ಟಗಳಡಿ ಬದಲಾದ ಕೊಡಗು

ಲೇಖನ: ಅನಿಲ್ ಎಚ್.ಟಿ.

  • ಅನಿಲ್ ಎಚ್.ಟಿ.

ಉರುಳಿ ಬಿದ್ದ ಬೆಟ್ಟಗಳ ಕೆಳಗೆ ಮಣ್ಣುಪಾಲಾದ ತನ್ನ ಆಸೆಯ ಮನೆಯ ಮುಂದೆ ಕುಳಿತು… ಆಕಾಶದಲ್ಲಿ ಕವಿದಿದ್ದ ಕಾಮೋ೯ಡಗಳನ್ನು ದಿಟ್ಟಿಸುತ್ತಿದ್ದ ಪೊನ್ನಮ್ಮಳ ಮನದಲ್ಲಿ ಒಂದೇ ಪ್ರಶ್ನೆ… ಹೀಗೇಕಾಯಿತು… ತಾನು ನಂಬಿದ್ದ ಬೆಟ್ಟ… ತಾನು ನಂಬಿದ್ದ ಮಳೆ.. ಗಾಳಿ… ನಂಬಿಕೆ ಇಟ್ಟಿದ್ದ ಮರಗಿಡ, ಪ್ರಕೖತ್ತಿ ಎಲ್ಲವೂ ತನಗೆ ಮೋಸ ಮಾಡಿಬಿಟ್ಟಿತೇ? ಜೀವನದಲ್ಲಿ ದುಡಿದಿದ್ದ ಎಲ್ಲಾ ಹಣವನ್ನೂ ಜೋಡಿಸಿ ಕಟ್ಟಿದ್ದ ಪ್ರೀತಿಯ ಮನೆ ರಾತ್ರೋರಾತ್ರಿ ತನ್ನ ಕಣ್ಣೆದುರಿನಲ್ಲಿಯೇ ನೆಲಕಚ್ಚಿತೇ?

ಚಿತ್ರಕೃಪೆ: ಅಂತರ್ಜಾಲ

ಬದುಕಿನಲ್ಲಿ ಯಾಕಿಂಥ ಬದಲಾವಣೆ? ಎಲ್ಲಿ ತಪ್ಪಿ ಹೋಯಿತು ಜೀವನದ ಬಂಡಿ?

ಜಾಹೀರಾತು

ಅದು 2018 – ಆಗಸ್ಟ್ 16 ರ ರಾತ್ರಿ. ಮಳೆಗಾಲ ಹೊಸತಲ್ಲದ ಕೊಡಗಿನಲ್ಲಿ ಅಂದು ಸುರಿದ ಮಹಾಮಳೆ ಮಾತ್ರ ಮುಂದಿನ ದಿನಗಳಲ್ಲಿ ಕೊಡಗಿನ ಜನತೆಗೆ ಎಲ್ಲವೂ ಹೊಸತಾಗಿ ನೋಡಲು ಕಾರಣವಾಗಿಬಿಟ್ಟಿತು. ರಾತ್ರೋರಾತ್ರಿ ಕೊಡಗಿನ ಹಲವೆಡೆ ಬೆಟ್ಟಗಳು ನಂಬಿಕೆಗಳನ್ನೇ ಬುಡಮೇಲು ಮಾಡುವಂತೆ ಕುಸಿದು ಬಿದ್ದವು. ನೂರಾರು ಮನೆಗಳು, ಜಾನುವಾರುಗಳು, ಜತೆಗೇ 22 ಜೀವಗಳು ಭೂಮಿ ಪಾಲಾದವು.

ಚಿತ್ರಕೃಪೆ: ಅಂತರ್ಜಾಲ

ಮಳೆಯೊಂದು ಕೊಡಗಿನ ಪಾಲಿಗೆ ಎಲ್ಲವನ್ನೂ ಬದಲಾಯಿಸಿತು.

