ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟ. ಪ್ರಶಸ್ತಿ ವಿಜೇತರ ವಿವರಗಳು ಇಲ್ಲಿವೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2025 ಹಾಗೂ 2026 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

2025ನೇ ಸಾಲಿನ ಗೌರವ ಪ್ರಶಸ್ತಿಗೆ ಪ್ರೊ.ಬಿ.ಶಿವರಾಮ ಶೆಟ್ಟಿ (ಸಾಹಿತ್ಯ/ಸಂಶೋಧನೆ), ಕುಡ್ಡು ಕೊರಗ(ಜಾನಪದ), ಶ್ರೀಮತಿ ಉಷಾ ಭಂಡಾರಿ ಬೆಂಗಳೂರು (ನಾಟಕ/ಸಿನಿಮಾ) ಅವರು ಆಯ್ಕೆಯಾಗಿದ್ದಾರೆ.

VNR GOLD

2026 ನೇ ಸಾಲಿನ ಗೌರವ ಪ್ರಶಸ್ತಿಗೆ ಕೆ.ಪಿ.ರಾವ್ (ಸಾಹಿತ್ಯ/ಸಂಶೋಧನೆ), ನೇಮು ಪರವ (ಜಾನಪದ), ಸುಧಾಕರ ಬನ್ನಂಜೆ ಬೆಂಗಳೂರು (ನಾಟಕ/ಸಿನಿಮಾ) ಅವರು ಆಯ್ಕೆಯಾಗಿದ್ದಾರೆ.

ಜಾಹೀರಾತು

ಗೌರವ ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 04 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರೊ. ಬಿ.ಶಿವರಾಮ ಶೆಟ್ಟಿ,  ಕ್ಷೇತ್ರ :ಸಾಹಿತ್ಯ / ಸಂಶೋಧನೆ

ತುಳುನಾಡಿನ ಪ್ರಮುಖ ವಿದ್ವಾಂಸರಲ್ಲಿ ಒಬ್ಬರೆನಿಸಿರುವ ಪ್ರೊ.ಬಿ.ಶಿವರಾಮ ಶೆಟ್ಟಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 38 ವರ್ಷಗಳ ಕಾಲ ಅಧ್ಯಾಪನ ಸೇವೆ ಸಲ್ಲಿಸಿ ನಿವೃತ್ತರಾದವರು.  1993 ರಲ್ಲಿ ‘ತುಳುನಾಡಿನ  ಸಸ್ಯ ಜಾನಪದ’ ಎಂಬ ಸಂಶೋಧನಾ   ಮಹಾ ಪ್ರಬಂಧಕ್ಕೆ ಮಂಗಳೂರು ವಿ.ವಿ.ಯಿಂದ ಪಿ.ಹೆಚ್.ಡಿ ಪದವಿ ಪಡೆದವರು. ಹಂಪಿ ವಿಶ್ವ ವಿದ್ಯಾನಿಲಯದಿಂದ ಈ ಕೃತಿ ಪ್ರಕಟಗೊಂಡಿದೆ. 

ಮಂಗಳೂರು ವಿಶ್ವವಿದ್ಯಾನಿಲಯದ  ಪದವಿ ಹಾಗೂ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯುಕ್ತ ಅಧ್ಯಕ್ಷರಾಗಿ ತುಳು ಪಠ್ಯ ಪುಸ್ತಕಗಳ ಹಾಗೂ ಪಠ್ಯಕ್ರಮ ರಚನಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಅಧ್ಯಯನ ವಿಭಾಗದ ಸ್ಥಾಪಕ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.

ತುಳು ಮತ್ತು  ಕನ್ನಡ ಭಾಷೆ, ಸಾಹಿತ್ಯ, ಜಾನಪದ ಮೌಖಿಕ ಚರಿತ್ರೆ, ಸ್ಥಳೀಯ ಚರಿತ್ರೆಗೆ ಸಂಬಂಧಿಸಿದಂತೆ 130 ಕ್ಕಿಂತಲೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ , ಪ್ರಾದೇಶಿಕ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾರೆ. 15 ಕ್ಕೂ ಹೆಚ್ಚು ತುಳು ಕನ್ನಡ ಕೃತಿಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ತುಳು ಅಧ್ಯಯನ ಕ್ಷೇತ್ರದ ಸಾಧನೆಗಾಗಿ  ‘ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ’  ಪ್ರಶಸ್ತಿ ,ಪೊಳಲಿ ಶೀನಪ್ಪ ಹೆಗ್ಡೆ  ಹಾಗೂ ಎಸ್ ಆರ್ ಹೆಗ್ಡೆ ಪ್ರಶಸ್ತಿ  ಪುರಸ್ಕ್ರತರಾಗಿದ್ದಾರೆ.

