
ಬಂಟ್ವಾಳ: ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಗೋವಾದ ಮಡಗಾಂವ್ಗೆ ಸಂಚರಿಸುವ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿಗೆ ಬಂಟ್ವಾಳ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅಭಿನಂದನೆ ಹಾಗೂ ಕೃತಜ್ಞತೆ: ಕರಾವಳಿ ಮತ್ತು ಮಲೆನಾಡು ಭಾಗದ ಜನತೆಗೆ ವೇಗದ ಹಾಗೂ ಸುಸಜ್ಜಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಈ ರೈಲು ಸೇವೆ ಅತ್ಯಂತ ಸಂತಸ ತಂದಿದೆ. ರಾಜ್ಯಕ್ಕೆ ಹಲವು ರೈಲ್ವೆ ಯೋಜನೆಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಈ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಮನವಿಯಲ್ಲಿ ಕೃತಜ್ಞತೆ ಸಲ್ಲಿಸಲಾಗಿದೆ.

ಬಂಟ್ವಾಳಕ್ಕೂ ನಿಲುಗಡೆ ಕೊಡಿ: ಈ ರೈಲು ಹಾದುಹೋಗುವ ರಾಜ್ಯದ ಬಹುತೇಕ ತಾಲೂಕು ಕೇಂದ್ರಗಳ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಆದರೆ, ಬಂಟ್ವಾಳ ನಿಲ್ದಾಣದಲ್ಲಿ ಮಾತ್ರ ನಿಲುಗಡೆ ನೀಡದಿರುವುದು ಸ್ಥಳೀಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಮೂರು ತಾಲೂಕುಗಳ ಪ್ರಯಾಣಿಕರಿಗೆ ಅನಾನುಕೂಲ: ಬಂಟ್ವಾಳ ರೈಲು ನಿಲ್ದಾಣವು ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳ ಬಹುಭಾಗದ ಹಾಗೂ ಪುತ್ತೂರು ತಾಲೂಕಿನ ಕೆಲವು ಭಾಗಗಳ ಪ್ರಯಾಣಿಕರಿಗೆ ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ಇಲ್ಲಿ ನಿಲುಗಡೆ ಇಲ್ಲದಿರುವುದರಿಂದ ಈ ಮೂರು ತಾಲೂಕುಗಳ ಜನರು ಗೋವಾ ಸೇರಿದಂತೆ ಇತರ ಪ್ರದೇಶಗಳಿಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದವರು ಗಮನ ಸೆಳೆದಿದ್ದಾರೆ.
ಈ ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆಯನ್ನು ಪರಿಗಣಿಸಿ, ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಂಟ್ವಾಳ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಪ್ರಭಾಕರ ಪ್ರಭು ಅವರು ಸಂಸದರಲ್ಲಿ ವಿನಂತಿಸಿದ್ದಾರೆ.


Be the first to comment on "ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಬಂಟ್ವಾಳದಲ್ಲಿ ನಿಲುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಪ್ರಭಾಕರ ಪ್ರಭು ಮನವಿ"