ಆದದ್ದೊಂದೂ ಆಗಿಲ್ಲ

ಡಾ. ಅಜಕ್ಕಳ ಗಿರೀಶ ಭಟ್

www.bantwalnews.com

ಅಂಕಣ: ಗಿರಿಲಹರಿ

ಜಾಹೀರಾತು

ಗೊಂದಲಗೋವಿಂದಪುರ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೋವಿಂದಗೋಪಾಲಮೂರ್ತಿಯವರು ಆಯ್ಕೆಯಾದರು.

ಅವರೆದುರು ಸೋತಿದ್ದ ಅಭ್ಯರ್ಥಿ ನೋವಿಂದನೋಪಾಲಮೂರ್ತಿಯವರು ಹೇಗಾದರೂ ಮಾಡಿ ಇವರನ್ನು ಕೋರ್ಟಿಗೆ ಎಳೆದು ಚುನಾವಣಾ ಕಣದಲ್ಲಿ ಅಲ್ಲದಿದ್ದರೂ ನ್ಯಾಯಾಲಯದಲ್ಲಾದರೂ ಸೋಲಿಸಲೇಬೇಕು ಎಂದು ಹಠದಲ್ಲಿದ್ದರು. ಈ ಬಗ್ಗೆ ತಲೆಕೆಡಿಸಿಕೊಳ್ಳಲು ನಮ್ಮ ಗೋವಿಂದಗೋಪಾಲಮೂರ್ತಿ ಹೋಗಲಿಲ್ಲ. ಯಾಕೆಂದರೆ ಇವರಷ್ಟೇ ಗೆದ್ದದ್ದಲ್ಲ; ಇವರ ಪಕ್ಷವೂ ಬಹುಮತದಿಂದ ರಾಜ್ಯದಲ್ಲಿ ಚುನಾಯಿತವಾಗಿತ್ತು.

ಜಾಹೀರಾತು

ಸರಕಾರ ರಚಿಸುವ ತರಾತುರಿಯಲ್ಲಿ ಮುಖಂಡರು ಇದ್ದಾಗ ಇಲ್ಲಿ ಕ್ಷೇತ್ರದಲ್ಲಿ ಕೂತು ತಲೆಕೆಡಿಸಿಕೊಂಡರೆ ಮಂತ್ರಿ ಸ್ಥಾನ ಸಿಗುವುದು ಹೇಗೆ? ಗೋವಿಂದಗೋಪಾಲಮೂರ್ತಿಯವರು ತಮ್ಮ ಕ್ಷೇತ್ರಕ್ಕಷ್ಟೇ ಚುನಾವಣೆಗಾಗಿ ಖರ್ಚು ಮಾಡಿದ್ದಲ; ಅವರ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಪಕ್ಷಕ್ಕಾಗಿ ಹಣ ಖರ್ಚು ಮಾಡಿ ಆ ಎಲ್ಲ ಕಡೆಯೂ ಪಕ್ಷವನ್ನು ಗೆಲ್ಲಿಸಿದ್ದರು.

ಹೀಗಾಗಿ ಅವರು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದರೂ ಅವರಿಗೆ ಮಂತ್ರಿ ಸ್ಥಾನ ಗ್ಯಾರೆಂಟಿಯೆಂಬುದು ಕ್ಷೇತ್ರದಲ್ಲಿ ಸಾಮಾನ್ಯ ಅಭಿಪ್ರಾಯವಾಗಿತ್ತು. ಅಲ್ಲದೆ ಬೇರೆ ಬೇರೆ ನಿಗಮ ಮಂಡಲಿಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದ ಒಬ್ಬ ಉದ್ಯಮಿಯಾಗಿದ್ದರಿಂದ ಅವರ ರಾಜಕೀಯ ಅನುಭವ ಏನೂ ಕಡಿಮೆಯಿರಲಿಲ್ಲ. ಅಂತೂ ಅವರು ಮಂತ್ರಿಯಾದರು ಮತ್ತು ಅವರಿಗೆ ಒಂದು ಇಲಾಖೆ ಸಿಕ್ಕಿತು ಎಂಬಲ್ಲಿಗೆ ಕಥೆಯ ಆರಂಭವಾಯಿತು.

ಮೊದಲಿಗೆ ಸಿಕ್ಕಿದ ಖಾತೆ ಅವರಿಗೆ ಅಷ್ಟು ಖುಷಿ ಕೊಡಲಿಲ್ಲ. ಒಂದೆರಡು ಬಾರಿ ದಿಲ್ಲಿಗೆ ಹೋಗಿ ಬಂದನಂತರ, ಆರೇ ತಿಂಗಳಲ್ಲಿ ಮಂತ್ರಿಮಂಡಲ ವಿಸ್ತರಣೆಯಾಗುವಾಗ ಅವರಿಗೆ ಕಂದಾಯ ಖಾತೆಯೇ ಸಿಕ್ಕಿತು.

ಜಾಹೀರಾತು

ಅವರು ತಮ್ಮ ಕಾರ್ಯಕರ್ತನೊಬ್ಬನಿಗಾಗಿ ಹೇಳಿದ ಯಾವುದೋ ಕೆಲಸವನ್ನು ಗೊಂದಲಗೋವಿಂದಪುರದ ತಹಶೀಲ್ದಾರರಾಗಿದ್ದ ಶುಖರಾಯಪ್ಪನವರು ಮಾಡಿಕೊಡಲಿಲ್ಲ ಅನ್ನುವುದೇ ಕಾರಣವಾಗಿ ಶುಖರಾಯಪ್ಪನವರಿಗೆ ಅವರ ಕಛೇರಿಯಲ್ಲೇ ಯಾರ ಮೂಲಕವೋ ಹಣವಿದ್ದ ಒಂದು ಕವರು ಕೊಡಿಸಿ ಲೋಕಾಯುಕ್ತರಿಂದ ಹಿಡಿಸಿ ಅಮಾನತ್ತು ಮಾಡಲು ಆದೇಶ ಕೊಟ್ಟರು. ಅಮಾನತ್ತಾದಾಗ ಶುಖರಾಯಪ್ಪರನ್ನು ಮದುವೆಯಾಗಿ ಆರೇ ತಿಂಗಳಾಗಿದ್ದ ಅವರ ಹೆಂಡತಿ ಕಲಹಕಾಮಿನಿಗೆ ಭಯಂಕರ ಅವಮಾನವಾಗಿ ಆಕೆ ತವರಿಗೆ ಹೋದರು. ಒಂದೇ ವಾರದಲ್ಲಿ ಹಿಂಸೆ ಇತ್ಯಾದಿ ಕಾರಣಗಳೊಂದಿಗೆ ವಿಚ್ಛೇದನಕ್ಕೆ ಅರ್ಜಿಯೂ ಹಾಕಿದರು. ಮೊದಲೇ ತಲೆಬಿಸಿಯಿದ್ದ ಶುಖರಾಯಪ್ಪರು, ಇತ್ತ ಒಂದೆರಡು ತಿಂಗಳಲ್ಲಿ ಮತ್ತೆ ಕೆಲಸಕ್ಕೆ ಕರೆ ಬಂದು ವರ್ಗವಾಗಿ ತಲೆಗುಂದಿಪುರ ತಾಲೂಕಿಗೆ ಹೋದರೂ, ಹಾಳಾಗಿ ಹೋಗಲಿ ಅಂತ ವಿಚ್ಛೇದನಕ್ಕೆ ಒಪ್ಪಿ ಎಷ್ಟೋ ಹಣವನ್ನು ನೀಡಲು ಕೂಡ ಒಪ್ಪಿ ಹೆಂಡತಿಯಿಂದ ಬಿಡಿಸಿಕೊಂಡರು.

ತಲೆಗುಂದಿಪುರದಲ್ಲಿ ತಹಶೀಲ್ದಾರರ ನಿವಾಸದಲ್ಲಿ ಅವರು ಮತ್ತು ಅವರ ವಿಧವೆ ತಾಯಿ ಇಬ್ಬರೇ ಇದ್ದರು. ಅವರ ಮನೆಯ ಬಳಿ ಒಬ್ಬರು ಬ್ಯಾಂಕು ಮೇನೇಜರರ ಹೆಂಡತಿಯೂ ಇದ್ದರು. ಹೆಂಡತಿ ಮಾತ್ರ ಇದ್ದರು ಎಂದಲ್ಲ. ಮೇನೇಜರರೂ ಇದ್ದರು. ಆದರೆ ಹೆಂಡತಿ ನಮ್ಮ ಕಥೆಗೆ ಮುಖ್ಯ. ಗಂಡ ಅಲ್ಲ. ತಹಶೀಲ್ದಾರರು ಕೆ ಎ ಎಸ್ ಆಗಿ ಬಂದಿದ್ದವರಾದ್ದರಿಂದ ಹೆಚ್ಚು ಪ್ರಾಯವೂ ಆಗಿರಲಿಲ್ಲ. ಹೀಗಿರುವಾಗ ತಹಶೀಲ್ದಾರರು ಕಛೇರಿಯಿಂದ ಬರುವಾಗ ತಡವಾಗುತ್ತಿದ್ದರೂ ಬಂದ ನಂತರ ತಾಯಿಯೊಂದಿಗೆ ಎಷ್ಟೂಂತ ಮಾತಾಡಬಹುದು? ಹೀಗಾಗಿ ಏಕಾಂಗಿಯಾಗಿ ತನಗೆ ಬೇಜಾರಾಗುವುದನ್ನು ತಪ್ಪಿಸಲುಒಬ್ಬ ವಿ. ಎ. ಯ ಬಳಿ ಹೇಳಿ ಒಂದು ನಾಯಿಮರಿಯನ್ನು ತರಿಸಿದರು.

ಮೇನೇಜರರ ಹೆಂಡತಿಗೂ ಮಕ್ಕಳಿರಲಿಲ್ಲ. ಆದರೆ ಬೆಕ್ಕಿನ ಮರಿಯಿತ್ತು. ಈ ನಾಯಿಮರಿಗೂ ಆ ಬೆಕ್ಕಿನ ಮರಿಗೂ ಅಚ್ಚರಿಯೆಂಬಂತೆ ಸ್ನೇಹ ಬೆಳೆಯಿತು. ಸಂಜೆ ಏಳಕ್ಕೋ ಎಂಟಕ್ಕೋ ತಹಶೀಲ್ದಾರರು ಮನೆಗೆ ಬಂದಾಗ ನಾಯಿಮರಿ ಮೇನೇಜರರ ಹೆಂಡತಿ ಮಡಿಲಲ್ಲಿ ಬೆಕ್ಕಿನ ಮರಿಯೊಂದಿಗೆ ಇರುತ್ತಿತ್ತು.  ಅದರಿಂದಾಗಿ ವಿಶೇಷವೇನೂ ಘಟಿಸಲಿಲ್ಲ. ಆದರೆ ಆ ಮೇನೇಜರರ ಹೆಂಡತಿಗೆ ಒಬ್ಬಳು ಮಕ್ಕಳಿಲ್ಲದ ವಿಚ್ಛೇದಿತ ತಂಗಿಯಿದ್ದಳು. ಅವಳ ಹೆಸರು ಕನಕಕೋಮಲೆ. ಅವಳು ಈ ಅಕ್ಕನ ಮನೆಗೆ ಒಂದು ವಾರಕ್ಕೆಂದು ಬಂದಿದ್ದವಳು ಈ ನಮ್ಮ ತಹಶೀಲ್ದಾರರ ನಾಯಿ ಪ್ರೀತಿ ಮತ್ತು ಅದರಿಂದಾಗಿ ಉಂಟಾದ ಬೆಕ್ಕಿನ ಪ್ರೀತಿಗೆ ಮನಸೋತು ಎರಡುವಾರಗಳಾದರೂ ಹೊರಡದೇ ಹೋದಾಗ ಮೇನೇಜರರ ಹೆಂಡತಿಗೆ ಸಣ್ಣ ಸಂದೇಹ ಬಂತು. ಅದಾಗಲೇ ಅವರಿಗೆ ಶುಖರಾಯಪ್ಪರ ಚರಿತ್ರೆ ಅವರು ಗಂಡನಿಗೆ ಹೇಳಿದ ಪ್ರಕಾರ ತಿಳಿದಿತ್ತು. ಶುಖರಾಯಪ್ಪರೇ ಕಟ್ಟಿದ ಇತಿಹಾಸವಾದ್ದರಿಂದ ಸಹಜವಾಗಿಯೆ ಪಾಪ ಅನ್ಯಾಯವಾಗಿ ಹೆಂಡತಿ ಇವರಿಗೆ ಅನ್ಯಾಯ ಮಾಡಿದಳು ಅಂತ ಅವರ ಸಿಟ್ಟು ಶುಖರಾಯಪ್ಪರ ಮಾಜಿ ಹೆಂಡತಿಯ ಮೇಲೂ ಅನುಕಂಪ ಶುಖರಾಯಪ್ಪರ ಮೇಲೂ ಇತ್ತು.

