ಬಿ.ಸಿ.ರೋಡಿನಲ್ಲಿ ಶುಕ್ರವಾರ ನಾಲ್ವರಿಗೆ ನಾಯಿ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದ್ದು, ಇದರಿಂದ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಬಿ.ಸಿ.ರೋಡ್ ನ ಮಿನಿ ವಿಧಾನಸೌಧ ಮುಂಭಾಗದಿಂದ ಮೆಸ್ಕಾಂ ವರೆಗಿನ ಜಾಗದಲ್ಲಿ ಬೀದಿ ನಾಯಿಗಳ ಕಾಟ ಕಂಡುಬಂದಿದೆ.

ಬೆಳಗಿನ ಜಾವ ಸುಮಾರು 6 ಗಂಟೆ ವೇಳೆಗೆ ಕೈಕುಂಜೆ ನಿವಾಸಿಯೊಬ್ಬರು ತನ್ನ ಮಗನನ್ನು ಸ್ಕೂಟರ್ ನಲ್ಲಿ ಕೋಚಿಂಗ್ ಗೆಂದು ಬಿಟ್ಟು ಮರಳುತ್ತಿದ್ದಾಗ ಮೆಸ್ಕಾಂ ಬಳಿ ಹೊಂಡವಿರುವ ಕಾರಣ ವಾಹನವನ್ನು ನಿಧಾನವಾಗಿ ಚಲಿಸಿದ್ದಾರೆ. ಈ ಸಂದರ್ಭ ಅಲ್ಲಿದ್ದ ನಾಯಿಯೊಂದು ಅವರ ಕಾಲಿಗೆ ಕಚ್ಚಿದೆ. ಕೂಡಲೇ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಕೈಗೊಂಡಿದ್ದಾರೆ.

ಆದಾದ ಬಳಿಕ ಮೆಸ್ಕಾಂ ಬಳಿ ಆಹಾರ ಪಾರ್ಸೆಲ್ ನೀಡಲು ಹೋಗುತ್ತಿದ್ದ ಬಿ.ಸಿ.ರೋಡ್ ನಿವಾಸಿಯೊಬ್ಬರು ಮರಳುತ್ತಿದ್ದ ವೇಳೆ ಅವರಿಗೂ ನಾಯಿ ಕಡಿದಿದೆ. ಅಲ್ಲದೆ ಕೆಲ ಹೊತ್ತಿನ ಬಳಿಕ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕಾಲಿಗೂ ಕಚ್ಚಿದೆ. ಸ್ವಲ್ಪ ಸಮಯದ ಬಳಿಕ ವ್ಯಕ್ತಿಯೊಬ್ಬರಿಗೂ ನಾಯಿ ಕಡಿತವಾದ ಪ್ರಕರಣ ನಡೆದಿದ್ದು, ಒಟ್ಟು ಮೂವರು ಪುರುಷರು ಮತ್ತು ಓರ್ವ ಮಹಿಳೆಗೆ ನಾಯಿ ಕಚ್ಚಿದ್ದು, ಎಲ್ಲರಿಗೂ ಒಂದೇ ನಾಯಿ ಕಡಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆಯ ತರುವಾಯ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿಗೆ ಸಂತ್ರಸ್ತರು ದೂರು ನೀಡಿದ್ದು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ನಾಯಿಯ ಸ್ಥಿತಿಯ ಕುರಿತು ಆತಂಕವಿದ್ದು, ದಾರಿಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಎರಗುವ ಪ್ರವೃತ್ತಿಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನೂರಾರು ಜನರು ನಡೆದುಕೊಂಡು ಹೋಗುವ ಮಾರ್ಗ:
ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಿಂದ ಕೈಕುಂಜಕ್ಕೆ ತೆರಳುವ ರಸ್ತೆಯಲ್ಲಿ ತೋಟಗಾರಿಕೆ, ಮೆಸ್ಕಾಂ, ಎಪಿಎಂಸಿ, ಶಿಶು ಅಭಿವೃದ್ಧಿ ಇಲಾಖೆ, ಅಂಗನವಾಡಿ, ಕ್ಷೇತ್ರ ಶಿಕ್ಞಣಾಧಿಕಾರಿಗಳ ಕಚೇರಿ ಇದೆ. ನೂರಾರು ಮನೆಗಳು ಇಲ್ಲಿವೆ. ಅನೇಕ ಮಂದಿ ಈ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಬಹುತೇಕ ಬಿ.ಸಿ.ರೋಡಿನವರು ಈ ರಸ್ತೆಯಲ್ಲೇ ಬೆಳಗ್ಗೆ ವಾಕಿಂಗ್ ಕೂಡ ಮಾಡುತ್ತಾರೆ. ಇಲ್ಲಿ ಬೀದಿನಾಯಿಗಳು ಕೆಲವೊಮ್ಮೆ ಹಿಂಡುಹಿಂಡಾಗಿ ಕಾಣಸಿಗುತ್ತವೆ. ಇಲ್ಲಿ ನಿಲ್ಲಿಸಿದ ಹಲವು ವಾಹನಗಳ ಸೀಟ್ ಅನ್ನು ಹರಿದುಹಾಕಿದ ಉದಾಹರಣೆಗಳೂ ಇವೆ. ಶಾಲಾ ಮಕ್ಕಳು ಮರಳುವ ವೇಳೆ, ತೆರಳುವ ವೇಳೆ ನಾಯಿ ಮೇಲೆರಗುವಂಥ ಘಟನೆ ನಡೆಯದಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.



This problem has been reported several times to the chief officer who left this unattended as always. There are more stray dogs roaming inside Kaikunja, spoiling every thing that’s kept outside house (helmets,umbrella, sandals and what not) and they were not even neutered.