
ಜನ ಬಸ್ಸಿಗಾಗಿ ಕಾಯುವ ಜಾಗ ಹಾಗೂ ಬಸ್ಸುನಿಲುಗಡೆಯಾಗುವ ಸ್ಥಳ ಒಂದೆಡೆಯಾದರೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬಸ್ ಸ್ಟಾಪ್ ಬೋರ್ಡ್ ಇರುವುದು ಇನ್ನೊಂದು ಕಡೆ...ಬಸ್ಸಿಗಾಗಿ ಪ್ರಯಾಣಿಕರು ನಿಲ್ಲಲು ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಇರುವುದು ಮತ್ತೊಂಡು ಕಡೆ.
ಬಸ್ಸು ನಿಲ್ಲುವ ಕಡೆ ಪ್ರಯಾಣಿಕರ ತಂಗುದಾಣವಿಲ್ಲ, ಪ್ರಯಾಣಿಕರ ತಂಗುದಾಣವಿರುವಲ್ಲಿ ಬಸ್ಸು ನಿಲ್ಲುವುದಿಲ್ಲ ಮತ್ತು ಅಲ್ಲಿಗೆ ಜನ ಹೋಗುವುದೇ ಇಲ್ಲ.
ಥೇಟ್ ಬಿ.ಸಿ.ರೋಡ್ ನಂತೆ ಇರುವ ಜಾಗವಿದು ಮೆಲ್ಕಾರ್.

ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪಥ ಹೆದ್ದಾರಿ ನಿರ್ಮಾಣಗೊಂಡ ಬಳಿಕ ಮೆಲ್ಕಾರ್ ಅನ್ನು ಫ್ಲೈಓವರ್ ಅಂಡರ್ ಪಾಸ್ ಮಾಡುವ ಮೂಲಕ ಇಬ್ಬಾಗ ಮಾಡಲಾಯಿತು. ಇರುವ ಸರ್ವೀಸ್ ರಸ್ತೆ ವಾಹನ ಸಂಚಾರಕ್ಕೆ ಬಳಕೆಯಾಯಿತೇ ವಿನಃ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಅನಾಥರಾದರು.

ಪುತ್ತೂರು, ಉಪ್ಪಿನಂಗಡಿ, ವಿಟ್ಲ ಭಾಗಗಳಿಂದ ಬರುವ ಬಸ್ಸುಗಳು, ಸಜೀಪ, ಸಾಲೆತ್ತೂರು ಈ ಭಾಗಳಿಂದ ಬರುವ ಬಸ್ಸುಗಳು ಮೆಲ್ಕಾರ್ ನಲ್ಲಿ ಪ್ರಯಾಣಿಕರನ್ನು ಪಿಕ್ ಅಪ್ ಮಾಡಿಕೊಳ್ಳಲು ಸರ್ವಿಸ್ ರಸ್ತೆಯಲ್ಲಿ, ಸರಾ ಆರ್ಕೆಡ್ ನ ಮುಂಭಾಗ ನಿಲ್ಲುತ್ತವೆ. ಇದು ಚತುಷ್ಪಥ ಹೆದ್ದಾರಿ ಆಗುವ ಮೊದಲಿನಿಂದಲೂ ಇದ್ದ ವ್ಯವಸ್ಥೆ. ಇಲ್ಲಿ ಪ್ರಯಾಣಿಕರಿಗಾಗಿ ಯಾವುದೇ ಶೆಲ್ಟರ್ ವ್ಯವಸ್ಥೆ ಇಲ್ಲ. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇಲ್ಲಿಂದ 100 ಮಿ. ದೂರದಲ್ಲಿ ಬಸ್ ಸ್ಟಾಪ್ ಎನ್ನುವ ಸಣ್ಣ ಸೂಚನಾ ಫಲಕ ಹಾಕಿದೆ. ಅದು ಜನರಿಗೆ ತಕ್ಷಣ ಕಾಣಿಸುವುದಿಲ್ಲ ಮತ್ತು ಆ ಜಾಗದಲ್ಲಿ ಬಸ್ಸುಗಳು ನಿಲ್ಲುತ್ತಿಲ್ಲ. ಆ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ, ಆಲಡ್ಕ ರಸ್ತೆಯ ಪಕ್ಕ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗಿದೆ. ಅಲ್ಲಿಯೂ ಜನರೂ ನಿಲ್ಲುವುದಿಲ್ಲ, ಬಸ್ಸುಗಳು ನಿಲ್ಲುವುದಿಲ್ಲ.
ಮೆಲ್ಕಾರ್ ನಲ್ಲಿ ಈಗ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಜಾಗ ತುಂಬಾ ಇಕ್ಕಟ್ಟಾಗಿದೆ. ಕಿರಿದಾದ ರಸ್ತೆಯಲ್ಲಿ ಎರಡು ಮೂರು ಬಸ್ಸುಗಳು ಏಕಕಾಲದಲ್ಲಿ ಬಂದು ನಿಂತರೆ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದೇ ಸ್ಥಳದಲ್ಲಿ ಸಜೀಪ, ಪಣೋಲಿಬೈಲು, ಮಾರ್ನಬೈಲು ಭಾಗದಿಂದ ಬಂದ ವಾಹನಗಳು ತಿರುವು ಪಡೆದುಕೊಳ್ಳುತ್ತದೆ. ಆಲಡ್ಕ ಭಾಗದಿಂದ ವಿರುದ್ಧ ದಿಕ್ಕಿನಲ್ಲಿ ಅನೇಕ ವಾಹನಗಳು ಮೆಲ್ಕಾರ್ ಕಡೆಗೆ ಬರುವುದರಿಂದ ಈ ಸ್ಥಳ ವಾಹನಗಳ ಜಂಜಾಟದಿಂದ ಕೂಡಿರುತ್ತದೆ.