ಅಲ್ಲಿಯವರೆಗೂ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಹಲವರ ಪಾಲಿಗೆ ಕರಾಳ ದಿನಗಳು ಪ್ರಾರಂಭವಾದವು. ಗ್ರಾಮೀಣ ಜನತೆಯ ಜೀವನ ಶೈಲಿಯೇ ಬದಲಾದಂತಾಯಿತು. ಬೆಟ್ಟದ ಜೀವಗಳು ಗ್ರಾಮಗಳನ್ನು ತೊರೆದು ನಗರದತ್ತ ಮುಖ ಮಾಡಿದವು. ಸೂರು ಕಳೆದುಕೊಂಡ ಮಂದಿ ಸಕಾ೯ರ ನೀಡಿದ ನಿವೇಶನಗಳಲ್ಲಿನ ಮನೆಗೆ ತೆರಳಬೇಕಾಯಿತು.

ಜಾಹೀರಾತು

ಕೊಡಗಿನಲ್ಲಿ ಮಹಾಮಳೆ. ಇದು ಯಾರ ಶಾಪ.. ಹೆಚ್ಚುತ್ತಿರುವ ರೆಸಾಟ್೯ಗಳು, ಮಿತಿಯಿಲ್ಲದ ಪ್ರವಾಸೋದ್ಯಮವೇ ಬೆಟ್ಟ ಬೀಳಲು ಕಾರಣವೇ? ಹೀಗೆಂದು ಮಾಧ್ಯಮಗಳು ಬೊಬ್ಬಿಟ್ಟವು. ಅದೇ ದಿನಗಳಲ್ಲಿ ಕೇರಳದಲ್ಲಿ ಸಂಭವಿಸಿದ್ದ ಪ್ರಳಯದ ದೖಶ್ಯಗಳನ್ನೂ ಕೊಡಗಿನಲ್ಲಿ ಸಂಭವಿಸಿದ ವಿಕೋಪದ ದೖಶ್ಯಗಳು ಎಂಬಂತೆ ಪದೇ ಪದೇ ಪ್ರಸಾರ ಮಾಡಿ ಕೊಡಗಿನ ಬಗ್ಗೆಯೇ ಭೀತಿ ಹುಟ್ಟಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿದವು. ಬೆಟ್ಟ ಬಿದ್ದ ಪ್ರದೇಶಗಳಲ್ಲಿ ಹೋಂಸ್ಟೇಗಳು, ರೆಸಾಟ್೯ಗಳು ಇರಲೇ ಇಲ್ಲ ಎಂದು ಕೆಲವರು ಹೇಳುತ್ತಿದ್ದ ಸತ್ಯ ಹೊರಗಿನ ಪ್ರಪಂಚಕ್ಕೆ ಮಳೆ, ಗುಡುಗಿನ ಅಬ್ಬರದಲ್ಲಿ ಕೇಳುತ್ತಲೇ ಇರಲಿಲ್ಲ.

ಕೊಡಗಿನಲ್ಲಿ ಮಳೆಯಿಂದಾಗಿ ಎಲ್ಲವೂ ಅಲ್ಲೋಲಕಲ್ಲೋಲವಾಗಿಬಿಟ್ಟಿದೆ. ಕೊಡಗಿಗೆ ಹೋಗುವುದೇ ಅಪಾಯ ಎಂಬಂಥ ಭಾವನೆ ಮೂಡುವಲ್ಲಿ ವದಂತಿಗಳು ಪ್ರಮುಖ ಪಾತ್ರ ವಹಿಸಿದ್ದಾಯಿತು.

