ನೇತ್ರಾವತಿ ನದಿಯ ನೀರಿನ ಮಟ್ಟ ಬಂಟ್ವಾಳದಲ್ಲಿ ಸಂಜೆಯ ವೇಳೆ ದಿಢೀರ್ ಏರಿಕೆ ಕಂಡಿದ್ದು, ರಾತ್ರಿಯಾಗುತ್ತಿದ್ದಂತೆ ರಸ್ತೆ ಪಕ್ಕ ಹರಿಯಲಾರಂಭಿಸಿದೆ. ಪಾಣೆಮಂಗಳೂರಿನ ಆಲಡ್ಕದಲ್ಲಿ ಸುಮಾರು 15 ಕುಟುಂಬಗಳು ಅಪಾಯದಲ್ಲಿದ್ದು, ಅವರ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಶಾಸಕ ರಾಜೇಶ್ ನಾಯ್ಕ್ ಅವರು ಈ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈಗಾಗಲೇ 10 ಮನೆಗಳ ಮೆಟ್ಟಿಲಿನವರೆಗೆ ನೀರು ತಲುಪಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ 15 ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಇದರ ಜೊತೆಗೆ ತಗ್ಗುಪ್ರದೇಶಗಳಾದ ಕಂಚಿಕಾರ್ ಪೇಟೆ, ಬಸ್ತಿಪಡ್ಪು, ಜಕ್ರಿಬೆಟ್ಟು, ಎಸ್.ವಿ.ಎಸ್.ಶಾಲಾ ಮೈದಾನ, ನಾವೂರ,ನಂದಾವರ ಸಹಿತ ಅನೇಕ ಕಡೆಗಳಲ್ಲಿ ನೀರು ತುಂಬಿ ಜಲಾವೃತವಾಗುತ್ತದೆ. ಹಾಗಾಗಿ ಅವರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ತಾಲೂಕು ಆಡಳಿತವು ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸುತ್ತಿದ್ದು, ಅಗತ್ಯವಿದ್ದರೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಹಶೀಲ್ದಾರ್ ಮಂಜುನಾಥ್ ಹಾಗೂ ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ತಿಳಿಸಿದ್ದಾರೆ ಸಂಭಾವ್ಯ ನೆರೆ ಪರಿಸ್ಥಿತಿಯನ್ನು ಎದುರಿಸಲು ಎಸ್.ವಿ.ಎಸ್. ಶಾಲೆ ಹಾಗೂ ಪಾಣೆಮಂಗಳೂರು ಶಾರದಾ ಹೈಸ್ಕೂಲ್‌ನಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಾಲೂಕು ಕೇಂದ್ರದಲ್ಲೇ ಉಳಿದು ತುರ್ತು ಕರ್ತವ್ಯ ನಿರ್ವಹಿಸಲಿದ್ದಾರೆ. ಪಾಣೆಮಂಗಳೂರಿನ ಆಲಡ್ಕ ಪರಿಸರದಲ್ಲಿ ಸುಮಾರು 10 ಮನೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಮಾಜಿ ಸದಸ್ಯ ಸಿದ್ದೀಕ್ ಗುಡ್ಡೆಯಂಗಡಿ ತಿಳಿಸಿದ್ದಾರೆ.



Be the first to comment on "UPDATE: ಬಂಟ್ವಾಳ: ರಾತ್ರಿಯಾಗುತ್ತಿದ್ದಂತೆ ಮನೆಗಳಿಗೆ ನುಗ್ಗಿ, ರಸ್ತೆಗೆ ಬಂದ ನೇತ್ರಾವತಿ"