ಜಾಹೀರಾತು

ಅಂತೂ ಮತ್ತೆರಡು ವರ್ಷದೊಳಗೆ ಶುಖರಾಯಪ್ಪರು ತಾಯಿ ತೀರಿಹೋದದ್ದು ಬಿಟ್ಟು ಬೇರಾವ ಅನಾಹುತವೂ ಆಗುವ ಮೊದಲೇ ಆ ತಾಲೂಕಿನಿಂದ ವರ್ಗವಾಗುವ ಮೊದಲು ಸಾಂಗವಾಗಿ ಸರಳವಾಗಿ ಮೇನೇಜರರ ಹೆಂಡತಿಯ ತಂಗಿಯನ್ನು ಮದುವೆಯಾಗಿ ಆ ದಂಪತಿ ಒಂದು ಹೆಣ್ಣುಮಗುವನ್ನು ಪಡೆದರು. ಅತ್ತ ಲಂಚದ ಆರೋಪದ ಕೇಸಿನಲ್ಲಿ ಅಥವಾ ಅಮಾನತ್ತಿನ ವಿಷಯದಲ್ಲಿ ತನ್ನ ಗಂಡನದೇನೂ ತಪ್ಪಿಲ್ಲ ಅಂತ ಕಲಹಕಾಮಿನಿಗೆ ಮನವರಿಕೆಯಾದರೂ ಅಷ್ಟೊತ್ತಿಗಾಗಲೇ ಈ ಹೊಸ ಮದುವೆ ಆದ ಸಂಗತಿ ಅವಳಿಗೆ ತಿಳಿದದ್ದರಿಂದ ಏನೂ ಮಾಡಲಾರದ ಸ್ಥಿತಿಯಲ್ಲಿದ್ದಳು.

