ಗಣೇಶ ಪ್ರಸಾದ ಪಾಂಡೇಲು
ವಿಟ್ಲ-ಕಬಕ ನಡುವಿನ ಲೋಕೋಪಯೋಗಿ ಇಲಾಖೆ ರಸ್ತೆಯನ್ನುರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ ೩ ಪ್ಯಾಕೇಜ್ ೨೫೧ರಲ್ಲಿ ಮರು ಗುತ್ತಿಗೆ ನಡೆಸಿ ಸುಮಾರು ೧೩ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು., ಆದರೆ ರಸ್ತೆಯ ಹಲವು ಕಡೆಯಲ್ಲಿ ಹೊಂಡಗಳು ಉಳಿದುಕೊಂಡಿವೆ.
ಚರಂಡಿ ಹಾಗೂ ಮೋರಿಗಳಿದ್ದರೂ, ಮಳೆ ನೀರು ಮಾತ್ರ ರಸ್ತೆಯಲ್ಲೇ ಹರಿಯುತ್ತಿದೆ. ಕೆಲವು ಭಾಗದಲ್ಲಿ ಕೆಸರು ಮಣ್ಣು ರಸ್ತೆಯನ್ನು ಆವರಿಸಿದೆ ವಾಹನ ಸವಾರರು ಕೆಸರು ನೀರಿನಲ್ಲಿ ಪರದಾಟ ಸ್ಥಿತಿಯಿದೆ. ಎಸ್. ಎಚ್. ಡಿ. ಪಿ. ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಎರಡನೇ ಬಾರಿ ಟೆಂಡರ್ ನಡೆಸಿ ಕಾಮಗಾರಿಯನ್ನು ನಡೆಸಲಾಗಿತ್ತು. ಕಬಕ ಸಮೀಪದ ಎರಡು ಕಡೆಗಳಲ್ಲಿ, ಇಡ್ಕಿದು ಗ್ರಾಮ ಪಂಚಾಯಿತಿಯ ಮುಂಭಾಗ, ಕಂಬಳಬೆಟ್ಟು ಮೋರಿಯ ಸಮೀಪ ಎರಡು ಕಡೆ, ಕಂಬಳ ಬೆಟ್ಟು ದರ್ಗಾ ಶರೀಪ್ ಸಮೀಪ, ಬದನಾಜೆ, ನಿಡ್ಯ ಚಂದಳಿಕೆ ತಿರುವು ಹೀಗೆ ರಸ್ತೆಯುದ್ದಕ್ಕೂ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದೆ
ಮೋರಿಯಲ್ಲಿ ನೀರಿಗೆ ಅವಕಾಶ ಇಲ್ಲ!
ಕಂಬಳಬೆಟ್ಟು ಧರ್ಮನಗರ ಶ್ರೀ ಜಯದುರ್ಗಾ ಪರಮೇಶ್ವರಿ ಭಜನಾ ಮಂದಿರ ಸಮೀಪದಲ್ಲಿ ಹೊಸದಾಗಿ ಮೋರಿ ನಿರ್ಮಾಣ ಮಾಡಿದ್ದು, ಅದರಲ್ಲಿ ಹೋಗಬೇಕಾದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ವಾಹನದ ಓಡಾಟದ ವೇಗಕ್ಕೆ ಅಕ್ಕಪಕ್ಕದ ಪಾದಚಾರಿಗಳ ಮೇಲೆ ನೀರು ಹಾಯುತ್ತದೆ. ಅದಕ್ಕಿಂತ ನೂರು ಮೀಟರ್ ದೂರದಲ್ಲಿ ಹೊಸದಾಗಿ ಅಳವಡಿಸಿದ ಮೋರಿಯಲ್ಲಿ ಕೂಡ ಸಾಗಬೇಕಾದ ನೀರು ರಸ್ತೆಯಲ್ಲಿ ಹೋಗುತ್ತಿದೆ. ಮಳೆಗಾಲ ಮುಗಿಯುವ ಸಂದರ್ಭಕ್ಕೆ ರಸ್ತೆಗಳ ಡಾಮರು ಹುಡುಕುವ ಸ್ಥಿತಿ ನಿರ್ಮಾಣವಾಗಲಿದೆ.
Be the first to comment on "ಮಳೆಗಾಲಕ್ಕೆ ಸಿದ್ಧತೆಯೇ ಮಾಡಿಲ್ಲ. ಹೂಳೆತ್ತದ ಕಾರಣ ಚರಂಡಿಗಳ ಮೋರಿಗಳ ನೀರು ರಸ್ತೆಯ ಮೇಲೆ!"