ಬಂಟ್ವಾಳ: ಮುಡಿಪುವಿನ ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ವತಿಯಿಂದ ಕಲಾಶ್ರಯ ದಾಸಕೋಡಿ ಸಹಭಾಗಿತ್ವದಲ್ಲಿ ವಿಶ್ವಭಾರತಿ ಯಕ್ಷಸಂಭ್ರಮ 900ರ ಸಂಭ್ರಮ ಯಕ್ಷತ್ರಿವೇಣಿ ಎಂಬ ಹೆಸರಲ್ಲಿ ಮೂರು ದಿನಗಳ ತಾಳಮದ್ದಳೆ ಕಾರ್ಯಕ್ರಮ ದಾಸಕೋಡಿಯ ಕಲಾಶ್ರಯದಲ್ಲಿ ಉದ್ಘಾಟನೆಗೊಂಡಿತು.

ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದ ಸಜೀಪ ಮಾಗಣೆ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್ ಮಾತನಾಡಿ, ಯಕ್ಷಗಾನವನ್ನು ಉಳಿಸಿ ಪೋಷಿಸುವ ಕಾರ್ಯ ಮಹತ್ತರವಾದದ್ದು. ಆಧುನಿಕ ಸೌಕರ್ಯಗಳಿರುವ ಹಿನ್ನೆಲೆ ಕಾರ್ಯಕ್ರಮಗಳಿಗೆ ಆಗಮಿಸುವ ಪ್ರೇಕ್ಷಕರ ಸಂಖ್ಯೆ ವಿರಳವಾದರೂ ತಾಳಮದ್ದಳೆಯ ಅಭಿಮಾನಿಗಳು ಉತ್ತಮ ಸಂಖ್ಯೆಯಲ್ಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಹಾಗೂ ವಾಗ್ಮಿ ಕಶೆಕೋಡಿ ಸೂರ್ಯನಾರಾಯಣ ಭಟ್, ಯಕ್ಷಗಾನದಲ್ಲಿ ತಾಳಮದ್ದಳೆಯಲ್ಲಿ ಅರ್ಥ ಹೇಳುವುದು ಮತ್ತು ರಂಗಸ್ಥಳದಲ್ಲಿ ವೇಷ ಹಾಕಿ ಅರ್ಥ ಹೇಳುವುದರ ನಡುವಿನ ವ್ಯತ್ಯಾಸಗಳನ್ನು ಕಲಾವಿದ ಗಮನಿಸಬೇಕು. ಕಲಾಶ್ರಯದಲ್ಲಿ ಸಂಗೀತ, ನೃತ್ಯ, ಯಕ್ಷಗಾನದಂಥ ಭಾರತೀಯ ಸಂಸ್ಕೃತಿಯ ಕಲಾಪ್ರಕಾರಗಳಿಗೆ ಉತ್ತೇಜನ ನೀಡುವ ಕಾರ್ಯ ನಡೆಸಲಾಗುತ್ತಿದೆ ಎಂದರು.

ಪತ್ರಕರ್ತ ಹರೀಶ ಮಾಂಬಾಡಿ ಶುಭ ಹಾರೈಸಿ, ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಕಲಾವಿದರು ಹಾಗೂ ಸಂಘಟಕರಿಗೆ ಕಾರ್ಯಕ್ರಮಗಳನ್ನು ಆಯೋಜಿಸುವುದು ದೊಡ್ಡ ಸವಾಲು ಎಂದರು.
ಸರಯೂ ಯಕ್ಷ ಬಳಗ ಕೋಡಿಕಲ್ ಸಂಚಾಲಕ ರವಿ ಅಲೆವೂರಾಯ ಮಾತನಾಡಿ, ಯಕ್ಷಗಾನ ಸಂಘಟನೆ ಅತ್ಯಂತ ಕಷ್ಟವಾದದ್ದು, ಅದರಲ್ಲೂ 900 ಪ್ರದರ್ಶನಗಳನ್ನು ನೀಡಲು ಪ್ರಶಾಂತ್ ಹೊಳ್ಳ ಅವರ ಪ್ರಯತ್ನ ಗಮನಾರ್ಹ ಎಂದರು. ಟ್ರಸ್ಟ್ ಮುಖ್ಯಸ್ಥ ಪ್ರಶಾಂತ್ ಹೊಳ್ಳ ಸ್ವಾಗತಿಸಿದರು. ಕೀರ್ತನಾ ಹೊಳ್ಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.



Be the first to comment on "ವಿಶ್ವಭಾರತಿ ಯಕ್ಷ ಸಂಭ್ರಮ: 900ರ ಸಂಭ್ರಮ"