ಬಂಟ್ವಾಳ: ಬಂಟ್ವಾಳದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ತಾಲೂಕು ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಡೆಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಸಾಮಾನ್ಯ ಜೀವನ ಸಾಗಿಸುವ ವ್ಯಕ್ತಿಯೊಬ್ಬ ಮಹರ್ಷಿಯಾಗಬಹುದು ಎಂಬುದಕ್ಕೆ ವಾಲ್ಮೀಕಿ ಉದಾಹರಣೆ ಎಂದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ದಾರ್ಶನಿಕರ ತತ್ವ ಸಿದ್ಧಾಂತ ಮುಂದಿನ ಪೀಳಿಗೆಗೆ ತಿಳಿಯಲು ಕಾರ್ಯಕ್ರಮ ಸಹಕಾರಿ ಎಂದರು.
ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಿದ ಲೇಖಕ ರಾಧಾಕೃಷ್ಣ ಕಲ್ಚಾರ್ , ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯನಾಗಿ ಕಾವ್ಯಸೃಷ್ಟಿ ಮಾಡಬಲ್ಲ ಹಾಗೂ ಪುರುಷೋತ್ತಮನಾಗಬಲ್ಲ ಎಂಬುದಕ್ಕೆ ವಾಲ್ಮೀಕಿಯ ಜೀವನಚರಿತ್ರೆ ಉದಾಹರಣೆ. ತಪಸ್ಸು ಮಾಡುತ್ತಿದ್ದ ವೇಳೆ ಹುತ್ತ ಮೈ ಮತ್ತು ಮನಸ್ಸನ್ನು ಆವರಿಸಿತ್ತು, ಅದು ಆತನನ್ನು ಮನುಷ್ಯ ಮತ್ತು ಕವಿಯನ್ನಾಗಿ ಮಾಡಿದವು. ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಕರುಣಾರಸ ಪ್ರಧಾನವಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ತುಂಗಪ್ಪ ಬಂಗೇರ ಶುಭ ಹಾರೈಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದಿನೇಶ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವಿನಯಕುಮಾರಿ ಸ್ವಾಗತಿಸಿದರು.



Be the first to comment on "ಬಂಟ್ವಾಳ ತಾಲೂಕು ಮಟ್ಟದ ವಾಲ್ಮೀಕಿ ಜಯಂತಿ ಆಚರಣೆ"