
ಭರತನಾಟ್ಯವು ಕೇವಲ ನೃತ್ಯಕಲೆಯಲ್ಲ; ಸಂಸ್ಕಾರ, ಶಿಸ್ತು ಹಾಗೂ ಗುರು-ಶಿಷ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಬಲ ಮಾಧ್ಯಮವಾಗಿದೆ. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸುವ ಜತೆಗೆ, ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ವೃದ್ಧಿಸುವ ಶಕ್ತಿ ಈ ಕಲೆಯಲ್ಲಿದೆ ಎಂದು ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
ಶುಕ್ರವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಕಲ್ಲಡ್ಕದ ಕಲಾನಿಕೇತನ ಸಂಸ್ಥೆಯ ‘ರಜತ ಕಲಾಯಾನ’ದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಸಂಸ್ಥೆಯ ಮೂಲಕ ಇನ್ನಷ್ಟು ಉತ್ತಮ ಕಲಾವಿದರು ರೂಪುಗೊಳ್ಳಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಭರತನಾಟ್ಯವು ಹೃದಯಕ್ಕೆ ವಿಶಿಷ್ಟ ಕಂಪನವನ್ನು ನೀಡುವುದರ ಜತೆಗೆ ಮಾನಸಿಕ ಶಕ್ತಿಯನ್ನೂ ತುಂಬುತ್ತದೆ. ಭರತನಾಟ್ಯದಲ್ಲಿ ಹಿನ್ನೆಲೆ ಗಾಯಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ ಎಂದರು.
ಪುತ್ತೂರಿನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಕಲ್ಚರ್ (ರಿ.) ಸಂಸ್ಥೆಯ ನಿರ್ದೇಶಕಿ, ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಹಾಗೂ ಗೋವಾದ ಶಿರೋಡಾದ ಗೋಮಂತಕ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ನೀಲೇಶ್ ಪಿ. ಕೊರ್ಡೆ ಉಪಸ್ಥಿತರಿದ್ದರು.
ಕಲಾನಿಕೇತನದಲ್ಲಿ ತರಬೇತಿ ಪಡೆದು ವಿದ್ವತ್ ಪದವಿ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಹಾಗೂ ಗುರು ವಿದುಷಿ ವಿದ್ಯಾ ಮನೋಜ್ ಸ್ವಾಗತಿಸಿದರು. ವಿದುಷಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ್ ಅಗ್ರಬೈಲು ಧನ್ಯವಾದ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಪುಷ್ಪಾಂಜಲಿ, ರಾಮ ರಾಮಾಯಣ, ಕೃಷ್ಣಾ ಲೀಲೆ, ಮಹಿಷಮರ್ಧಿನಿ, ಅಯಗಿರಿನಂದಿನಿ, ತಿಲ್ಲಾಣ ನೃತ್ಯ ರೂಪಕ ನಡೆಯಿತು


Be the first to comment on "ಕಲ್ಲಡ್ಕ ಕಲಾನಿಕೇತನದ ‘ರಜತ ಕಲಾಯಾನ’ ಸಮಾರೋಪ"