ಪುತ್ತೂರಿಗೆ ಹೋಗುವವರಿಗೂ ಸಮಸ್ಯೆ:
ಪುತ್ತೂರು, ಉಪ್ಪಿನಂಗಡಿ ಕಡೆಗೆ ಹೋಗುವವರ ಸಮಸ್ಯೆಯೂ ಇದೇ ರೀತಿ ಇದೆ. ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಸಜೀಪ, ಸಾಲೆತ್ತೂರು ಭಾಗಗಳಿಂದ ಆಗಮಿಸುವ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿ ಇಳಿಸಲು, ಮೆಲ್ಕಾರ್ ನ ಸರ್ವೀಸ್ ರಸ್ತೆಯನ್ನು ಅವಲಂಬಿಸಿವೆ. ಅಲ್ಲಿನ ಖಾಸಗಿ ಸಂಕೀರ್ಣದ ಮುಂಭಾಗದಲ್ಲೇ ನಿಲ್ಲುತ್ತವೆ. ಚತುಷ್ಪಥ ಹೆದ್ದಾರಿಯಾದ ಮೇಲೆ ಈ ವ್ಯವಸ್ಥೆ ಹೀಗೆ ಮುಂದುವರಿದಿದೆ.
ಮುಡಿಪು ಬಸ್ ನಿಲ್ಲುವ ಜಾಗದ ಪಕ್ಕ ಅಂಗಡಿಗೆ ಹೋಗುವುದು ಹೇಗೆ?
ಮುಡಿಪು ಕಡೆಗೆ ಹೋಗುವ ಮಾರ್ಗ ದುರಸ್ತಿಗೊಳಿಸಿ, ಕಾಂಕ್ರೀಟ್ ಹಾಕಲಾಗಿದೆ. ಆದರೆ ಸಮೀಪದ ಅಂಗಡಿಗೆ ಹೋಗಬೇಕಿದ್ದರೆ, ಸರ್ಕಸ್ ಮಾಡಬೇಕಷ್ಟೇ. ಇಲ್ಲಿ ಬಸ್ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲ, ರಸ್ತೆ ಬದಿಯ ಅಂಗಡಿಗಳಿಗೆ ಜನರು ಬರಲು ಕಷ್ಟವಾಗುತ್ತದೆ., ಚೇಂಬರ್ ಮಾಡದ ಕಾರಣ ಸಮಸ್ಯೆ ತಲೆದೋರಿದೆ.
ಮೆಲ್ಕಾರ್ ಗೊಂದಲಗಳಿಂದ ಕೂಡಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಬಸ್ ಗಾಗಿ ಕಾಯುವ ಪ್ರಯಾಣಿಕರಿಗೆ ಸರಿಯಾದ ನಿಲ್ದಾಣವಿಲ್ಲ. ವ್ಯಾಪಾರಕ್ಕೆಂದು ಬರುವವರಿಗೆ ಪಾರ್ಕಿಂಗ್ ಮಾಡಲೂ ಜಾಗವಿಲ್ಲ. ಇದು ಇನ್ನೊಂದು ಬಿ.ಸಿ.ರೋಡ್ ಆಗುತ್ತಿದೆ ಎನ್ನುತ್ತಾರೆ ಪ್ರಯಾಣಿಕರಾದ ಸುರೇಶ್


Be the first to comment on "ಮೆಲ್ಕಾರ್ ಜಂಕ್ಷನ್: ಬಸ್ ಗೆ ಕಾಯಲು ಜಾಗವೇ ಇಲ್ಲ | ಸಮಸ್ಯೆಗಳ ತಾಣ, ಇನ್ನೊಂದು ಬಿ.ಸಿ.ರೋಡ್ ಆಗುತ್ತಿದೆಯೇ?"