ಸಂಗೀತ-ಕಲೆ ಎಲ್ಲರಿಗಾಗಿ

ಡಾ. ಅಜಕ್ಕಳ ಗಿರೀಶ ಭಟ್ಟ
ಅಂಕಣ: ಗಿರಿಲಹರಿ


ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡು, ಸಮಾಜದಲ್ಲಿರುವ ಮೇಲು ಕೀಳು, ಜಾತಿ ತಾರತಮ್ಯ, ವರ್ಗ ತಾರತಮ್ಯ, ಸಮಾನತೆ ಹೀಗೆ ವಿವಿಧ ವಿಚಾರಗಳ ಬಗ್ಗೆ ಮಾತನಾಡುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ.


ಆದರೆ ಶಾಸ್ತ್ರೀಯ ಸಂಗೀತ, ನೃತ್ಯದಂಥ ಕ್ಷೇತ್ರದ ಕಲಾವಿದರು ಈ ಬಗೆಯಲ್ಲಿ ಸಾಮಾಜಿಕ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಕೆಲಸಮಾಡುವುದು ಕಡಮೆ. ಟಿ ಎಂ ಕೃಷ್ಣ ಮಾತ್ರ ಭಿನ್ನ. ಚೆನ್ನೈಯ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರಾದ ಟಿ ಎಂ ಕೃಷ್ಣ ಅವರು ಪ್ರತಿಷ್ಠಿತ ಮ್ಯಾಗ್ಸೇಸೆ ಪ್ರಶಸ್ತಿ ಪಡೆದವರು. ಅವರಿಗೆ ಈ ಪ್ರಶಸ್ತಿ ಬರಲು ಕಾರಣ ಬಹುಶಃ ಅವರ ಸಂಗೀತ ಸಾಧನೆಯಲ್ಲ, ಬದಲಾಗಿ ಸಂಗೀತದ ಜೊತೆ ಸಾಮಾಜಿಕ ಕಾರ್ಯಸೂಚಿಯನ್ನು ಅವರು ಪ್ರಚುರಪಡಿಸಿದುದು. ಎಷ್ಟೋ ವರ್ಷಗಳಿಂದ ನಡೆಯುತ್ತ ಬಂದಿರುವ ಚೆನ್ನೈಯ ಒಂದು ಸಂಗೀತ ಉತ್ಸವದಲ್ಲಿ ಅವರು ಭಾಗವಹಿಸುವುದಿಲ್ಲ ಎಂದರು.
ಇದಕ್ಕೆ ಕಾರಣ ಆ ಸಂಗೀತ ಉತ್ಸವದಲ್ಲಿ ಮೇಲುಜಾತಿಯವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಮತ್ತು ಇತರ ಸಂಗೀತ ಪ್ರಕಾರಗಳಿಗೆ ಅಲ್ಲಿ ಅವಕಾಶವಿಲ್ಲ ಎಂಬುದಾಗಿತ್ತು. ಪರ್ಯಾಯವಾಗಿ ಅವರು ತಮ್ಮ ಐಡಿಯಾಲಜಿಗೆ ಅನುಗುಣವಾದ ರೀತಿಯಲ್ಲಿ ಬೇರೆಯೇ ಸಂಗೀತ ಉತ್ಸವವನ್ನು ಹಮ್ಮಿಕೊಂಡರು. ತಮ್ಮ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಹಲವು ಪ್ರಯೋಗಗಳನ್ನು ಮಾಡಿದವರು ಎಂದೂ ಸಂಗೀತ ಬಲ್ಲವರು ಹೇಳುತ್ತಾರೆ. ಈ ಪ್ರಯೋಗಗಳನ್ನು ಮೆಚ್ಚಿದವರೂ ಇದ್ದಾರೆ; ಇಷ್ಟ ಪಡದವರೂ ಇದ್ದಾರೆ. ಅದೇನೇ ಇದ್ದರೂ ಟಿ ಎಂ ಕೃಷ್ಣ ಅವರು ತಮ್ಮ ಸಂಗೀತಕ್ಕಿಂತಲೂ ಸಾಮಾಜಿಕ, ರಾಜಕೀಯ ವಿಚಾರಗಳ ಬಗೆಗಿನ ನಿಲುವುಗಳು ಮತ್ತು ಬರಹಗಳಿಂದ ಹೆಚ್ಚು ಪ್ರಸಿದ್ಧರು ಅನಿಸುತ್ತದೆ.