ಕುಡ್ಡು ಕೊರಗ ಪಾಂಗಾಳ, ಕ್ಷೇತ್ರ : ಜಾನಪದ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಪಾಂಗಾಳ ಕುಡ್ಡು ಕೊರಗ ಇವರು ಕಳೆದ 4 ದಶಕಗಳಿಗಿಂತಲೂ ಹೆಚ್ಚು ಕಾಲ ತುಳುನಾಡಿನ ಸಾಂಪ್ರಾದಾಯಿಕ ಡೋಲು ವಾದನ ಕಲಾವಿದರಾಗಿ ಸೇವೆ ಸಲ್ಲಿಸಿದವರು.

ಕುಲ ಕಸುಬನ್ನು ನಿರ್ವಹಿಸಿಕೊಂಡು ಬಂದ ಕುಡ್ಡು ಕೊರಗ ಅವರು ಬುಟ್ಟಿ ಹೆಣೆಯುವುದರಲ್ಲೂ ಪರಿಣಿತರಾಗಿದ್ದರು. ಡೋಲು ವಾದನ ಹಾಗೂ ಬಿರ್ದುದ ಪಾಟ್  ಹೇಳುವುದರಲ್ಲಿ  ಅನುಭವಿಗಳು.

ಇನ್ನಂಜೆ , ಪಾಂಗಾಳ ಪ್ರದೇಶ ವ್ಯಾಪ್ತಿಯ ಕೊರಗ ಸಮುದಾಯದ ಕುಟುಂಬಗಳಿಗೆ ಗುರಿಕಾರನಾಗಿ ಸೇವೆ ಸಲ್ಲಿಸಿದ ಇವರು ಕೊರಗ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಜಲು ಪದ್ಧತಿಯ ನಿಷೇಧಕ್ಕಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡವರು. ಸಮುದಾಯದ ಆರಾಧನೆ, ಆಚರಣೆ, ಕಟ್ಟುಕಟ್ಟಳೆಗಳ ಬಗ್ಗೆ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಉಷಾ ಭಂಡಾರಿ ಬೆಂಗಳೂರು, ಕ್ಷೇತ್ರ: ಸಿನಿಮಾ/ ನಾಟಕ

ನಾಟಕ ಹಾಗೂ ಸಿನಿಮಾ ರಂಗದಲ್ಲಿ ಕಳೆದ  ಮೂರುವರೆ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಉಷಾ ಭಂಡಾರಿ ಅವರು ನಟಿ, ನಿರ್ದೇಶಕಿ ಹಾಗೂ ನಟನಾ ಕೌಶಲ್ಯ ತರಬೇತುದಾರೆಯಾಗಿ ಖ್ಯಾತರು.

ನಿನಾಸಂ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಉಷಾ ಭಂಡಾರಿ ಅವರು ಬೆಂಗಳೂರು ವಿಶ್ವವಿದ್ಯಾನಿಲಯದ ನಾಟಕ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್  ಪುರಸ್ಕ್ರತರು .

ಅನೇಕ ತುಳು ನಾಟಕ, ತುಳು ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಉಷಾ ಭಂಡಾರಿ ಅವರು ಕನ್ನಡ ನಾಟಕ, ಸಿನಿಮಾ, ಧಾರವಾಹಿಗಳಲ್ಲಿಯೂ ಮಿಂಚಿದವರು.

ನಟನೆಗಾಗಿ ಅನೇಕ ಸಿನಿಮಾ ಉತ್ಸವಗಳಲ್ಲಿ ಪ್ರಶಸ್ತಿ ಪುರಸ್ಕ್ರತರು. ಅನೇಕ ನಾಟಕ ಹಾಗೂ ಸಿನಿಮಾಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ. ಮೂಲತ ದಕ್ಷಿಣ ಕನ್ನಡದ  ಉಳ್ಳಾಲ ತಾಲೂಕಿನವರಾಗಿರುವ ಉಷಾ ಭಂಡಾರಿ ಅವರು ಬೆಂಗಳೂರಿನಲ್ಲಿ ನಟನಾ ಕೌಶಲ್ಯ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ, ಆ ಮೂಲಕ ಹಲವಾರು ಕಲಾವಿದರು, ನಿರ್ದೇಶಕರನ್ನು ರಂಗಭೂಮಿ ಹಾಗೂ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.

