
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನ ಮಂತ್ರಿಯಾಗಿ ಸಾರ್ವಜನಿಕ ಸೇವೆಯಲ್ಲಿ ಯಶಸ್ವಿ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ದ.ಕ. ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡ ಸೇವಾಜ್ಯೋತಿ ಯಾತ್ರೆಯ ಭವ್ಯ ಸಮಾರೋಪ ಸಮಾರಂಭ ಬಂಟ್ವಾಳದ ಬಂಟರ ಭವನದಲ್ಲಿ ಅ.7ರಂದು ನಡೆಯಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತಿಳಿಸಿದ್ದಾರೆ.

ಬಿ.ಸಿ ರೋಡ್ ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಗತ್ತೇ ಕೊಂಡಾಡುವ ಹಾಗೆ ನರೇಂದ್ರ ಮೋದಿ ಅವರ ಆಡಳಿತ ಸರ್ವ ಕ್ಷೇತ್ರದಲ್ಲಿಯೂ ವಿಸ್ತರಿಸಿ ಮಾದರಿಯಾಗಿ ರೂಪಿತವಾಗಿದೆ. ಇದರ ವಿಸ್ತಾರ ಲೋಕವನ್ನು ಸರ್ವರೂ ತಿಳಿಯುವ ಸದಾಶಯದಿಂದ ಸೇವಾ ಜ್ಯೋತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸೇವಾ ಸಂಕಲ್ಪ ಎಂಬ ಅಭಿಯಾನದಡಿ ಸೇವಾ ಜ್ಯೋತಿ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ರ್ಯಾಲಿ ಮುಖಾಂತರ ಸೇವಾ ಜ್ಯೋತಿ ಯಾತ್ರೆಯಲ್ಲಿ ಜನರು ಭಾಗವಹಿಸಲಿದ್ದಾರೆ ಎಂದರು.

ಬಿ.ಸಿ ರೋಡ್ ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ವಾಹನದ ಮೂಲಕ ಅಂದು ಬೆಳಗ್ಗೆ 8.30ರ ಸುಮಾರಿಗೆ ಬಂಟ್ವಾಳ ಬಂಟರ ಭವನಕ್ಕೆ ತಲುಪಲಿದ್ದು ವಿವಿಧ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಬಂಟರ ಭವನಕ್ಕೆ ಬೆಳಗ್ಗೆ 9.30ರ ಸುಮಾರಿಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಸೇವಾ ಜ್ಯೋತಿ ಆಗಮಿಸಲಿದ್ದು, ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಬಿಜೆಪಿ ವರಿಷ್ಠ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಸಂಸದರು, ಶಾಸರು, ಬಿಜೆಪಿ ಜಿಲ್ಲಾಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಪ್ರಮುಖ ಮುಖಂಡರು ಜತೆಯಲ್ಲಿ ಇರಲಿದ್ದಾರೆ ಎಂದರು. ಬಿಜೆಪಿ ಬಂಟ್ವಾಳ ಮುಖಂಡರಾದ ಚೆನ್ನಪ್ಪ ಕೋಟ್ಯಾನ್, ಸುದರ್ಶನ್ ಬಜ, ದಿನೇಶ್ ಅಮ್ಟೂರು, ಸುಲೋಚನ ಜಿ.ಕೆ ಭಟ್, ಶಿವಪ್ರಸಾದ್, ಪುರುಷೋತ್ತಮ ಉಪಸ್ಥಿತರಿದ್ದರು.
7ರಂದು ಹೆದ್ದಾರಿ ಅಗಲೀಕರಣಕ್ಕೆ ಶಿಲಾನ್ಯಾಸ
ಬಂಟ್ವಾಳ: ಬಿ.ಸಿ ರೋಡ್ ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಗಾಣದಪಡ್ಪು ನಾರಾಯಣ ಗುರು ಮಂದಿರದವರೆಗೆ 18.84 ಕೋ.ರೂ. ವೆಚ್ಚದಲ್ಲಿ ಹೆದ್ದಾರಿ ಅಗಲೀಕರಣದ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಅದರ ಶಿಲಾನ್ಯಾಸ ಕಾರ್ಯಕ್ರಮ ಅ.7ರಂದು ಬೆಳಗ್ಗೆ 8.30ರ ಸುಮಾರಿಗೆ ನೆರವೇರಲಿದೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ.


Be the first to comment on "7ರಂದು ಸೇವಾಜ್ಯೋತಿ ಯಾತ್ರೆ ಸಮಾರೋಪ: ಶಾಸಕ ರಾಜೇಶ್ ನಾಯ್ಕ್"