ಸಂಗೀತದಂಥ ಕಲೆಯ ವಿಚಾರ ಮಾತನಾಡುವಾಗ ಜಾತಿ ಇತ್ಯಾದಿ ಉಲ್ಲೇಖ ಮಾಡುವುದು ಹಿತವಾದ ಕೆಲಸವೇನೂ ಅಲ್ಲ. ಕಲೆಗೆ ಜಾತಿಯಿಲ್ಲ, ಅದು ಶ್ರದ್ಧೆಯಿಂದ ಸಾದನೆ ಮಾಡುವ ಯಾರಿಗಾದರೂ ಒಲಿಯುತ್ತದೆ ಅಂತೆಲ್ಲ ಹೇಳುತ್ತೇವೆ. ಆದರೂ ಏನು ಮಾಡುವುದು? ನಮ್ಮ ಸಮಾಜದಲ್ಲಿ ಈ ಕಲೆಗಳಲ್ಲಿ ಅವಕಾಶ ಮತ್ತು ಜಾತಿಯ ಸಂಬಂಧದ ಬಗ್ಗೆ ಕೂಡ ಬೇರೆ ಬೇರೆ ಚರ್ಚೆಗಳನ್ನು ನಡೆಸಿದವರಿದ್ದಾರೆ. ಟಿವಿ ವಾಹಿನಿಗಳಲ್ಲಿ ಯಾವೆಲ್ಲ ಜಾತಿಯ ಮಕ್ಕಳಿಗೆ ಅವಕಾಶ ನೀಡಲಾಗಿದೆ ಎಂದೆಲ್ಲ ಕೇಳಿದವರು, ಹೇಳಿದವರು ಇದ್ದಾರೆ.

ಜಾಹೀರಾತು

ಸಂಗೀತ, ನೃತ್ಯದಂಥ ಕಲೆಗಳು ಸಮಾಜದ ಎಲ್ಲ ಸಮುದಾಯಗಳನ್ನು ಬೆಸೆಯುವ ಮಾಧ್ಯಮಗಳಾಗಬೇಕು ಎಂಬ ಟಿ ಎಂ ಕೃಷ್ಣರ ಕಾಳಜಿ ಒಪ್ಪಬೇಕಾದದ್ದೇ. ಆದರೆ ಶಾಸ್ತ್ರೀಯ ಕಲೆಗಳಿಂದ ಕೆಲವು ಜಾತಿ ಸಮುದಾಯಗಳನ್ನು ಉದ್ದೇಶಪೂರ್ವಕವಾಗಿ ದೂರ ಇಡಲಾಗಿದೆ ಎನ್ನುವುದು ಬಹುಶಃ ಸರಿಯಾಗದೇನೋ. ಯಾಕೆಂದರೆ ಕಲೆಯ ಕಲಿಯುವಿಕೆ ಎನ್ನುವುದು ಅದಕ್ಕೆ ಬೇಕಾದ ಆರ್ಥಿಕ ಅವಕಾಶ, ಸಮಯದ ಅವಕಾಶ, ಕಲಾಸಕ್ತಿಯ ಹಿನ್ನೆಲೆ, ಗುರುಗಳ ಲಭ್ಯತೆ ಇವನ್ನೆಲ್ಲ ಅವಲಂಬಿಸಿರುತ್ತದೆ. ಉದಾಹರಣೆಗೆ, ನಾನು ನನ್ನ ಬಾಲ್ಯದಲ್ಲಿ ಶಾಸ್ತ್ರೀಯ ಸಂಗೀತವನ್ನೋ ನೃತ್ಯವನ್ನೋ ಕಲಿಯಲಿಕ್ಕಾಗಲಿಲ್ಲ. ಇದಕ್ಕೆ ಕಾರಣ ಏನು ಎಂದು ಕೇಳಿದರೆ ಮೇಲಿನ ಕಾರಣಗಳನ್ನೂ ಹೇಳಬೇಕಾಗುತ್ತದೆ! ಮುಖ್ಯವಾಗಿ ನನಗೆ ಸಂಗೀತ – ನೃತ್ಯಾಸಕ್ತಿಯ ಕೌಟುಂಬಿಕ ಹಿನ್ನೆಲೆ ಇರಲಿಲ್ಲ. ತಾಲೂಕು ಕೇಂದ್ರದಿಂದ ಇಪ್ಪತ್ತು ಕಿಲೋಮೀಟರುಗಳಿಗಿಂತಲೂ ದೂರವಿದ್ದ, ಬಸ್ಸಿಗೆ ಮುಕ್ಕಾಲು ಗಂಟೆ ನಡೆಯಬೇಕಾಗಿದ್ದ ಊರಿನಿಂದ ಹೋಗಿ (ಉಪಕಾರವಿಲ್ಲದ) ಸಂಗೀತವನ್ನೋ ಭರತನಾಟ್ಯವನ್ನೋ ಕಲಿಯುವ ಸಾಧ್ಯತೆಯೇ ಇಲ್ಲ. ಈಗಲೂ ಸಂಗೀತವೆಂದರೆ ನನಗೆ ತಲೆಗೆ ಹೋಗದ ವಿಷಯ. ಚೆನ್ನಾಗಿ ಯಾರಾದರೂ ಹಾಡಿದರೆ ಕೇಳಲು ಖುಷಿಯಾಗುತ್ತದೆ. ಆದರೆ ರಾಗ ತಾಳಗಳು ತಪ್ಪಿದರೆ ಎಲ್ಲ ಗೊತ್ತಾಗಲಿಕ್ಕಿಲ್ಲ.
ಈಗ ಪ್ರಯಾಣದ ಅನುಕೂಲ ಹೆಚ್ಚರುವುದರಿಂದ ದೂರವು ಹತ್ತಿರವಾಗಿದೆ ಅನ್ನೋಣ. ಅದಕ್ಕಿಂತ ಮುಖ್ಯವಾಗಿ ಶಾಸ್ತ್ರೀಯ ಕಲೆಗಳನ್ನು ಕಲಿಸುವವರು ಸಣ್ಣಪುಟ್ಟ ಊರುಗಳಲ್ಲೂ ಲಭ್ಯರಿದ್ದಾರೆ. ಹಾಗಾಗಿ ಆಸಕ್ತರಿಗೆ ಈಗ ಅವಕಾಶಗಳು ಹೆಚ್ಚು.
ಮೇಲಿನ ಪೀಠಿಕೆ ಬರೆಯಲು ಕಾರಣ ಇದೆ. ಇತೀಚೆಗೆ ಬಂಟ್ವಾಳ ತಾಲೂಕಿನ ಪರಂಗಿಪೇಟೆಯಲ್ಲಿರುವ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮದಲ್ಲ್ಲಿ ಅತಿಥಿಯಾಗಿ ಭಾಗವಹಿಸುವ ಅವಕಾಶ ದೊರೆಯಿತು.
ನಾನು ಸಂಗೀತದ ಬಗ್ಗೆ ಏನೂ ತಿಳಿಯದವನಾದರೂ ಈ ಅವಕಾಶವನ್ನು ನೀಡಿದ್ದು ಸಂಘಟಕರ ಔದಾರ್ಯ. ಕಾರ್ಯಕ್ರಮದಲ್ಲಿ ನಿರ್ದಿಷ್ಟವಾಗಿ ಸಂಗೀತದ ಬಗ್ಗೆ ನಾನು ಮಾತನಾಡಲು ಹೋಗಲಿಲ್ಲ. ಆದರೆ ಒಟ್ಟಾರೆಯಾಗಿ ಸಂಗೀತದಂಥ, ನೃತ್ಯದಂಥ ಕಲೆ ಯಾಕೆ ನಮಗೆ ಬೇಕು? ಅಂಥ ಕಲೆಗಳನ್ನು ಕಲಿಯುವ ಪ್ರಕ್ರಿಯೆ ನಮ್ಮಲ್ಲಿ ಹೇಗೆ ವಿನೀತಭಾವವನ್ನು ಮೂಡಿಸುತ್ತದೆ? ಇತ್ಯಾದಿ ವಿಚಾರಗಳನ್ನು ಹಂಚಿಕೊಂಡೆ. ಅದು ಮುಖ್ಯವಲ್ಲ. ಮುಖ್ಯವಾದದ್ದು ಈ ಸಂಗೀತ ಕಲಿಕಾ ಕೇಂದ್ರದ ಸೇವೆ. ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅಷ್ಟೇನೂ ಉತ್ತಮವಿಲ್ಲದರಿಗೂ, ಶಾಸ್ತ್ರೀಯ ಸಂಗೀತ ನೃತ್ಯದಂಥ ಕಲೆಗಳ ಕೌಟುಂಬಿಕ ಹಿನ್ನೆಲೆ ಇಲ್ಲದವರಿಗೂ ಇವುಗಳಲ್ಲಿ ಆಸಕ್ತಿ ಮೂಡಿಸುವ ಮತ್ತು ಕಲಿಕೆಗೆ ಅವಕಾಶ ಮಾಡಿಕೊಡುವ ಕಲಾಕೇಂದ್ರವನ್ನು ಕೃಷ್ಣಕುಮಾರ ಪೂಂಜರ ನೇತೃತ್ವದ ಸೇವಾಂಜಲಿ ಪ್ರತಿಷ್ಠಾನ ನಡೆಸುತ್ತಿದೆ. ಯಾವ ಸಾಮಾಜಿಕ ಅಜೆಂಡಾಗಳ ಘೋಷಣೆ ಕೂಡ ಇಲ್ಲದೆ ನಿಜವಾದ ಅರ್ಥದಲ್ಲಿ ಸಮಾಜದ ಅತ್ಯಂತ ಕೆಳಸ್ತರದಲ್ಲಿ ಇರುವವರನ್ನು ಸೇರಿಸಿಕೊಳ್ಳುವ ಒಳಗೊಳ್ಳುವಿಕೆಯ ಕೆಲಸ ಈ ಸೇವಾಂಜಲಿಯ ಕಲಿಕಾಕೇಂದ್ರದಲ್ಲಿ ನಡೆಯುತ್ತಿದೆ. ಇಲ್ಲಿ ಸಂಗೀತ ಗುರುಗಳಾದ ಕೃಷ್ಣಾಚಾರ್ಯರ ಶ್ರದ್ಧೆ ಕೂಡ ಅಭಿನಂದನಾರ್ಹ. ಸೇವಾಜಲಿಯ ಪೂಂಜರು ತಳಸಮುದಾಯದವರಿಗೆ ಕೇವಲ ಕಲಾತರಬೇತಿಯ ಅವಕಾಶ ಹೆಚ್ಚಿಸಿದ್ದಷ್ಟೇ ಅಲ್ಲ; ಅದರ ಜೊತೆ ಉಚಿತ ಶಿಕ್ಷಣ ಕೊಡಿಸಿ ಸ್ವಾಭಿಮಾನದ ಸ್ವಾವಲಂಬಿ ಬದುಕಿಗೆ ಅವಕಾಶವನ್ನೂ ದೊರಕಿಸಿದ್ದುಂಟು.
ಸೇವಾಂಜಲಿಯ ಸಂಸ್ಕೃತಿಸೇವೆ ಕೇವಲ ಸಂಗೀತಕ್ಕಷ್ಟೇ ಸೀಮಿತವಲ್ಲ. ಕಳೆದ ಹದಿನಾರು ಹದಿನೇಳು ವರ್ಷಗಳಿಂದ ಭರತನಾಟ್ಯ , ಯಕ್ಷಗಾನ, ಚಿತ್ರಕಲೆ ಮುಂತಾದ ತರಗತಿಗಳನ್ನು ಕೂಡ ಇಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಪರಂಗಿಪೇಟೆಯ ಸುತ್ತಮುತ್ತಲಿನ ಹಳ್ಳಿಗಳ, ಅಷ್ಟೇನೂ ಅನುಕೂಲಸ್ಥರಲ್ಲದ ತಂದೆತಾಯಿಯರಿರುವ ಉತ್ಸಾಹಿ ಮಕ್ಕಳಿಗೆ ಈ ತರಬೇತಿ ಕೇಂದ್ರಗಳ ಮೂಲಕ ಸಿಗುತ್ತಿರುವ ಪ್ರೋತ್ಸಾಹ ಪ್ರಶಂಸನೀಯವಾದದ್ದು. ಈ ಮಕ್ಕಳೆಲ್ಲ ಮುಂದೆ ದೊಡ್ಡ ದೊಡ್ಡ ಕಲಾವಿದರಾಗುತ್ತಾರೆಂದೇನಿಲ್ಲ. ಆದರೆ ಕೊನೆಯ ಪಕ್ಷ ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಕಲಾರಸಿಕರಾಗುವುದರಲ್ಲಿ ಸಂದೇಹವಿಲ್ಲ.