ಚಿತ್ರಕೃಪೆ: ಅಂತರ್ಜಾಲ

ಪ್ರವಾಸಿಗರು ಅನೇಕ ತಿಂಗಳ ಕಾಲ ಮಳೆನಾಡಿನ ಕೊಡಗಿಗೆ ಬಾರದೇ ಉದ್ಯಮಿಗಳು ತತ್ತರಿಸಿದರು. ಕಾಫಿಗೆ ಬೆಲೆ ಕುಸಿದ ಸಂದಭ೯ ಹೋಂಸ್ಟೇ ಮೂಲಕ ಮನೆಯಲ್ಲಿಯೇ ಪ್ರವಾಸಿಗರನ್ನು ಅತಿಥಿಗಳಂತೆ ಆತಿಥ್ಯ ವಹಿಸುತ್ತಿದ್ದ ಅನೇಕ ಮನೆ ಮಾಲೀಕರು ಪ್ರವಾಸಿಗರು ಬಾರದೇ ಹೋಂಸ್ಟೇಗಳ ಬಾಗಿಲು ಮುಚ್ಚಿದರು. ಮಳೆಯ ಊರಿನಲ್ಲಿ ಕೆಲಸ ಮಾಡುವುದಾ? ಬೇಡವೇ ಬೇಡ ಎಂದು ಕುಟುಂಬದವರು ಹಠ ಹಿಡಿದ ಪರಿಣಾಮ ಹೋಟೇಲ್ ಗಳ ಕಾಮಿ೯ಕರು ಘಟ್ಟ ಇಳಿದು ಕರಾವಳಿಗೆ ತೆರಳಿದರು. ಹೋಟೇಲ್ ಉದ್ಯಮಕ್ಕೆ ದೊಡ್ಡ ಪೆಟ್ಟೇ ಬಿದ್ದಿತ್ತು.

ಜಾಹೀರಾತು

ಮಡಿಕೇರಿಯ ಹಳೇ ಬಸ್ ಸ್ಟಾಂಡ್ ನಲ್ಲಿ ನಗರದ ಹೖದಯದಂತಿದ್ದ ಪುಟ್ಟ ಬೆಟ್ಟವೂ ಮಳೆಯಿಂದಾಗಿ ಕುಸಿದು ಬಿತ್ತು. ಮಂಜಿನ ನಗರಿಗೆ ಕಪ್ಪುಚುಕ್ಕೆಯಂತೆ ಕುಸಿದು ಬಿದ್ದ ಬೆಟ್ಟ ಕಾಣತೊಡಗಿತು.. ಕೊಡಗಿನ ದುವಿ೯ದಿಗೆ ನಿದಶ೯ನ ಎಂಬಂತೆ ಇದು ಕಂಡುಬಂತು.

ಚಿತ್ರಕೃಪೆ: ಅಂತರ್ಜಾಲ

ಆಂಧ್ರ, ತೆಲಂಗಾಣ, ಚೆನ್ನೈ, ಮುಂಬೈ, ಪೂನಾ, ಕೇರಳಗಳಿಂದ ಕೊಡಗಿನಲ್ಲಿ ತೋಟ, ರೆಸಾಟ್೯ ಖರೀದಿಸಲು ಸಾಲುಗಟ್ಟಿ ಬರುತ್ತಿದ್ದ ವಾಹನಗಳು ಏಕಾಏಕಿ ಕಡಮೆಯಾದವು. ಕೊಡಗಿನಲ್ಲಿ ಭೂಮಿ ಖರೀದಿಸಿದರೆ ಸಮಸ್ಯೆಯಾಗುತ್ತದೆ ಎಂಬ ಭಾವನೆ ವ್ಯಾಪಕವಾಗತೊಡಗಿತು. ರಿಯಲ್ ಎಸ್ಟೇಟ್ ವಹಿವಾಟು ನಂಬಿಕೊಂಡಿದ್ದ ನೂರಾರು ಮಂದಿ ಕಂಗಾಲಾದರು. ಕೊಡಗಿನಲ್ಲಿ ಭೂಮಿ ಬೆಲೆ ಇಲ್ಲಿನ ಬೆಟ್ಟದ ಜತೆಯೇ ಕುಸಿದು ಬಿತ್ತು.

