
ಮಂಗಳೂರು: ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯ ವೃಂದದ ಮಯೂರ ಪ್ರತಿಷ್ಠಾನ , ಮಂಗಳೂರು ಇದರ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ‘ಮಯೂರ ಯಾನ -೨’ ಕಾರ್ಯಕ್ರಮ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಭಾಗವತ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಅವರನ್ನು ಮಯೂರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ತಂತ್ರಿಗಳಾದ ವೇ. ಮೂ. ಕೃಷ್ಣರಾಜ ತಂತ್ರಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿ, ಕರಾವಳಿಯ ಗಂಡು ಕಲೆ ಯಕ್ಷಗಾನದಿಂದ ಪುರಾಣ ಜ್ಞಾನ ವಿಸ್ತರಿಸುತ್ತಿದ್ದು, ಆರಾಧನಾ ಕೇಂದ್ರಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿರುವುದು ಸಂತಸವಾಗಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಿಂದಲೂ ಸರ್ವ ಪ್ರೋತ್ಸಾಹ ನೀಡಲಾಗುತ್ತಿದೆ. ಯುವ ಕಲಾವಿದರಿಗೆ ಉತ್ತೇಜನ ನೀಡುವುದು ಉತ್ತಮ ಕಾರ್ಯ ಎಂದರು.
ಅಧ್ಯಕ್ಷತೆಯನ್ನು ಮಯೂರ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಪಿ. ಸದಾಶಿವ ಐತಾಳ್ ಅವರು ವಹಿಸಿ ಮಾತನಾಡಿ, ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆ ಹಾಗೂ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಕ್ಕಳ ಪೋಷಕರು ಜತೆಯಾಗಿ ಮಯೂರ ಪ್ರತಿಷ್ಠಾನ ಸ್ಥಾಪಿಸಲಾಗಿದೆ ಎಂದರು.

ಭಾರತೀಯ ಜನತಾ ಪಾರ್ಟಿಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮುಖಂಡರಾದ ರವೀಂದ್ರ ನಾಯಕ್ ಕೆ., ವಿ ಇನ್‌ಫಾ ಕನ್‌ಸ್ಟ್ರಕ್ಷನ್ಸ್ , ಬಿಲ್ಡರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮಾನಂದ ನೂಜಿಪ್ಪಾಡಿ, ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಾರ್ಯನಿರ್ವಹಣಾಽಕಾರಿ ಪ್ರವೀಣ್, ಮೊಕ್ತೇಸರರಾದ ಭಾಸ್ಕರ್ ಕೆ., ಅರ್ಚಕರು ಹಾಗೂ ಅನುವಂಶಿಕ ಮೊಕ್ತೇಸರರಾದ ಮನೋಹರ ಭಟ್ ಕುಡುಪು, ಅನುವಂಶಿಕ ಪವಿತ್ರಪಾಣಿ ಹಾಗೂ ಅನುವಂಶಿಕ ಮೊಕ್ತೇಸರರಾದ ಕೆ. ಬಾಲಕೃಷ್ಣ ಕಾರಂತ್, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪುಂಜಾಲಕಟ್ಟೆ ಘಟಕದ ಅಧ್ಯಕ್ಷರಾದ ಹರೀಂದ್ರ ಟಿ. ಪೈ, ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ , ಮಯೂರ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಭಾಗವತ ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಅವರನ್ನು ಮಯೂರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರತ್ನ ದೇವ್ ಪುಂಜಾಲಕಟ್ಟೆ ಸನ್ಮಾನ ಪತ್ರ ವಾಚಿಸಿದರು. ಶ್ರವಣ್ ಉಡುಪ ಕತ್ತಲ್‌ಸಾರ್ ಅವರು ಸ್ವಾಗತಿಸಿದರು. ಪ್ರಶಾಂತ ಇತಾಳ್ ವಂದಿಸಿದರು.ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಜೆ ರಕ್ಷಿತ್ ಶೆಟ್ಟಿ ಪಡ್ರೆ ಅವರ ನಿರ್ದೇಶನದಲ್ಲಿ ಮಯೂರ ಪ್ರತಿಷ್ಠಾನದ ಕಲಾವಿದರಿಂದ ಪೀಯೂಷಲಹರಿ , ತ್ರಿಪಥಗಾಮಿನಿ ಮೋಕ್ಷದಾಯಿನಿ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.


Be the first to comment on "ಮಯೂರ ಪ್ರತಿಷ್ಠಾನ ಮಂಗಳೂರು : ದ್ವಿತೀಯ ವಾರ್ಷಿಕೋತ್ಸವ, ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ಮಯೂರ ಪ್ರಶಸ್ತಿ ಪ್ರದಾನ"