ಬಂಟ್ವಾಳ: ಮತಾಂತರ ನಿಷೇಧ ಕಾಯಿದೆ, ಗೋಹತ್ಯೆ ನಿಷೇಧ ಪ್ರತಿಬಂಧಕ ಕಾನೂನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿಶ್ವ ಹಿಂದು ಪರಿಷದ್ ಹೇಳಿದೆ.

ಸೋಮವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಮತಾಂತರ ನಿಷೇಧ ಕಾಯ್ದೆ ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಾಗಿ ಬಲವಂತ, ವಂಚನೆ, ಆಮಿಷ ಹಾಗೂ ದಾರಿ ತಪ್ಪಿಸಿ ಮಾಡುವ ಕಾನೂನುಬಾಹಿರ ಕೃತ್ಯಗಳನ್ನು ಮಾತ್ರ ತಡೆಯುತ್ತದೆ. ಹಾಗೆಯೇ ಗೋಹತ್ಯೆ ನಿಷೇಧ ಪ್ರತಿಬಂಧಕ ಕಾನೂನು ಜಾರಿಯಾದ ಮೇಲೆ ಸಾವಿರಾರು ಗೋವುಗಳ ರಕ್ಷಣೆಯಾಗಿದೆ ಎಂದರು.

ಧರ್ಮಾಧರಿತವಾಗಿ ಮಿಲಿಟರಿ ತರಬೇತಿ ನೀಡುವ ವಿಚಾರದ ಕುರಿತು ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದರು. ಈಗ ಅದನ್ನು ಜಾರಿಗೊಳಿಸುವ ಪ್ರಯತ್ನಗಳಾಗುತ್ತಿವೆ ಎಂದು ತಿಳಿದುಬಂದಿದ್ದು, ಇದು ಸರಿಯಲ್ಲ. ಭಾರತೀಯ ಸೇನೆ ಹೆಸರಲ್ಲಿ ಯುವಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸುವುದು, ಸೇನೆಯ ಮೇಲ್ವಿಚಾರಣೆ ಇಲ್ಲದೆ, ಖಾಸಗಿ ಸಂಸ್ಥೆಗಳ ಮೂಲಕ ತರಬೇತಿ ನೀಡುವುದು ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯ ತಂದೊಡ್ಡಬಲ್ಲದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಲೋಹಿತ್ ಪಣೋಲಿಬೈಲ್, ಸಂತೋಷ್ ಸರಪಾಡಿ, ಸಂದೇಶ್ ಕಾಡಬೆಟ್ಟು, ಕೇಶವ ದೈಪಲ ಉಪಸ್ಥಿತರಿದ್ದರು.


Be the first to comment on "ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾನೂನು ವಾಪಸ್ ಪಡೆಯುವ ನಿರ್ಧಾರ: ವಿಹಿಂಪ ವಿರೋಧ"