ಕೊಡಗಿನ ಪಶ್ಟಿಮಘಟ್ಟ ಪ್ರದೇಶಗಳಲ್ಲಿ ನೆಲಸಿದ್ದ ಗ್ರಾಮೀಣ ಮಂದಿಯ ವಲಸೆ ಪ್ರಾರಂಭವಾಯಿತು. ಅದಾಗಲೇ ನಗರ ಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಯುವ ಪೀಳಿಗೆ ಹಳ್ಳಿಗಳಲ್ಲಿ ಜೀವನ ಕಟ್ಟಿಕೊಂಡಿದ್ದ ತಮ್ಮ ಹಿರಿಕರನ್ನು ಇಲ್ಲಿ ನೆಲಸುವುದು ಸುರಕ್ಷಿತವಲ್ಲ. ನೀವೂ ನಮ್ಮೊಂದಿಗಿರಿ ಎಂದು ನಗರ ಪ್ರದೇಶಗಳಿಗೆ ಕರೆದೊಯ್ದರು. ಕಷ್ಟವೋ. ಸುಖವೋ.. ಇಚ್ಚೆಯಿದೆಯೋ ಇಲ್ಲವೋ.. ಮನಸ್ಸಿತ್ತೋ ಇಲ್ಲವೋ ಅನೇಕ ಹಳ್ಳಿಗರು ತಮ್ಮ ನೆಲೆಗೆ ವಿದಾಯ ಹೇಳಿದ್ದಾಯಿತು.

ಜಾಹೀರಾತು

ಮಳೆ ತಂದ ಬದಲಾವಣೆಗೆ ಕೊಡಗು ತತ್ತರಿಸಿಯಾಗಿತ್ತು. 2018 ರ ಹಿಂದೆಯೇ 2019, ಅದರ ಹಿಂದೆಯೇ 2020 ಬಂತು. ಮೂರು ವಷ೯ವೂ ಮಳೆಗಾಲ ಅಟ್ಟಹಾಸ ಮೆರೆಯಿತು. ತಲಕಾವೇರಿ ಎಂಬ ಕಾವೇರಿ ಪವಿತ್ರ ಕ್ಷೇತ್ರದಲ್ಲಿ ಬೆಟ್ಟ ಬಿದ್ದು ಅಚ೯ಕರ ಕುಟುಂಬವೇ ಮಣ್ಣಿನಡಿ ಕೊನೆಯುಸಿರೆಳೆಯಿತು. ಕೊಡಗಿನ ಪ್ರತೀಯೊಂದು ತಾಲೂಕಿನಲ್ಲಿಯೂ ಮಳೆ ಎಂಬುದು ಮಾರಿಯಾಗಿ ಪರಿಣಮಿಸಿ ಜೀವನದಲ್ಲಿ ಬದಲಾವಣೆಗೆ ಕಾರಣವಾಯಿತು.

ಮಳೆ ಎಂಬುದು ತಮಗೆ ಸಾಮಾನ್ಯ ವಿಚಾರ ಎಂದುಕೊಂಡವರ ನಂಬಿಕೆಗಳೇ ಸುಳ್ಳಾಗುವಂತೆ ಮಹಾಮಳೆ ಭಯ ಹುಟ್ಟಿಸಿತು. ಇಂದಿಗೂ ಮಳೆಗಾಲ ಪ್ರಾರಂಭವಾಗುವಾಗ ಮುಂದೇನು ಕಾದಿದೆಯೋ ಎಂದು ಕೊಡಗಿನವರು ಆತಂಕಗೊಳ್ಳುತ್ತಿದ್ದಾರೆ. ದೊಡ್ಡ ಸಿಡಿಲು. ಗುಡುಗು ಕೇಳಿದರೆ ಬೆಚ್ಚಿಬೀಳುತ್ತಾರೆ. ಬೇಡಬೇಡ ಎಂದರೂ ಬೆಟ್ಟಗಳತ್ತ ದೖಷ್ಟಿ ನೆಡುತ್ತದೆ.

