www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಹದಿನೈದು ದಿನಗಳ ಹಿಂದೆ ಕಸದ ಕೊಂಪೆಯಾಗಿದ್ದು ಬೀಳುವ ಸ್ಥಿತಿಯಲ್ಲಿದ್ದ ಪುರಸಭೆಯ ಬಂಟ್ವಾಳ ಬಡ್ಡಕಟ್ಟೆ ಬಸ್ ತಂಗುದಾಣಕ್ಕೀಗ ಜೀವಕಳೆ ಬಂದಿದೆ. ಬಸ್ಸುಗಳು ತಂಗುದಾಣದ ಎದುರೇ ಬಂದು ನಿಲ್ಲುತ್ತಿದ್ದು, ಪ್ರಯಾಣಿಕರು ಅಲ್ಲಿಯೇ ಹತ್ತುವಷ್ಟರ ಮಟ್ಟಿಗೆ ಈ ಭಾಗ ಬಸ್ ಮತ್ತು ಪ್ರಯಾಣಿಕರ ಉಪಯೋಗಕ್ಕೆ ಲಭಿಸಿದೆ.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಬಡ್ಡಕಟ್ಟೆಯಲ್ಲಿ ನಡೆಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜೇಸಿ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ತಂಡದ ಸದಸ್ಯರಿಗೆ ಶಿಥಿಲಗೊಂಡು ಕಸದ ಕೊಂಪೆಯಂತಿದ್ದ ಬಸ್ ತಂಗುದಾಣ ಕಂಡುಬಂದಿತ್ತು. ಅದನ್ನು ಸ್ವಚ್ಛಗೊಳಿಸಿದ ಬಳಿಕ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಅವರು ಇಡೀ ಬಸ್ ತಂಗುದಾಣಕ್ಕೆ ಹೊಸರೂಪವನ್ನು ರೋಟರಿ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ಜೇಸಿ ಬಂಟ್ವಾಳ ಮತ್ತು ಕಾರ್ಯನಿರತ ಪತ್ರಕರ್ತರ ಸಹಯೋಗದಲ್ಲಿ ಒದಗಿಸುವ ಪ್ರಸ್ತಾಪವನ್ನು ಪುರಸಭೆಗೆ ನೀಡಿದ ಫಲವಾಗಿ ಹೊಸ ರೂಪವನ್ನು ತಂಗುದಾಣ ಪಡೆಯಿತು.
ಇದೀ ನವೀಕೃತಗೊಂಡು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅವರಿಂದ ಉದ್ಘಾಟನೆಗೊಂಡಿರುವ ಬಂಟ್ವಾಳ ಬಡ್ಡಕಟ್ಟೆಯ ಪ್ರಯಾಣಿಕರ ತಂಗುದಾಣದತ್ತ ಜನರು ಚಿತ್ತ ಹರಿಸಿದ್ದಾರೆ.
ಸ್ವಚ್ಛ ಭಾರತ ಯೋಜನೆಯನ್ನು ಪ್ರಧಾನ ಮಂತ್ರಿಯವರು ಘೋಷಿಸಿದ್ದರೂ ಪ್ರಧಾನಿ ಅಥವಾ ಜನಪ್ರತಿನಿಧಿಗಳಿಂದ ಮಾತ್ರ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಂಘ ಸಂಸ್ಥೆಗಳು ಹಾಗೂ ಪ್ರತಿಯೊಬ್ಬ ಜನರೂ ಇದರಲ್ಲಿ ಕೈ ಜೋಡಿಸಿದಾಗ ದೇಶವನ್ನು ಸಂಪೂರ್ಣ ಸ್ವಚ್ಛತೆಯತ್ತ ಕೊಂಡೊಯ್ಯಲು ಸಾಧ್ಯವಿದೆ ಎಂದು ಉದ್ಘಾಟನೆ ಸಂದರ್ಭ ಶಾಸಕರು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಮತ್ತು ಜೇಸಿಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ್ದರು.
ಇದೀಗ ಬಸ್ಸುಗಳು ಬಸ್ ತಂಗುದಾಣದತ್ತ ಬರುತ್ತಿವೆ. ಸ್ಥಳೀಯ ಫನ್ ಟೈಮ್ ಹೋಟೆಲ್ ವತಿಯಿಂದ ತಂಗುದಾಣದಲ್ಲಿ ಕಸದ ತೊಟ್ಟಿ ಇದ್ದು, ಬಳಕೆಯಾಗುತ್ತಿದೆ. ಕಸ ಎಸೆಯದಂತೆ ಸ್ಥಳೀಯರು ಸಾರ್ವಜನಿಕರನ್ನು ಎಚ್ಚರಿಸುವಷ್ಟರ ಮಟ್ಟಿಗೆ ಪರಿಣಾಮ ಬೀರಿದೆ. ತಂಗುದಾಣದ ಎದುರೇ ಬಸ್ ಬರುವ ಕಾರಣ ಪ್ರಯಾಣಿಕರೂ ಬಸ್ ತಂಗುದಾಣವನ್ನು ಬಳಕೆ ಮಾಡುತ್ತಿದ್ದಾರೆ.
Be the first to comment on "ಅಂದು ಕಸದ ಕೊಂಪೆ, ಇಂದು ಜನರ ಉಪಯೋಗಕ್ಕೆ"