ಬಿ.ಸಿ.ರೋಡ್ ಫ್ಲೈಓವರ್ ತಳಭಾಗದ ರೂಪ ಬದಲು, ಪೊಳಲಿ ದ್ವಾರದಿಂದ ನಾರಾಯಣಗುರು ವೃತ್ತದವರೆಗಿನ ಜಾಗಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಬಿ.ಸಿ.ರೋಡ್ ಫ್ಲೈಓವರ್ ತಳಭಾಗದಲ್ಲಿ ಇಂಟರ್ ಲಾಕ್ ಅಳವಡಿಸುವುದು, ಹೂದೋಟ ನಿರ್ಮಿಸುವುದರ ಮೂಲಕ ಸುಂದರಗೊಳಿಸುವುದಷ್ಟೇ ಅಲ್ಲ, ಸಾರ್ವಜನಿಕರ ಬೇಡಿಕೆಯಾಗಿದ್ದ ಸರ್ವೀಸ್ ರೋಡ್ ಸಹಿತ ಹಲವು ರಸ್ತೆಗಳ ಪಕ್ಕ ದಾರಿದೀಪ ಹಾಕುವ ಮೂಲಕ ಮತ್ತೆ ಬೆಳಕು ಮೂಡಿಸುವ ಕಾರ್ಯಕ್ಕೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮುಂದಾಗಿದ್ದಾರೆ. ಈ ಕುರಿತು ಪುರಸಭೆಯಲ್ಲಿ ಅಕ್ಟೋಬರ್ ೧ರಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಇದನ್ನು ಪ್ರಸ್ತಾಪಿಸಿದ್ದಲ್ಲದೆ, ಅ.೨ರಂದು ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲೂ ಒತ್ತಿ ಹೇಳಿದ್ದರು. ಅದಾದ ಬಳಿಕ ಸಭೆ ನಡೆದಿದ್ದು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್ ಅವರಿಗೆ ಈ ಕಾರ್ಯಯೋಜನೆಯನ್ನು ಕಾರ್ಯಗತಗೊಳಿಸುವ ಹೊಣೆ ನೀಡಲಾಗಿತ್ತು.
ಏನಾಗಲಿದೆ:
ಎಲ್ಲ ಅಂದುಕೊಂಡಂತೆ ನಡೆದರೆ, ಬಿ.ಸಿ.ರೋಡಿನ ಕೈಕಂಬದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗೆ ಎಲ್ಲೆಲ್ಲಿ ಮುಸ್ಸಂಜೆಯಾಗುವ ಹೊತ್ತಿಗೆ ಕತ್ತಲಾಗಿ ಸಾರ್ವಜನಿಕರಿಗೆ ನಡೆಯಲೂ ಕಷ್ಟವಾಗುತ್ತದೋ ಅಲ್ಲೆಲ್ಲ ದಾರಿದೀಪ ಅಳವಡಿಸಲಾಗುತ್ತದೆ. ರಸ್ತೆ ಹೊಂಡಗಳನ್ನು ಮುಚ್ಚಲಾಗುತ್ತದೆ. ಮೇಲ್ಸೇತುವೆ ಕೆಳಭಾಗದಲ್ಲಿ ಇಂಟರ್ ಲಾಕ್ ಹಾಕಲಾಗುತ್ತದೆ. ಹಾಗೂ ಹೂದೋಟ ನಿರ್ಮಿಸಲಾಗುತ್ತದೆ. ಬಿ.ಸಿ.ರೋಡಿನ ನೂತನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದೊಳಗೆ ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ ಗಳು ಪ್ರವೇಶಿಸುವ ನಿಟ್ಟಿನಲ್ಲಿ ಬಸ್ ನಿಲ್ದಾಣದ ಎದುರು ವೃತ್ತ ನಿರ್ಮಿಸಲಾಗುತ್ತದೆ.
ಮಂಗಳೂರಿನ ವಿನ್ಯಾಸತಜ್ಞ ಧರ್ಮರಾಜ್ ಅವರೊಂದಿಗೆ ಸ್ಥಳ ಪರಿಶೀಲನೆಯನ್ನು ನಡೆಸಲಾಯಿತು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ವೈ. ಉಮೇಶ್ ಭಟ್, ಕಿರಿಯ ಇಂಜಿನಿಯರ್ ಅರುಣ್ ಪ್ರಕಾಶ್, ನವೀನ್, ಪುತ್ತೂರು ಕೆ.ಎಸ್.ಆರ್.ಟಿ.ಸಿ ಡಿಸಿ ವಿಭಾಗೀಯ ನಿಯಂತ್ರಕ ನಾಗರಾಜ್ ಶಿರಾಲಿ, ಕೆ.ಎಸ್.ಆರ್.ಟಿ.ಸಿ ಬಿ.ಸಿ.ರೋಡ್ ವಿಭಾಗ ಮಾನ್ಯೇಜರ್ ಇಸ್ಮಾಯಿಲ್, ಸಿಬ್ಬಂದಿ ರಮೇಶ್ ಶೆಟ್ಟಿ, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಬಿಜೆಪಿ ಪ್ರಮುಖರಾದ ಬಿ.ದೇವದಾಸ ಶೆಟ್ಟಿ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಸೀತಾರಾಮ ಪೂಜಾರಿ, ನಂದರಾಮ ರೈ, ಪ್ರವೀಣ್ ಗಟ್ಟಿ, ಯಶವಂತ ನಾಯ್ಕ ಉಪಸ್ಥಿತರಿದ್ದರು.
ಬಿ.ಸಿ.ರೋಡ್ ಬ್ಯೂಟಿಯಾಗಲು ನಡೆಯಲಿದೆ ಮೇಕಪ್
Be the first to comment on "ಬಿ.ಸಿ.ರೋಡ್ ಅಭಿವೃದ್ಧಿ ನಕಾಶೆ ತಯಾರಿಗೆ ಪರಿಶೀಲನೆ"