ಕೆ.ಪಿ.ರಾವ್, ಕ್ಷೇತ್ರ : ಸಾಹಿತ್ಯ /ಸಂಶೋಧನೆ 

ಕಿನ್ನಿಕಂಬಳ ಪದ್ಮನಾಭ ರಾವ್‌ ಅವರು ಕೆ. ಪಿ. ರಾವ್‌ ಎಂದೇ ಜನಪ್ರಿಯರು. ಭಾರತೀಯ ಭಾಷೆಗಳನ್ನು ಗಣಕಯಂತ್ರಕ್ಕೆ ಅಳವಡಿಸುವಲ್ಲಿ ಆದ್ಯ ಪ್ರಯತ್ನ ಮಾಡಿದವರು. 90 ದಶಕದಲ್ಲಿ  ತುಳುವಿನ ಲಿಪಿಯ ಕುರಿತ ತಂತ್ರಾಂಶ ಸಿದ್ಧಪಡಿಸುವ ಕುರಿತ ಸಂಶೋಧನೆಯನ್ನು ಕೈಗೊಂಡವರು

ಕೆ. ಪಿ. ರಾಯರು ರಚಿಸಿದ ಕಂಪ್ಯೂಟರ್ ಪ್ರೋಗ್ರಾಂ ಬಳಸಿಯೇ ಉಡುಪಿಯ ಆರ್.ಆರ್.ಸಿ ವತಿಯಿಂದ  ಐತಿಹಾಸಿಕ ತುಳು ನಿಘಂಟುವಿನ ಆರು ಸಂಪುಟ  ಮುದ್ರಿತವಾಯಿತು. ತುಳು ಭಾಷೆಗೆ ಸಂಬಂಧಿಸಿದಂತೆ ಕಂಪ್ಯೂಟರ್‌ ಪ್ರೋಗ್ರಾಂನಲ್ಲಿ ಪ್ರಾಯೋಗಿಕ ಬಳಕೆಯ ನೆಲೆಯಲ್ಲಿ ಹಲವು ಪರಿಷ್ಕರಣೆಗಳನ್ನು ಮಾಡಿದ್ದಾರೆ.

ತುಳುವಿನ ‘ಧ್ವನಿವಿಜ್ಞಾನ’ವನ್ನು ತಾರ್ಕಿಕವಾಗಿ ಯೋಚಿಸಿ ಅದಕ್ಕೆ ಅನುಗುಣವಾಗಿ ಟೈಪಿಂಗ್‌ ಪ್ರೋಗ್ರಾಂ ರೂಪಿಸಿದವರಲ್ಲಿ ಕೆ. ಪಿ. ರಾವ್‌ ಮೊದಲಿಗರು.

ಆರಂಭದ ದಿನಗಳಲ್ಲಿ ಕನ್ನಡ ವಿಕಿಪೀಡಿಯಾದಲ್ಲಿ ಕೆಲಸ ಮಾಡಿದ ಕೆ. ಪಿ. ರಾವ್‌ ಮುಂದೆ, ತುಳುವಿಕಿಪೀಡಿಯಾಕ್ಕೆ ಸಂಬಂಧಿಸಿಯೂ ಮಹತ್ತ್ವದ ಸಲಹೆಗಳನ್ನು ನೀಡಿದ್ದಾರೆ. ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ತುಳುಭಾಷೆಯ ಬೆಳವಣಿಗೆಗೆ ಕೆ. ಪಿ. ರಾಯರ ಕೊಡುಗೆ ಮಹತ್ತ್ವದ್ದಾಗಿದೆ.

ನೇಮು ಪರವ, ಕ್ಷೇತ್ರ: ಜಾನಪದ

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ದೇವು ಪರವ ಹಾಗೂ ಕೊರಪ್ಪೊಳು ದಂಪತಿಗಳ ಮಗನಾದ ಶ್ರೀ ನೇಮು ಪರವ ಇವರು ತನ್ನ 16 ನೇ ವಯಸ್ಸಿನಿಂದಲೇ ದೈವ ನರ್ತನದ  ಸೇವೆ ಸಲ್ಲಿಸಲು ಪ್ರಾರಂಭಿಸಿದವರು.