ಇನ್ನು ಕೃಷ್ಣಕುಮಾರ ಪೂಂಜರು ಆಡಳಿತ ಟ್ರಸ್ಟಿಯಾಗಿರುವ ಸೇವಾಂಜಲಿ ಪ್ರತಿಷ್ಠಾನ ಮಾಡುತ್ತಿರುವ ಇತರ ಹಲವು ಸೇವಾಕಾರ್ಯಗಳ ಬಗ್ಗೆ ಬರೆಯುವುದಾದರೆ ಮತ್ತೊಂದು ದೀರ್ಘ ಲೇಖನ ಅಥವಾ ಕಿರುಹೊತ್ತಗೆಯನ್ನೇ ಬರೆಯಬೇಕಾದೀತು. ಪ್ರತಿಷ್ಠಾನದ ಸೇವಾ ಕಾರ್ಯಗಳಿಗಾಗಿ ವರ್ಷಕ್ಕೆ ಸುಮಾರು ಇಪ್ಪತ್ತು ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತ ಬೇಕಾಗುತ್ತದೆ. ಸ್ತ್ರೀ ಸಬಲೀಕರಣಕ್ಕೆ ಇಲ್ಲಿ ವಿಶೇಷ ಒತ್ತು ಇದೆ.
ಉಚಿತ ವೈದ್ಯಕೀಯ ಶಿಬಿರಗಳು, ರೋಗಿಗಳಿಗೆ ಉಚಿತ ಚಿಕಿತ್ಸಾ ವೆಚ್ಚ, ಕಣ್ಣಿನ ಚಿಕಿತ್ಸೆ, ಉಚಿತ ಕನ್ನಡಕ, ಜಸ್ಟಿಸ್. ಕೆ ಎಸ್ ಹೆಗ್ಡೆ ಆಸ್ಪತ್ರೆಯ ಮೂಲಕ ತಿಂಗಳಿಗೆ ಸರಾಸರಿ ಇಪ್ಪತ್ತರಿಂದ ಮೂವತ್ತು ಉಚಿತ ಹೆರಿಗೆ, ರೂಟ್ ಕ್ಯಾನಲ್ ಚಿಕಿತ್ಸೆಯಂಥ ದುಬಾರಿ ದಂತಚಿಕಿತ್ಸೆ ಕೂಡ ಉಚಿತವಾಗಿ ಇಲ್ಲಿ ಲಭ್ಯ. ಉಚಿತ ದಂತ ಚಿಕಿತ್ಸೆಗಾಗಿ ಐದು ದಂತವೈದ್ಯ ಕುರ್ಚಿಗಳ ಸುಸಜ್ಜಿತ ವ್ಯವಸ್ಥೆಯಿದೆ ಎಂದರೆ ಈ ಸೇವೆಗಳ ಅಚ್ಚುಕಟ್ಟುತನವನ್ನು ನೀವೇ ಊಹಿಸಬಹುದು. ಒಟ್ಟಿನಲ್ಲಿ ನಮ್ಮ ಸುತ್ತಮುತ್ತಲ ಬದುಕಿನ ಮಟ್ಟವು, ಕಲೆ, ವ್ಯವಹಾರ, ಸಾಮಾಜಿಕ ಕೊಡುಕೊಳ್ಳುವಿಕೆ- ಹೀಗೆ ಎಲ್ಲ ಮಗ್ಗುಲುಗಳಲ್ಲೂ ಒಂದಷ್ಟು ಉತ್ತಮಗೊಳ್ಳುವಲ್ಲಿ ಇಂಥ ಸಂಸ್ಥೆಗಳ, ಕೆ ಕೆ ಪೂಂಜರಂಥ ವ್ಯಕ್ತಿಗಳ ಪಾತ್ರ ಮಹತ್ವದ್ದಾಗಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಸಂಗೀತ-ಕಲೆ ಎಲ್ಲರಿಗಾಗಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*