ಬಂಟ್ವಾಳ: ಟೋಲ್ ನಿರ್ಮಾಣ ಸಂದರ್ಭ ಮಾತನಾಡದವರು ಈಗ ಹೋರಾಟ ನಡೆಸುತ್ತಿದ್ದಾರೆ. ಟೋಲ್ ತೆರವು ಎಂದು ಗೊತ್ತಾದ ಮೇಲೆ ಪ್ರತಿಭಟನೆ ನಡೆಸುತ್ತಿದ್ದು, ಇದರ ಬದಲು ಸ್ವಚ್ಛತಾ ಕಾರ್ಯಕ್ರಮ ಮಾಡಬಹುದಿತ್ತು. ಟೋಲ್ ತೆರವಿನ ವಿಚಾರದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸ್ಪಷ್ಟ ನಿರ್ಧಾರ ಕೈಗೊಂಡಿದ್ದಾರೆ, ತೆರವು ಖಚಿತ ಎಂದು ಹಲವು ಬಾರಿ ಹೇಳಿಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಾಧವ ಮಾವೆ ತಿಳಿಸಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಯಾವುದೇ ರೀತಿಯ ಹೊರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ಟೋಲ್ ತೆರವುಗೊಳ್ಳಲಿದೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಶೇ 100ರಷ್ಟು ತೆರವಾಗಲಿದ್ದು, ಈ ಕುರಿತು ಕಾಂಗ್ರೆಸ್ ನಾಯಕರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು. ರಮಾನಾಥ ರೈ ಅವರ ನೇತೃತ್ವದಲ್ಲಿ ಸಮಾನ ಮನಸ್ಕರ ಸಮಿತಿ ನಡೆಸಿದ ಟೋಲ್ ವಿರೋಧಿ ಹೋರಾಟದ ಉದ್ದೇಶವೇನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಬಂಟ್ವಾಳ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಯುಪಿಎ ಸರ್ಕಾರದ ಅವಧಿಯಲ್ಲೇ ಟೋಲ್ ನಿರ್ಮಾಣವಾಗಿದೆ. ಅಂದು ರಮಾನಾಥ ರೈ ಅವರೇ ಶಾಸಕರು ಹಾಗೂ ಸಚಿವರಾಗಿದ್ದರೂ ಆ ಸಂದರ್ಭದಲ್ಲಿ ಒಂದೇ ಒಂದು ಮಾತು ಎತ್ತದವರು, ಈಗ ಟೋಲ್ ಬಂದ್ ಆಗುತ್ತದೆ ಎನ್ನುವಾಗ ಹೋರಾಟದ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು. ಕಾರ್ಯಕರ್ತರನ್ನು ರಸ್ತೆ ಬದಿ ಅಹೋರಾತ್ರಿ ಕೂರಿಸಿ, ನಾಯಕರು ಮಾತ್ರ ಮನೆಯಲ್ಲಿ ಆರಾಮವಾಗಿರುತ್ತಾರೆ. ಟಿಪ್ಪರ್ ನುಗ್ಗಿಸುತ್ತೇವೆ ಎಂಬ ರೀತಿಯಲ್ಲಿ ಭಾಷಣ ಮಾಡಿಸುತ್ತಿದ್ದು, ಇವರ ಮೇಲೆ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರ.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ಮಾಧ್ಯಮ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.


Be the first to comment on "ಟೋಲ್ ತೆರವು ಖಚಿತ ಎಂದು ಗೊತ್ತಾದ ಮೇಲೆ ಪ್ರತಿಭಟನೆ: ಬಿಜೆಪಿ ವ್ಯಂಗ್ಯ"