
ದಾರಿಮೀಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಸಂಸ್ಥೆಯ 25ನೇ ವಾರ್ಷಿಕ ಬೆಳ್ಳಿಹಬ್ಬ ಮಹೋತ್ಸವ ಹಾಗೂ ಶಂಸುಲ್ ಉಲಮಾ ಅಂಡ್ ನೇರ್ಚೆ ಸಮಾವೇಶ ಅಕ್ಟೋಬರ್ 3ರಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ. ರೋಡ್ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿಯ ಎಚ್. ಎಚ್. ಆಡಿಟೋರಿಯಂನಲ್ಲಿ ನಡೆಯಲಿದೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಬಹು| ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳ್ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಚೇರ್ಮನ್ ಕೆ.ಎಂ.ಖಾಸಿಮ್ ದಾರಿಮಿ ಸವಣೂರು ಹೇಳಿದರು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರೂ, ಜಾಮಅ: ದಾರುಸ್ಸಲಾಮ್ ಅಲ್ ಇಸ್ಲಾಮಿಯ್ಯಾ ನಂದಿ ಇದರ ಪ್ರಧಾನ ಕಾರ್ಯದರ್ಶಿಯೂ ಆದ ಬಹು| ಶೈಖುನಾ ಎ.ವಿ. ಉಸ್ತಾದ್ ಅನುಗ್ರಹ ಭಾಷಣ ಮಾಡಲಿದ್ದಾರೆ.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರಾದ ಬಹು| ಶೈಖುನಾ ಅಬ್ದುಸ್ಸಲಾಮ್ ಬಾಖವಿ ಮುಖ್ಯ ಭಾಷಣ ಮಾಡಲಿದ್ದು, ಬಹು| ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ಹಾಗೂ ಬಹು| ಉಸ್ಮಾನುಲ್ ಫೈಝಿ ತೋಡಾರ್ ಉಸ್ತಾದ್ ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳ ಕುರಿತು ವಿವಿಧ ಗಣ್ಯರು ಮಾತನಾಡಲಿದ್ದಾರೆ.
ಧ್ವಜಾರೋಹಣ ಹಾಗೂ ವಿವಿಧ ಕಾರ್ಯಕ್ರಮಗಳು: ಬೆಳ್ಳಿಹಬ್ಬ ಸಮಾವೇಶದ ಸ್ವಾಗತ ಸಮಿತಿ ಚೇರ್‌ಮ್ಯಾನ್ ಬಹು| ಕೆ.ಎಂ. ಖಾಸಿಮ್ ದಾರಿಮಿ ಸವಣೂರು ಹಾಗೂ ಬಹು| ಝುಬೈರ್ ದಾರಿಮಿ ಅಕ್ಕರಂಗಡಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಲಿದೆ. ಬಳಿಕ ಕೆ.ಎಸ್. ಹೈದರ್ ದಾರಿಮಿ ಕರಾಯ ಅವರ ನೇತೃತ್ವದಲ್ಲಿ ಸ್ಥಳೀಯ ಮುಖಾಂ ಝಿಯಾರತ್‌ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಸಂಘಟನೆಯ ಅಧ್ಯಕ್ಷರಾದ ಬಹು| ಕೆ.ಬಿ. ಅಬ್ದುಲ್ ಖಾದಿರ್ ದಾರಿಮಿ ಕೊಡಂಗಾಯಿ ಅಧ್ಯಕ್ಷತೆ ವಹಿಸಲಿದ್ದು, ಬಹು| ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಗಳ್ ಬೆಳತಂಗಡಿ ದುವಾ ನಡೆಸಲಿದ್ದಾರೆ. ಬಹು| ಮಾಹಿನ್ ದಾರಿಮಿ ಮೌಲಿದ್‌ಗೆ ನೇತೃತ್ವ ವಹಿಸಲಿದ್ದಾರೆ. ಬಹು| ಸಯ್ಯದ್ ಅಮೀರ್ ತಂಗಳ್ ಕಿನ್ಯ, ಬಹು| ಸಯ್ಯದ್ ಹುಸೈನ್ ಬಾಅಲವಿ ತಂಗಳ್ ಕುಕ್ಕಾಜೆ ಹಾಗೂ ಬಹು| ಝುಬೈರ್ ದಾರಿಮಿ ಅಕ್ಕರಂಗಡಿ ಆಶಂಸಾ ಭಾಷಣ ಮಾಡಲಿದ್ದಾರೆ.
‘ದಾರಿಮೀಸ್ ಕ್ಷೇಮನಿಧಿ’ಗೆ ಚಾಲನೆ: ಸಮಾರಂಭದಲ್ಲಿ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ‘ದಾರಿಮೀಸ್ ಕ್ಷೇಮನಿಧಿ’ ಯೋಜನೆಗೆ ಬಹು| ಸಯ್ಯಿದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಗಳ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಅನುಗ್ರಹ ಭಾಷಣ, ಅನುಸ್ಮರಣಾ ಭಾಷಣ, ಮುಖ್ಯ ಭಾಷಣ ಹಾಗೂ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ.
ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಗಣ್ಯರು, ಉಲಮಾಗಳು, ದಾರಿಮಿ ವಿದ್ವಾಂಸರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಯಶಸ್ವಿಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದಾರಿಮೀಸ್ ಜಿಲ್ಲಾಧ್ಯಕ್ಷ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಉಪಾಧ್ಯಕ್ಷ ಹನೀಫ್ ದಾರಿಮಿ ಸವಣೂರು ಮತ್ತು ಸ್ವಾಗತ ಸಮಿತಿ ಕನ್ವೀನರ್ ಝುಬೈರ್ ದಾರಿಮಿ ಅಕ್ಕರಂಗಡಿ ಉಪಸ್ಥಿತರಿದ್ದರು.


Be the first to comment on "ದಾರಿಮೀಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಬೆಳ್ಳಿಹಬ್ಬ ಮಹೋತ್ಸವ"