
ಕರಾವಳಿ ಭಾಗದ ಜನರ ಧ್ವನಿಯಾಗಿ, ಪ್ರಚಲಿತ ಹಾಗೂ ಜನಪರ ಸುದ್ದಿಗಳನ್ನು ಜನರಿಗೆ ತಲುಪಿಸುವ ಉದ್ದೇಶದೊಂದಿಗೆ ವಂಶ ಸಮೂಹ ಸಂಸ್ಥೆಯ ವತಿಯಿಂದ ನೂತನ ಅಂತರ್ಜಾಲ ಸುದ್ದಿ ಮಾಧ್ಯಮ ‘ವಂಶ – ದಿ ವಾಯ್ಸ್ ಆಫ್ ಕೋಸ್ಟಲ್ ಏರಿಯಾ’ಕ್ಕೆ www.vamshanews.in ಚಾಲನೆ ದೊರಕಿದೆ.’

ಬಿ.ಸಿ.ರೋಡು ಮಿನಿ ವಿಧಾನಸೌಧದ ಎದುರುಗಡೆ ಕಾರ್ಯಾಚರಿಸುತ್ತಿರುವ ವಂಶ ಸಮೂಹ ಸಂಸ್ಥೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ ಅವರು ಲೋಕಾರ್ಪಣೆಗೊಳಿ ಶುಭ ಹಾರೈಸಿದರು.

ವೇಗದ ಮಾಧ್ಯಮ ಯುಗದಲ್ಲಿ ಸತ್ಯ, ನಿಖರ ಮತ್ತು ಜನಪರ ಸುದ್ದಿಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಸಮಾಜದ ಒಳಿತಿಗೆ ಪೂರಕವಾಗುವ ಸುದ್ದಿಗಳಿಗೆ ಆದ್ಯತೆ ನೀಡುವ ಮೂಲಕ ‘ವಂಶ’ ಕರಾವಳಿ ಭಾಗದ ವಿಶ್ವಾಸಾರ್ಹ ಜನಧ್ವನಿಯಾಗಿ ಬೆಳೆಯಲಿ ಎಂದು ಹೆಬ್ಬಾರ ಹೇಳಿದರು.
ಯುವ ಬರಹಗಾರರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರೊಂದಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೂ ‘ವಂಶ’ ಮುಂದಾಗಲಿ ಎಂದು ಆಶಿಸಿದರು.
ವಂಶ ಸಮೂಹ ಸಂಸ್ಥೆಯ ಮಾಲಕ ಯಾದವ ಅಗ್ರಬೈಲು, ಅವರ ಪತ್ನಿ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಕವಿತಾ ಯಾದವ್, ಮಂಗಳೂರು ವಿಜಯ ಕರ್ನಾಟಕ ಪತ್ರಿಕೆ ಉಪಸಂಪಾದಕ ದೇವದಾಸ ಅಗ್ರಬೈಲು ಹಾಗೂ ಅವರ ಪತ್ನಿ ಬೆಸ್ಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಬಿತಾ ದೇವದಾಸ್ ಉಪಸ್ಥಿತರಿದ್ದರು.
ಪ್ರಚಲಿತ ಸುದ್ದಿಗಳೊಂದಿಗೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು, ಯುವ ಬರಹಗಾರರಿಗೆ ಅವಕಾಶ ನೀಡುವುದು ಹಾಗೂ ಉದಯೋನ್ಮುಖ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವುದು ‘ವಂಶ – ದಿ ವಾಯ್ಸ್ ಆಫ್ ಕೋಸ್ಟಲ್ ಏರಿಯಾ’ದ ಪ್ರಮುಖ ಆಶಯವಾಗಿದೆ. ಕರಾವಳಿಯ ಸಂಸ್ಕೃತಿ, ಜನಜೀವನ ಮತ್ತು ಜನಪರ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಮಾಧ್ಯಮವಾಗಿ ‘ವಂಶ’ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ ಎಂದು ಗಣ್ಯರು ಶುಭ ಹಾರೈಸಿದರು.


Be the first to comment on "ವಂಶ – ದಿ ವಾಯ್ಸ್ ಆಫ್ ಕೋಸ್ಟಲ್ ಏರಿಯಾ’ ಲೋಕಾರ್ಪಣೆ"