ವಿಟ್ಲ: ಕ್ರೀಡೆ ದೇಹಕ್ಕೆ ಚೈತನ್ಯ ನೀಡಿದರೆ, ಒಳಾಂಗಣ ಕ್ರೀಡೆಗಳು ಮನಸ್ಸಿಗೆ ಏಕಾಗ್ರತೆ, ತಾಳ್ಮೆ ಹಾಗೂ ಚುರುಕುತನವನ್ನು ಬೆಳೆಸುತ್ತವೆ. ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯನ್ನು ರೂಢಿಸಿಕೊಂಡು, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತಾಲೂಕು ದೈಹಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ರಾಜೇಂದ್ರ ರೈ ಅಳಿಕೆ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ 17 ರ ವಯೋಮಾನದ ಬಾಲಕ-ಬಾಲಕಿಯರ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ತಾಲೂಕು ವ್ಯಾಪ್ತಿಯ 27 ಬಾಲಕರ ತಂಡ 17 ಬಾಲಕಿಯರ ತಂಡ ಭಾಗವಹಿಸಿದ್ದವು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶ್ರೀಧರ್ ಶೆಟ್ಟಿ ವಹಿಸಿ, ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಮಾತನಾಡಿ, ಶಾಲೆಯ ಕ್ರೀಡಾ ಸಾಧನೆಗೆ ಅಭಿನಂದನೆ ಸಲ್ಲಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ರೈ, RMSA ವಿಟ್ಲ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿದ್ಯಾಶಂಕರ್, ಶಾಲಾ ಪ್ರಾಂಶುಪಾಲ ಜಯರಾಮ ರೈ, ಉಪಪ್ರಾಂಶುಪಾಲೆ ಕವಿತಾ ಕೆ.ಜಿ., ಹೇಮಲತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಲೆಯ ಸಹಶಿಕ್ಷಕಿ ಸೌಮ್ಯ ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು. ನಮಿತಾ ಸ್ವಾಗತಿಸಿದರು. ಶಶಿಕಲಾ ಕೆ. ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಭಾನುಪ್ರಕಾಶ್ ಹಾಗೂ ಶಶಿಕಲಾ ಕೆ. ಕಾರ್ಯಕ್ರಮವನ್ನು ಸಂಯೋಜಿಸಿದರು.


Be the first to comment on "ಬಂಟ್ವಾಳ ತಾಲೂಕು ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ"