ವಿದ್ಯಾರ್ಥಿಗಳು ಸಾಹಿತ್ಯದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ ತಿಳಿವಳಿಕೆ ಮೊಳೆತು ಸಾಹಿತ್ಯ ಕೃಷಿ ಹುಲುಸಾಗಿ ಬೆಳೆಯುವಂತಾಗಬೇಕು ಹಾಗೂ ಪ್ರತಿಯೊಬ್ಬರೂ ಸಾಹಿತ್ಯಾಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಹೇಳಿದರು.
ಪಾಣೆಮಂಗಳೂರಿನ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಶಾರದಾ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ದತ್ತಿ ಉಪನ್ಯಾಸ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀ ಶಾರದಾ ಪ್ರೌಢಶಾಲೆಯ ಸಂಚಾಲಕರಾದ ಡಾ. ಪಿ. ವಿಶ್ವನಾಥ್ ನಾಯಕ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ವಿಶೇಷ ದತ್ತಿ ಉಪನ್ಯಾಸ: ಹಿರಿಯ ಸಾಹಿತಿ ಸವಿತಾ ಎಸ್. ಭಟ್ ಅಡ್ವಾಯಿ, ‘ಸಂಸ್ಕೃತ ಮತ್ತು ಕನ್ನಡದ ಬಾಂಧವ್ಯ ಹಾಗೂ ಪ್ರೊ. ಎಂ. ರಾಮಕೃಷ್ಣ ಭಟ್ ಅವರ ಸಾಹಿತ್ಯ’ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ದತ್ತಿ ಉಪನ್ಯಾಸ ನೀಡಿದರು. ದತ್ತಿ ನಿಧಿ ದಾನಿಗಳಾದ ದಿ. ರಾಮಕೃಷ್ಣ ಭಟ್ ಅವರ ಪುತ್ರ ಡಾ. ಶಿವಕುಮಾರ್ ಅವರು ಮಾತನಾಡಿ, ತಮ್ಮ ತಂದೆಯ ಶಿಸ್ತು ಮತ್ತು ಪಾಂಡಿತ್ಯದ ಕುರಿತು ಸಭೆಗೆ ಪರಿಚಯಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶಿವಪ್ಪ ನಾಯ್ಕ, ಹಿರಿಯ ಶಿಕ್ಷಕಿ ವೀಣಾ ಕೆ. ಹಾಗೂ ದತ್ತಿ ನಿಧಿ ದಾನಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶಿವಪ್ಪ ನಾಯ್ಕ್ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ಕನ್ನಡ ಭಾಷಾ ಶಿಕ್ಷಕ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸ್ವಾತಿ ರಾವ್ ವಂದಿಸಿದರು.



Be the first to comment on "ವಿದ್ಯಾರ್ಥಿಗಳು ಸಾಹಿತ್ಯಾಭಿಮಾನ ಬೆಳೆಸಿಳ್ಳುವ ಅಗತ್ಯವಿದೆ: ಡಾ. ಎಂ.ಪಿ. ಶ್ರೀನಾಥ್"