

ಬಂಟ್ವಾಳ: ಘಟ್ಟ ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ನೇತ್ರಾವತಿ ನದಿಯ ನೀರಿನ ಮಟ್ಟ ಅಪಾಯದ ಮಟ್ಟದತ್ತ ವೇಗವಾಗಿ ಏರಿಕೆಯಾಗುತ್ತಿದೆ. ಸದ್ಯ ನದಿಯ ನೀರಿನ ಮಟ್ಟ 8.4 ಮೀಟರ್ ದಾಖಲಾಗಿದ್ದು, 8.5 ಮೀಟರ್ ಅಪಾಯದ ಮಟ್ಟದ ಸೂಚ್ಯಂಕವಾಗಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಭಾರೀ ಮಳೆಯ ಜೊತೆಗೆ ಎ.ಎಂ.ಆರ್. ಹಾಗೂ ಎಂ.ಆರ್.ಪಿ.ಎಲ್. ನೀರಕಟ್ಟೆ ಡ್ಯಾಂಗಳಿಂದಲೂ ನೀರು ಹರಿಬಿಡಲಾಗಿರುವುದರಿಂದ ನದಿಯ ಹರಿವು ಮತ್ತಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಸಿದ್ಧತೆಗಳನ್ನು ಮಾಡಿಕೊಂಡಿದೆ.
ನದಿ ನೀರು ಏರಿಕೆಯಾಗಿರುವ ಪರಿಣಾಮ ಬಂಟ್ವಾಳ ಪೇಟೆಯ ಮೂಲಕ ಜಕ್ರಿಬೆಟ್ಟು ಸಂಪರ್ಕಿಸಿ ಬೆಳ್ತಂಗಡಿ ಕಡೆಗೆ ಸಾಗುವ ಹೆದ್ದಾರಿಯ ಕೋಟೆಕಣಿ ಪ್ರದೇಶದಲ್ಲಿ ರಸ್ತೆ ಮೇಲೆ ನೀರು ಹರಿದಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಬಂಟ್ವಾಳ–ಬೆಳ್ತಂಗಡಿ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಂಡಿದೆ.

ಈ ಹಿನ್ನೆಲೆಯಲ್ಲಿ ಬಿ.ಸಿ.ರೋಡ್‌ನಿಂದ ಧರ್ಮಸ್ಥಳಕ್ಕೆ ತೆರಳುವ ವಾಹನ ಸವಾರರು ಬೈಪಾಸ್ ಮುಖ್ಯರಸ್ತೆಯ ಮೂಲಕ ಸಂಚರಿಸುವಂತೆ ಸಂಬಂಧಿತ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನಿರಂತರ ಮಳೆಯಿಂದ ನದಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಾಲೂಕು ಆಡಳಿತ ಮನವಿ ಮಾಡಿದೆ. ಅಗತ್ಯವಿದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಗ್ಗು ಪ್ರದೇಶಗಳು ಜಲಾವೃತ
ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಿಂದ ಆಲಡ್ಕ ಪೇಟೆ, ಅಜಿಲಮೊಗರು ಮಸೀದಿ ಆವರಣ, ಬಂಟ್ವಾಳ ಕೋಟೆಕಣಿ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸ್ಥಳೀಯ ಆಡಳಿತ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಸಾರ್ವಜನಿಕರು ಅನಗತ್ಯವಾಗಿ ನೀರಿನ ಪ್ರದೇಶಗಳಿಗೆ ತೆರಳದಂತೆ ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.


Be the first to comment on "UPDATE BANTWALA: ನೇತ್ರಾವತಿ ನೀರಿನ ಮಟ್ಟ 8.4 ಮೀ.ಗೆ ಏರಿಕೆ"