ಪರಂಪರೆಯ ಹಿನ್ನೋಟ – ಮಾಂಬಾಡಿ ಮನೆತನ Posted By: Harish Mambady June 11, 2017 ಮಾಂಬಾಡಿ. ಇದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿರುವ ಪುಟ್ಟ ಸ್ಥಳ. ಪಕ್ಕದಲ್ಲಿ ಅರಸಳಿಕೆ, ಪದ್ಯಾಣ, ಹಾಗೇ ಕೋಡ್ಲ, ವಗೆನಾಡು ಪ್ರದೇಶಗಳು ಸಿಗುತ್ತವೆ. ತೋಟ, ಗದ್ದೆ, ಹಚ್ಚಹಸುರು ಇನ್ನೂ ಇಲ್ಲಿದೆ. ಪದ್ಯಾಣ ಕುಟುಂಬದ ನಾರಾಯಣ ಭಟ್ಟ ಮತ್ತು ಗೌರಮ್ಮ ದಂಪತಿಗೆ ಜನಿಸಿದ ಏಳು ಗಂಡುಮಕ್ಕಳಲ್ಲಿ ಒಬ್ಬರಾದ ನಾರಾಯಣ ಭಟ್ಟರೇ ಮುಂದೆ ಮಾಂಬಾಡಿ ನಾರಾಯಣ ಭಾಗವತರು ಎಂದು ಪ್ರಸಿದ್ಧರಾದರು. 1900ನೇ ಇಸವಿಯ ಡಿಸೆಂಬರ್ 16ರಂದು ಇವರ ಜನನ. ಇವರ ಇತರ ಅಣ್ಣ, ತಮ್ಮಂದಿರ ಬಗ್ಗೆ ಇಲ್ಲಿ ನಾನು ಪ್ರಸ್ತಾಪ ಮಾಡುವುದಿಲ್ಲ. ಆದರೆ ಉಲ್ಲೇಖ ಮಾಡುವ ಹೆಸರುಗಳು ಕೇಶವ ಭಟ್ಟರು ಮತ್ತು ಈಶ್ವರ ಭಟ್ಟರು. ಕಾರಣ ಇಷ್ಟೇ. ಕೇಶವ ಭಟ್ಟರು ಇಂಗ್ಲೀಷ್ ಅಧ್ಯಾಪನ ಹಾಗೂ ಅಧ್ಯಯನ ಮೂಲಕ ಇತರರಿಗೂ ಇಂಗ್ಲೀಷ್ ಬೋಧನೆ ಮಾಡಿದವರು. ಈಶ್ವರ ಭಟ್ಟರು ಜೋಯಿಷರಾಗಿ ಪ್ರಸಿದ್ಧರಾದವರು. ಇವರ ಸಹೋದರನೇ ಮಾಂಬಾಡಿ ನಾರಾಯಣ ಭಟ್ಟ. ಇವರು ಸಂಗೀತಾಭ್ಯಾಸ, ಯಕ್ಷಗಾನ ಅಭಿರುಚಿ ಬೆಳೆಸಿಕೊಂಡ ಕಾರಣ ಯಕ್ಷಗಾನ ಕ್ಷೇತ್ರವನ್ನೇ ಆಯ್ದುಕೊಂಡರು. ಉಳಿದ ಸಹೋದರರು ಕೃಷಿ ಚಟುವಟಿಕೆಗಳನ್ನು ವಿಸ್ತರಿಸಿಕೊಂಡರು. ನಾರಾಯಣ ಭಟ್ಟರು ಸುಮಾರು 1918ರಿಂದಲೇ ಪೂರ್ಣ ಭಾಗವತರಾಗಿ ಯಕ್ಷಗಾನ ವ್ಯವಸಾಯ ಆರಂಭಿಸಿದರು. ಆಮೇಲೆ ಮೇಳಗಳನ್ನು ಸೇರುವುದು ಬಿಡುವುದು ನಡೆದರೂ ತನ್ನ ಅಂತಿಮ ಉಸಿರು ಇರುವವರೆಗೆ (1990) ಯಕ್ಷಗಾನವಲ್ಲದೆ ಬೇರೆ ಪ್ರಾಪಂಚಿಕ ವ್ಯಾಮೋಹಗಳ ಕುರಿತು ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಹೀಗಾಗಿ ಅಂದಿನ ಕಾಲದಲ್ಲೇ ಪಾಲಿಗೆ ಬಂದ ತೋಟ ಮುಕ್ಕಾಲು ಎಕ್ರೆಯಲ್ಲೇ ಬದುಕು ಸಾಗಿಸಿದರು. ಗಳಿಸಿದ ವಿದ್ಯೆಯೇ ಅವರ ಸಂಪತ್ತು. ಮಾಂಬಾಡಿ ನಾರಾಯಣ ಭಾಗವತರ ಕುಟುಂಬದ ಕುರಿತು ಇಲ್ಲಿ ಪುಟ್ಟ ಮಾಹಿತಿ ಪ್ರಸ್ತಾಪಿಸುತ್ತೇನೆ. ಭಾಗವತರಿಗೆ ಒಟ್ಟು ಆರು ಮಕ್ಕಳು. ಮೊದಲಿಬ್ಬರು ಹೆಣ್ಣು, ಮತ್ತೆ ನಾಲ್ವರು ಗಂಡು. ಮೊದಲ ಮಗಳು ಗೌರಿ ಅಮ್ಮ. ಇನ್ನೊಬ್ಬರು ದ್ರೌಪದಿ ಅಮ್ಮ. ಗೌರಿ ಅಮ್ಮ ಇವರು ಎರಡು ವರ್ಷಗಳ ಹಿಂದೆ ನಿಧನ ಹೊಂದಿದರು. ಯಕ್ಷಗಾನದ ಮನೆತನದವರಾದ ಕುದ್ರೆಕೋಡ್ಲು ಗೋವಿಂದ ಭಟ್ಟರನ್ನು ವಿವಾಹವಾಗಿ ಕಾಞಂಗಾಡ್ ನಲ್ಲಿ ನೆಲಸಿದ ಗೌರಿ ಅಮ್ಮನ ಮಕ್ಕಳೆಲ್ಲರೂ ಸಂಗೀತವನ್ನು ಹವ್ಯಾಸವಾಗಿ ತೆಗೆದುಕೊಂಡವರು. ಗೌರಿ ಅಮ್ಮ ಅವರಿಗೆ ನಾಲ್ವರು ಮಕ್ಕಳು. ಮೊದಲನೆಯವರು ನಾರಾಯಣ ಭಟ್. ಇವರು ಅಧ್ಯಾಪಕರಾಗಿ ನಿವೃತ್ತ. ಇವರ ದೊಡ್ಡ ಮಗಳು ಉಷಾ ಈಶ್ವರ ಭಟ್ ಕಾಸರಗೋಡಿನಲ್ಲಿ ಸಂಗೀತ ವಿದ್ವಾಂಸರಾಗಿ ಪ್ರಸಿದ್ಧ. ಎರಡನೇ ಮಗಳ ಜಯಲಕ್ಷ್ಮೀ. ಬೆಂಗಳೂರಿನಲ್ಲಿ ಸಂಗೀತ ವಿದ್ವಾಂಸರಾಗಿದ್ದಾರೆ. ಇಬ್ಬರೂ ವಿವಾಹಿತರು. ಎರಡನೇ ಮಗ ಪದ್ಮನಾಭ ಭಟ್. ಇವರು ಸ್ಟೇಟ್ ಬ್ಯಾಂಕ್ ಆಫ್ ಟ್ರಾವೆಂಕೂರ್ ನಲ್ಲಿ ಹಿರಿಯ ಮ್ಯಾನೇಜರ್ ಆಗಿ ನಿವೃತ್ತ. ಪದ್ಮನಾಭ ಭಟ್ ಅವರ ಪುತ್ರ ಗೋವಿಂದರಾಜ್. ಇವರು ಸಾಫ್ಟ್ ವೇರ್ ಇಂಜಿನಿಯರ್. ಆದರೆ ಕಲಾವಿದನೂ ಹೌದು. ಕಿರುಚಿತ್ರದಲ್ಲಿ ಅಭಿನಯಿಸುವುದು ಹವ್ಯಾಸ. ಗೌರಿ ಅಮ್ಮ ಅವರ ಮೂರನೇ ಮಗ ವೆಳ್ಳಿಕ್ಕೋತ್ ವಿಷ್ಣು ಭಟ್. ಕಾಸರಗೋಡು ಹೈಸ್ಕೂಲಿನಲ್ಲಿ ಅಧ್ಯಾಪಕ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಗೀತ ಕಲಾವಿದ. ಹಲವು ಸಂಗೀತಯಾತ್ರೆಗಳನ್ನು ಮಾಡುವ ಮೂಲಕ ಪ್ರಸಿದ್ಧ. ವಿಷ್ಣು ಭಟ್ ಅವರಿಗೆ ಓರ್ವ ಪುತ್ರಿ. ಅವಳ ಹೆಸರು ಶ್ರೀಗೌರಿ. ಈಗ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿರುವ ಈಕೆಯೂ ಉತ್ತಮ ಸಂಗೀತ ಕಲಾವಿದೆ. ಗೌರಿ ಅಮ್ಮ ಅವರ ಮಗಳು ಲಕ್ಷ್ಮೀ. ಕೂಡ್ಲು ಗೋಪಾಲಕೃಷ್ಣ ಶಾಲೆಯಲ್ಲಿ ಅಧ್ಯಾಪಕರಾಗಿ ನಿವೃತ್ತಿ ಹೊಂದಿ ಈಗ ಮಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಕೆ.ಪರಮೇಶ್ವರ ಭಟ್ ಅವರ ಪತ್ನಿ ಲಕ್ಷ್ಮೀ. ಇವರಿಗೆ ಮೂವರು ಹೆಣ್ಣುಮಕ್ಕಳು. ಮೊದಲನೆಯವರು ಪ್ರಶಾಂತಿ. ಎರಡನೆಯವರು ಪ್ರತಿಭಾ. ಮೂರನೆಯವರು ಪ್ರತೀಕ್ಷಾ. ಮೂವರೂ ವಿವಾಹಿತರರು. ಮೂರು ಮಕ್ಕಳೂ ಸಂಗೀತ ಕಲಾವಿದರೂ ಹೌದು. ಇವರಲ್ಲಿ ಪ್ರತೀಕ್ಷಾ ಸಂಗೀತಕ್ಕೆ ಸಂಬಂಧಿಸಿದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸಿನಿಮಾದಲ್ಲೂ ಹಾಡಿದ್ದಾರೆ. ದ್ರೌಪದಿ ಅಮ್ಮ ಮಾಂಬಾಡಿ ನಾರಾಯಣ ಭಾಗವತರ ದ್ವಿತೀಯ ಪುತ್ರಿ ದ್ರೌಪದಿ ಅಮ್ಮ ಅವರು ಸಮೀಪದ ಬಾಯಾರು ಸೊಸೈಟಿಯಲ್ಲಿ ಉದ್ಯೋಗಿಯಾಗಿರುವ ಕೃಷಿಕ ಕೆರೆಮೂಲೆ ಕೃಷ್ಣ ಭಟ್ ಅವರನ್ನು ವಿವಾಹವಾದವರು. ದ್ರೌಪದಿ ಅಮ್ಮ ಅವರೂ ಈಗಿಲ್ಲ. ನಮ್ಮನ್ನಗಲಿದ್ದಾರೆ. ಅವರಿಗೆ ಇಬ್ಬರು ಗಂಡು ಹಾಗೂ ನಾಲ್ವರು ಹೆಣ್ಣುಮಕ್ಕಳು. ಇವರಲ್ಲಿ ಮೂವರಿಗೆ ಯಕ್ಷಗಾನದ ಹಿನ್ನೆಲೆ ಇದೆ ಎಂಬುದು ವಿಶೇಷ. ಮೊದಲನೆಯ ಪುತ್ರ ಶಂಕರನಾರಾಯಣ ಭಟ್. (ಶಂ.ನಾ.ಬಾಯಾರು). ಇವರು ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗಿ. ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ. ಸುರತ್ಕಲ್ ನಲ್ಲಿ ವಾಸ. ಯಕ್ಷಗಾನವಷ್ಟೇ ಅಲ್ಲ, ನುಡಿಚಿತ್ರ ಬರವಣಿಗೆಯಲ್ಲೂ ಶಂ.ನಾ.ಬಾಯಾರು ನುರಿತರು. ಇವರಿಗೆ ಇಬ್ಬರು ಪುತ್ರಿಯರು. ದೀಪಿಕಾ (ಇಂಜಿನಿಯರಿಂಗ್ ಮುಗಿಸಿ ಉದ್ಯೋಗಿ), ರಾಧಿಕಾ (ವಿದ್ಯಾರ್ಥಿನಿ). ಶಂ.ನಾ. ಬಾಯಾರು ಅವರು ಸುರತ್ಕಲ್, ಪಣಂಬೂರು ಪರಿಸರದ ಹಲವು ತಾಳಮದ್ದಳೆ ಕೂಟಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಉತ್ತಮ ಮದ್ದಳೆ ವಾದಕ. ಎರಡನೇಯ ಪುತ್ರ ನಾರಾಯಣ ಭಟ್. ಇವರೂ ಹವ್ಯಾಸಿಯಾಗಿ ಭಾಗವತಿಕೆ ಮಾಡುವವರು. ಈಗ ಕೃಷಿಕರಾಗಿ ಕೆರೆಮೂಲೆ (ಬಾಯಾರು)ಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲನೇ ಮಗಳು ದೇವಕಿ. ಪಾರ್ಪಜೆ ಈಶ್ವರಚಂದ್ರ ಭಟ್ ಅವರ ಪತ್ನಿ. ಇವರಿಗೆ ಇಬ್ಬರು ಹೆಣ್ಣುಮಕ್ಕಳು. ಮೊದಲನೆಯವಳು ವಿದ್ಯಾ. ಇಬ್ಬರು ವಿವಾಹಿತರು. ವಿದ್ಯಾ ವಿವಾಹವಾದದ್ದು ಕೀರಿಕ್ಕಾಡು ವಿಷ್ಣು ಭಟ್ಟರ ಮೊಮ್ಮಗ ಕೃಪಾರೊಂದಿಗೆ. ಎರನೇಯವಳು ವಾಣಿಶ್ರೀ ದ್ರೌಪದಿ ಅಮ್ಮನವರ ಎರಡನೇಯ ಮಗಳು ಲಕ್ಷ್ಮೀ. ಪಿದಮಲೆ ಕೇಶವ ಭಟ್ಟರ ಪತ್ನಿ. ಇಬ್ಬರು ಮಕ್ಕಳು. ರಾಘವೇಂದ್ರ ಮತ್ತು ಜಯಶ್ರೀ. ಮೂರನೆಯ ಮಗಳು ಸರಸ್ವತಿ. ಎಡೆಕ್ಕಾನ ವಿಶ್ವನಾಥ ಭಟ್ಟರ ಪತ್ನಿ. ಮಗ ಮಂಜುನಾಥ, ಮಗಳು ಅಕ್ಷಯ. ನಾಲ್ಕನೆಯ ಮಗಳು ದುರ್ಗಾಪರಮೇಶ್ವರಿ ಕುಕ್ಕಿಲ. ಪ್ರಸಿದ್ಧ ವಿದ್ವಾಂಸ ಕುಕ್ಕಿಲ ಕೃಷ್ಣ ಭಟ್ಟರ ಪುತ್ರ ಪುರಂದರ ವಿಠಲ ಕುಕ್ಕಿಲ ಅವರ ಪತ್ನಿ. ಇವರು ಹವ್ಯಾಸಿ ಭಾಗವತರು. ಯಕ್ಷಗಾನದ ಹಲವು ಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವೇ ಕೆಲವು ಮಹಿಳಾ ಭಾಗವತರ ಪೈಕಿ ದುರ್ಗಾಪರಮೇಶ್ವರಿ ಅವರೂ ಒಬ್ಬರು. ಇವರ ಪುತ್ರಿ ವಸುಂಧರಾ ಕುಕ್ಕಿಲ. ಯಕ್ಷಗಾನ ಹಾಗೂ ಸಂಗೀತ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾಳೆ. ಪುತ್ರ ಭಾನುತೇಜಸ್ವಿ. ಈತ ವಿದ್ಯಾರ್ಥಿ. ಯಕ್ಷಗಾನ ಹವ್ಯಾಸಿ ಕಲಾವಿದ. ಮಾಂಬಾಡಿ ಭಾಗವತರ ಮಗಳಂದಿರ ಪರಿವಾರದ ಕಿರು ಪರಿಚಯವಿದು. ಭಾಗವತರ ಮಕ್ಕಳೂ ವಿವಾಹವಾದದ್ದು ಯಕ್ಷಗಾನದ ನಂಟಿರುವ ಮನೆಯವರನ್ನೇ ಎಂಬುದು ಇಲ್ಲಿ ಗಮನಾರ್ಹ. ಮುಂದಿನ ಭಾಗದಲ್ಲಿ ಪುತ್ರರ ಪರಿಚಯ: – ನಿರೀಕ್ಷಿಸಿ ಪರಂಪರೆಯ ಹಿನ್ನೋಟ Share this:WhatsAppTelegram TOPICS:mambadyಕರೋಪಾಡಿಪರಂಪರೆಯ ಹಿನ್ನೋಟಮಾಂಬಾಡಿ ನಾರಾಯಣ ಭಾಗವತಮಾಂಬಾಡಿ ಸುಬ್ರಹ್ಮಣ್ಯ ಭಟ್ಹರೀಶ ಮಾಂಬಾಡಿ
Be the first to comment on "ಪರಂಪರೆಯ ಹಿನ್ನೋಟ – ಮಾಂಬಾಡಿ ಮನೆತನ"