ಆಸರೆ ಗೆಳೆಯರ ಬಳಗ ಮಂಗಳೂರು ಸಂಸ್ಥೆಯ ದಶಮಾನೋತ್ಸವ ಅಂಗವಾಗಿ ‘ಆಸರೆ ದಶ ಸಂಭ್ರಮ 2027’ ಕಾರ್ಯಕ್ರಮ ಜನವರಿ 26ರಂದು ಮಂಗಳೂರಿನ ಮಲ್ಲಿಕಟ್ಟೆಯ ಜುಗುಲ್ ಹಾಲ್‌ನಲ್ಲಿ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸಾಧನೆಗಾಗಿ ಸಿದ್ಧಕಟ್ಟೆಯ ಪ್ರಗತಿಪರ ಕೃಷಿಕ ಮಹಿಳೆ ರೀಟಾ ಮರಿಯಾ ಮಿನೆಜಸ್ ಅವರಿಗೆ ಆಸರೆ ಕೃಷಿ ರತ್ನ ಗೌರವ–2027 ನೀಡಿ ಸನ್ಮಾನಿಸಲಾಗುವುದು. ಕೃಷಿ, ಹೈನುಗಾರಿಕೆ ಹಾಗೂ ಸಮಾಜ ಸೇವೆಯಲ್ಲಿ ರೀಟಾ ಮರಿಯಾ ಮಿನೇಜಸ್ ಗಮನ ಸೆಳೆದಿದ್ದಾರೆ.

ಕೃಷಿ, ಹೈನುಗಾರಿಕೆ ಹಾಗೂ ಸಮಾಜ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿರುವ ಸಾಧಕಿ ರೀಟಾ ಮರಿಯಾ ಮಿನೇಜಸ್ ಅವರು ಇಂದಿನ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಮಾದರಿಯಾಗಿದ್ದಾರೆ.ಬ್ರಹ್ಮವರದ ಆರೂರಿನಲ್ಲಿ ಸಲ್ವಡಾರ್ ಡಿ’ಸೋಜಾ ಹಾಗೂ ಪ್ರಸಿಲ್ಲಾ ದಂಪತಿಯ ಪುತ್ರಿ ರೀಟಾ ಮರಿಯಾ ಅವರು, ಕೃಷಿಕ ಕುಟುಂಬದಿಂದ ಬಂದವರು. ಶಾಲಾ ದಿನಗಳಲ್ಲಿಯೇ ತಂದೆ-ತಾಯಿಯೊಂದಿಗೆ ಕೃಷಿ, ಹೈನುಗಾರಿಕೆ ಮತ್ತು ತರಕಾರಿ ಬೆಳೆಯುವ ಕಾರ್ಯಗಳಲ್ಲಿ ಆಸಕ್ತಿ ವಹಿಸಿದ್ದರು.
2004ರಲ್ಲಿ ಜೋಕಿಂ ಮಿನೇಜಸ್ ಎಲ್ವೆಸ್ ಅವರೊಂದಿಗೆ ವಿವಾಹವಾದರು.ಸಿದ್ಧಕಟ್ಟೆ ಚರ್ಚಿನ ಪವಿತ್ರ ಹೃದಯ ವಾಲಿಯ ಗುರಿಕಾರರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಥೋಲಿಕ್ ಸಭಾ ಸಿದ್ಧಕಟ್ಟೆ ಘಟಕದ ಅಧ್ಯಕ್ಷರಾಗಿ 2 ವರ್ಷ ಸೇವೆ ಸಲ್ಲಿಸುವುದರೊಂದಿಗೆ, ಸ್ತ್ರೀ ಸಂಘಟನೆಯಲ್ಲಿ ಮತ್ತು ಸ್ವ ಸಹಾಯ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಿದ್ಧಕಟ್ಟೆ ಹಾಲಿನ ಡೈರಿಯಲ್ಲಿ ಇವರ ಕೃಷಿ ಹಾಗೂ ಹೈನುಗಾರಿಕೆ ಚಟುವಟಿಕೆಗಳನ್ನು ಗುರುತಿಸಿ ‘ಓರ್ವ ಸಾಧಕಿ’ಯಾಗಿ ಸನ್ಮಾನಿಸಲಾಗಿದೆ. ಅಲ್ಲದೆ, ವಿವಿಧ ಸಂಘ-ಸಂಸ್ಥೆಗಳೂ ಸಹ ಇವರನ್ನು ಗೌರವಿಸಿವೆ.



Be the first to comment on "ಆಸರೆ ದಶಸಂಭ್ರಮ ಸನ್ಮಾನಕ್ಕೆ ಕೃಷಿ ಸಾಧಕಿ ರೀಟಾ ಮಿನೇಜಸ್ ಆಯ್ಕೆ"