ಮಳೆಯ ನಂತರ ಬಂದ ಕೋವಿಡ್ ಸೋಂಕು ಕೂಡ ಎಲ್ಲರಂತೆ ಕೊಡಗಿನಲ್ಲಿಯೂ ಸಾಕಷ್ಟು ಬದಲಾವಣೆಗೆ ಕಾರಣವಾಗಿತ್ತು. ಖಾಸಗಿ ಬಸ್ ಗಳು ಬಹುಪಾಲು ಸಂಚಾರ ನಿಲುಗಡೆಗೊಳಿಸಿದವು.. ಮುಚ್ಚಿದ ಹೋಟೇಲ್ ಗಳ ಪಾಕಶಾಲೆಯಲ್ಲಿ ಇಂದಿಗೂ ಬೆಂಕಿ ಉರಿದಿಲ್ಲ. ಸಾವಿರಾರು ಮಕ್ಕಳಿಂದ ತುಂಬಿದ್ದ ಖಾಸಗಿ ಶಾಲೆಗಳು ಶಾಲೆ ಪ್ರಾರಂಭವಾಗಿದೆ.. ಮಕ್ಕಳನ್ನು ಕಳುಹಿಸಿ .. ಎಂದು ಪ್ರಚಾರ ಮಾಡುವಂತಾಗಿದೆ. ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಯಲ್ಲಿದ್ದ ಏಕೈಕ ಚಿತ್ರಮಂದಿರ ಕಾವೇರಿ ಮಹಲ್ ತನ್ನ 50 ನೇ ವಷಾ೯ಚರಣೆಯ ಸಂಭ್ರಮಕ್ಕೆ 1 ವಷ೯ವಿದ್ದಾಗಲೇ ಪರದೆ ಎಳೆದುಕೊಂಡು ವ್ಯಾಪಾರ ಮಳಿಗೆ ತಲೆಎತ್ತಲು ಕಾರಣವಾಗಿದೆ.
ಬದಲಾವಣೆ ಜಗದ ನಿಯಮ ಹೌದು. ಎಲ್ಲವೂ ಬದಲಾಗಲೇ ಬೇಕು.. ಹೇಗೆ ಕೊಡಗಿನ ಸುಂದರ ದಿನಗಳು ಮಹಾಮಳೆ, ಲಾಕ್ ಡೌನ್ ನಿಂದಾಗಿ ಸಾಕಷ್ಟು ಬದಲಾವಣೆಗೆ ಒಳಗಾಯಿತೋ ಹಾಗೇ ಕೊಡಗಿನ ಕರಾಳ ದಿನಗಳೂ ಕೊನೇ ಆಗಲೇಬೇಕಾಗಿದೆ. ಇದೀಗ ಮತ್ತೆ ಕೊಡಗಿನತ್ತ ಪ್ರವಾಸಿಗರು ಮೆಲ್ಲನೇ ಕಾಲು ಹಾಕುತ್ತಿದ್ದಾರೆ. ರಿಯಲ್ ಎಸ್ಟೇಟ್ ಮತ್ತೆ ಬಾಗಿಲು ತೆರೆದುಕೊಳ್ಳುತ್ತಿದೆ.. ಹಳೇ ಬಸ್ ಸ್ಟಾಂಡ್ ಬದಲಿಗೆ ಮಡಿಕೇರಿಯ ಹೊಸ ಬಸ್ ಸ್ಟಾಂಡ್ ಕಡೆಗೆ ಪ್ರಯಾಣಿಕರು ಸಾಗುತ್ತಿದ್ದಾರೆ.. ಕಾವೇರಿ ಮಹಲ್ ಬದಲಿಗೆ 30 ಕಿಮೀ ದೂರದ ಕುಶಾಲನಗರದ ಕೂಗ್೯ ಮಲ್ಟಿಫ್ಲೆಕ್ಸ್ ನತ್ತ ಪ್ರೇಕ್ಷಕರು ತೆರಳುತ್ತಿದ್ದಾರೆ. ಭೂಕುಸಿತದಿಂದ ತಳಕಚ್ಚಿದ್ದ ಚೆಟ್ಟಳ್ಳಿ ರಸ್ತೆಯ ಕಾಮಗಾರಿ ಎರಡು ವಷ೯ಗಳಿಂದ ಆಗಾಗ್ಗೆ ಕುಸಿಯುತ್ತಿರುವ ಮಣ್ಣಿನ ಮಧ್ಯೆಯೇ ನಡೆಯುತ್ತಾ ಸಾಗಿದೆ.

ಜಾಹೀರಾತು

ಮಳೆಗಾಲ ಬರುತ್ತಿದ್ದಂತೆಯೇ ಎನ್ ಡಿಆರ್ ಎಫ್ ತಂಡ ಮಡಿಕೇರಿಯಲ್ಲಿ ಬೀಡು ಬಿಟ್ಟು ಭಯಬೇಡ.. ಮಳೆಯಿಂದಾಗಿ ದುರಂತ ಸಂಭವಿಸಿದರೆ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಅಭಯ ನೀಡುವಂತಾಗಿದೆ.

ನಂಬಿಕೆಯೇ ಮುಖ್ಯ ಎಂಬಂತೆ… ಈ ಮಳೆಗಾಲದಲ್ಲಿ ದುರಂತ ಸಂಭವಿಸಲಿಕ್ಕಿಲ್ಲ ಎಂಬ ಭರವಸೆಯೊಂದಿಗೆ ಕೊಡಗಿನ ಜನರ ಜೀವನ ಮುಂದಕ್ಕೆ ಸಾಗಿದೆ.. ಬೆಟ್ಟದಡಿ ಮತ್ತೆ ಹೊಸ ಮನೆ ಮಾಡಿದರೆ ಹೇಗೆ.. ಯಾರು ಸಾಲ ಕೊಟ್ಟಾರು.. ಸಾಲ ತಂದು ಕಷ್ಟಪಟ್ಟು ಮನೆ ಕಟ್ಟಿ ಈ ಗೂಡಿನೊಳಗೆ ತಾನು ಸೇರಿಕೊಳ್ಳುವಷ್ಟರಲ್ಲಿ..ಮತ್ತೆ ಮಳೆ ಬಂದು ಬೆಟ್ಟ ಕುಸಿದರೇ? ತಾನು ಉಳಿದೇನೇ.. ಅಧ೯ ಬಿದ್ದ ಬೆಟ್ಟ ನೋಡುತ್ತಾ ಕುಳಿತ ಪೊನ್ನಮ್ಮಳ ಮನದಲ್ಲಿ ಪ್ರಶ್ನೆಗಳು ಜಲದಂತೆ ಪುಟಿದೇಳುತ್ತಲೇ ಇದೆ..

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

1 Comment on "ಉರುಳಿ ಬಿದ್ದ ಬೆಟ್ಟಗಳಡಿ ಬದಲಾದ ಕೊಡಗು"

  1. Satheesha Kumar | July 20, 2022 at 12:41 pm | Reply

    ಕೊಡಗಿನ ಬಗೆಗಿನ ಲೇಖನ ಸಕಾಲಿಕ.ಇದು ಪ್ರಕೃತಿ ವೈಪರೀತ್ಯವೋ,ಮನುಷ್ಯ ನಿರ್ಮಿತವೋ ಚರ್ಚಿಸಿ ಪರಿಹರಿಸಿಕೊಳ್ಳದಿದ್ದಲ್ಲಿ ಅನಾಹುತ ತಪ್ಪಿದ್ದಲ್ಲ.

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*