ಪುತ್ತೂರು ಬಾಲವನ ಈಜುಕೊಳದಲ್ಲಿ ನಡೆದ 37ನೇ ರಾಷ್ಟ್ರೀಯ ಈಜು ಚಾಂಪಿಯನ್ಶಿಪ್ನಲ್ಲಿ ಕಲ್ಲಡ್ಕ ಶ್ರೀರಾಮ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅನರ್ಘ್ಯ ಎ.ಆರ್. ಅವರು 1 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ರಾಷ್ಟ್ರಮಟ್ಟದ ಮುಂದಿನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಮತ್ತು ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. 19 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನರ್ಘ್ಯ, 200 ಮೀಟರ್ ಇಂಡಿವಿಜುವಲ್ ಮೆಡ್ಲೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, 200 ಮೀಟರ್ ಬ್ಯಾಕ್ಸ್ಟ್ರೋಕ್ ಮತ್ತು 400 ಮೀಟರ್ ಫ್ರೀಸ್ಟೈಲ್ ವಿಭಾಗಗಳಲ್ಲಿ ತಲಾ ಒಂದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಅಮೋಘ ಸಾಧನೆಯೊಂದಿಗೆ ಅವರು ಗೋವಾದಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಈಜು ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ ಬಿ.ಕೆ. ನಾಯ್ಕ್, ಉಮೇಶ್ ವಿಟ್ಲ ಮತ್ತು ಅಶೋಕ್ ದೇವಾಡಿಗ ಅವರ ಶಿಷ್ಯೆಯಾಗಿದ್ದಾರೆ. ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಈಜುಕೊಳದ ಮುಖ್ಯ ತರಬೇತುದಾರ ಲೋಕರಾಜ್ ವಿಟ್ಲ ಹಾಗೂ ತರಬೇತುದಾರರಾದ ಸಂಜಯ್ ಮತ್ತು ಗಗನ್ ಅವರಿಂದ ವಿಶೇಷ ತರಬೇತಿ ಪಡೆಯುತ್ತಿದ್ದಾರೆ. ಇವರು ಅಶೋಕ್ ಕುಮಾರ್ ಬರಿಮಾರು ಮತ್ತು ರೋಹಿಣಿ ಬಿ. ದಂಪತಿಯ ಪುತ್ರಿ.



Be the first to comment on "ರಾಷ್ಟ್ರೀಯ ಈಜು ಚಾಂಪಿಯನ್ಶಿಪ್ನಲ್ಲಿ ಕಲ್ಲಡ್ಕ ಶ್ರೀರಾಮ ಪಿಯು ಕಾಲೇಜು ವಿದ್ಯಾರ್ಥಿನಿ ಅನರ್ಘ್ಯ ಎ.ಆರ್.ಗೆ ಚಿನ್ನದ ಪದಕ"