ಪುತ್ತೂರು, ಕೊಡಗು, ಸುಳ್ಯ, ಬಂಟ್ವಾಳದಲ್ಲಿನ  ಪ್ರಮುಖ ದೈವಸ್ಥಾನಗಳಲ್ಲಿ  ವರ್ಣರ ಪಂಜುರ್ಲಿ, ಸತ್ಯದೇವತೆ, ಪಿಲಿಚಾಮುಂಡಿ, ರುದ್ರಚಾಮುಂಡಿ, ರಕ್ತೇಶ್ವರಿ, ಮಲರಾಯ, ಅಣ್ಣಪ್ಪ ಪಂಜುರ್ಲಿ ಹಾಗೂ ಮಾಯಾಂದಾಳ್ ಮೊದಲಾದ  ದೈವಗಳಿಗೆ ದೈವ ನರ್ತನದ   ಸೇವೆ ಸಲ್ಲಿಸುತ್ತಿದ್ದಾರೆ.

ಸುಮಾರು 18 ಬ್ರಹ್ಮ ಬೈದರ್ಕಳ ಗರಡಿಗಳಲ್ಲಿ, ಪುತ್ತೂರು, ಸುಳ್ಯ ವ್ಯಾಪ್ತಿಯ 25ಕ್ಕೂ ಹೆಚ್ಚು ಪುರಾತನ ಭೂತಾರಾದನೆಯ ಕ್ಷೇತ್ರಗಳಲ್ಲಿ ದೈವ ನರ್ತನದ ಸೇವೆ ಸಲ್ಲಿಸುತ್ತಿದ್ದಾರೆ.ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳು ಇವರ ಸೇವೆಯನ್ನು ಪುರಸ್ಕರಿಸಿ ಗೌರವಿಸಿದ್ದಾರೆ.

ಸುಧಾಕರ ಬನ್ನಂಜೆ ಬೆಂಗಳೂರು, ಕ್ಷೇತ್ರ : ಸಿನಿಮಾ/ನಾಟಕ

ನಾಟಕ, ಸಿನಿಮಾ ಕ್ಷೇತ್ರದಲ್ಲಿ ಕಳೆದ ನಾಲ್ಕು  ದಶಕಗಳಿಂದ ಸೇವೆ ಸಲ್ಲಿಸುತ್ತಿರುವ  ಸುಧಾಕರ ಬನ್ನಂಜೆ ಅವರು ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಾಟಕ ರಚನೆಗಾರರಾಗಿ. ಚಿತ್ರ ಸಂಭಾಷಣೆಗಾರರಾಗಿ, ಗೀತಾ  ಸಾಹಿತ್ಯ ರಚನೆಗಾರರಾಗಿ ಪ್ರಸಿದ್ಧರು.

ಸುಧಾಕರ ಬನ್ನಂಜೆ ಅವರು 64 ತುಳು ನಾಟಕಗಳನ್ನು , 24 ಕನ್ನಡ ನಾಟಕಗಳನ್ನು ರಚಿಸಿದ್ದಾರೆ. ನೂರಾರು  ನಾಟಕ ಹಾಗೂ ಸಿನಿಮಾಗಳಲ್ಲಿ ನಟನಾಗಿ ಮಿಂಚಿದ್ದಾರೆ. ತುಳು ಸಿನಿಮಾ ನಿರ್ದೇಶನ ನಿರ್ಮಾಪಕರಾಗಿಯು ಕಾರ್ಯನಿರ್ವಹಿಸಿದ್ದಾರೆ.

ದೂರದರ್ಶನ ಸೇರಿದಂತೆ  ಖಾಸಗಿ ಟಿ.ವಿ ವಾಹಿನಿಗಳಿಗೆ ಅನೇಕ ತುಳು ಧಾರವಾಹಿ, ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಯಕ್ಷಗಾನ ಕಲಾವಿದರಾಗಿಯೂ ಹಲವು ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಸೇವೆ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆಯ ಬನ್ನಂಜೆ ಮೂಲದವರಾದ ಸುಧಾಕರ ಬನ್ನಂಜೆ ಅವರು ಬೆಂಗಳೂರಿನಲ್ಲಿ ನೆಲೆಸಿ ನಾಟಕ, ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟ. ಪ್ರಶಸ್ತಿ ವಿಜೇತರ ವಿವರಗಳು ಇಲ್ಲಿವೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*