
ಚಿತ್ರದುರ್ಗದಲ್ಲಿ ಮೇ 9ರಂದು ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ಐದು ಸಾವಿರದಷ್ಟು ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾಗಲಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ಹಾಗೂ ಅಭಿಮಾನೋತ್ಸವದ ಜಿಲ್ಲಾ ಸಂಚಾಲಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರ ಮಟ್ಟದಲ್ಲಿ ಈ ಕುರಿತು ಸಮಾಲೋಚನಾ ಸಭೆಗಳನ್ನು ನಡೆಸಲಾಗುತ್ತಿದ್ದು, ಬಿ.ಎಸ್. ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ ಐವತ್ತು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಕೊಡುಗೆಗಳನ್ನು ಸ್ಮರಿಸುವ ಹಾಗೂ ಅವರಿಗೆ ಅಭಿನಂದನೆ ಹೇಳುವ ಸಲುವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಯಡಿಯೂರಪ್ಪ ಕೊಡುಗೆ ಅಪಾರವಾಗಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಿಂದ ಸುಮಾರು ಕನಿಷ್ಠ ಐನೂರರಿಂದ ಸಾವಿರದವರೆಗೆ ನಮ್ಮ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಯಡಿಯೂರಪ್ಪ ಅವರು ಪಕ್ಷಕ್ಕೆ ಹಾಗೂ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಹಿನ್ನೆಲೆ ಅಭಿಮಾನದ ದ್ಯೋತಕವಾಗಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಯಾರಿ ನಡೆಸಲಾಗಿದೆ ಎಂದರು.
ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಮಾತನಾಡಿ ಯಡಿಯೂರಪ್ಪನವರು ಪಕ್ಷದ ಶಕ್ತಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಕ್ಷವನ್ನು ಬಲಗೊಳಿಸಲು ಅವರು ಸಾಕಷ್ಟು ಕೊಡುಗೆ ನೀಡಿದ್ದಾಗಿ ಹೇಳಿದರು.
ಬಿಜೆಪಿ ಜಿಲ್ಲೆ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮನಾಥ ಶೆಟ್ಟಿ, ದಿನೇಶ್ ಅಮ್ಟೂರು, ಜಿಲ್ಲೆ ಉಪಾಧ್ಯಕ್ಷ ರಾಕೇಶ್ ರೈ, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಕ್ಷೇತ್ರ ಮಾಧ್ಯಮ ಪ್ರಮುಖ್ ಪುರುಷೋತ್ತಮ ಶೆಟ್ಟಿ ವಾಮದಪದವು, ಪಕ್ಷ ಪ್ರಮುಖರಾಧ ಡೊಂಬಯ್ಯ ಅರಳ, ಪ್ರಣಾಮ್ ರಾಜ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.


Be the first to comment on "ಬಿಎಸ್ ವೈ ಅಭಿಮಾನೋತ್ಸವಕ್ಕೆ ಜಿಲ್ಲೆಯಿಂದ ಐದು ಸಾವಿರದಷ್ಟು ಕಾರ್ಯಕರ್ತರು ಭಾಗಿ – ವೇದವ್ಯಾಸ ಕಾಮತ್, ಬಂಟ್ವಾಳ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳುವಿಕೆ – ರಾಜೇಶ್ ನಾಯ್ಕ್"