ತಹಶೀಲ್ದಾರರಿಗೆ ಓಡಾಡಲು ಸರಕಾರದ ವಾಹನವಿದ್ದರೂ, ಇರಲಿ ಅಂತೊಂದು ಸ್ಕೂಟರನ್ನು ಇಟ್ಟುಕೊಂಡಿದ್ದರು. ತಹಶೀಲ್ದಾರ ಶುಖರಾಯಪ್ಪರು ಈಗ ಹೊಸದಾಗಿ ನೊಣವಿನಕೆರೆಬದು ಎಂಬ ತಾಲೂಕಿಗೆ ಬಂದು ಹಲವು ತಿಂಗಳುಗಳೋ ಅಥವಾ ವರ್ಷವೋ ಆಗಿತ್ತು. ಇನ್ನು ನಾಲ್ಕು ತಿಂಗಳಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬರಲಿತ್ತು. ಅದಕ್ಕಾಗಿ ಕಂದಾಯ ಇಲಾಖೆಯ ಎಲ್ಲ ನೌಕರರೂ ತಹಶೀಲ್ದಾರರುಗಳೂ ಮತದಾರರ ಪಟ್ಟಿ ತಯಾರಿ ಇತ್ಯಾದಿ ಕೆಲಸಗಳಲ್ಲಿ ಬಿಸೀ ಆದರು. ಬಿಸೀ ಆದ ಗಂಡನ ಬಗ್ಗೆ ಹೆಂಡತಿಯ ಪಿರಿಪಿರಿ ಹೆಚ್ಚಾದಾಗ ಒಂದು ದಿನ ಆದಿತ್ಯವಾರ ಸಂಜೆ ಬಿಡುವು ಮಾಡಿಕೊಂಡು ಬಾ ಸ್ಕೂಟರಿನಲ್ಲಿ  ಒಂದು ರೌಂಡು ಹೋಗೋಣ ಅಂತ ಹೆಂಡತಿಯನ್ನೂ ಮಗಳನ್ನೂ ಕೂರಿಸಿಕೊಂಡು ಹೊರಟರು.  ಒಂದೆಡೆ ಲೋಕೋಪಯೋಗಿಗಳೋ ಒಳಚರಂಡಿಯವರೋ ಹೊರಚರಂಡಿಯವರೋ ಕುಡಿಯುವ ನೀರಿನವರೋ ಟೆಲಿಫೋನಿನವರೋ ತೋಡಿದ ಹೊಂಡದಿಂದಾಗಿ ಬಿದ್ದು ಹೆಂಡತಿಯ ಎಡಕೈ ಮತ್ತು ಬಲಕಾಲು ಹೀಗೆ ಒಟ್ಟು ಎರಡು ಅಂಗಗಳು ಮುರಿದವು. ಆಸ್ಪತ್ರೆಯಲ್ಲಿ ಎಚ್ಚರಗೊಂಡಾಗ ಎದುರು ಗಂಡನೂ ಕಾಣದೆ ಮತ್ತರ್ಧ ಗಂಟೆ ಬಿಟ್ಟು ಬಂದ ಗಂಡನ ಮೇಲೆ ಅಸಾಧ್ಯ ಸಿಟ್ಟು ಬಂದು ವಿಚ್ಛೇದನವೇ ಆಗಬೇಕು ಎಂಬಲ್ಲಿಗೆ ಮನಸ್ಸು ಬಂದು ನಿಂತಾಗಿತ್ತು.

ಇತ್ತ ಈಗಲೂ ನಮ್ಮ ಗೋವಿಂದಗೋಪಾಲಮೂರ್ತಿಯವರೇ ಕಂದಾಯ ಸಚಿವರು. ಅವರ ದಕ್ಷತೆಯಿಂದಾಗಿ ಅವರ ಖಾತೆ ಕಳೆದೆರಡು ಮೂರು ಸಂಪುಟ ವಿಸ್ತರಣೆಯಲ್ಲಾಗಲೀ ಖಾತೆಗಳ ಪುನರ್ ಹಂಚಿಕೆಯಲ್ಲಾಗಲೀ ಬದಲಾಗಿರಲೇ ಇಲ್ಲ.

ಜಾಹೀರಾತು

 

ಒಂದು ಫೈನ್ ಮದ್ಯಾಹ್ನ ಸಿಡಿಲೆರಗಿದಂತೆ ಮೇಏಏಏಏಲಿನ ನ್ಯಾಯಾಲಯದ ತೀರ್ಪು ಹೊರಬಿತ್ತು ನೋಡಿ. ನಮ್ಮ ನೋವಿಂದನೋಪಾಲಮೂರ್ತಿ ನ್ಯಾಯಾಲಯದಲ್ಲಾದರೂ ಸೋಲಿಸಬೇಕೆಂದು ಹೊರಟಿದ್ದ ಅಂತ ಆರಂಭದಲ್ಲೇ ಹೇಳಿದ್ದೆ ಅಲ್ವಾ? ಅವನ ಚುನಾವಣಾ ತಕರಾರು ಅರ್ಜಿಯ ಪರವಾಗಿ ಆ ಮೇಏಏಏಏಲಿನ ನ್ಯಾಯಾಲಯ ತೀರ್ಪು ನೀಡಿತ್ತು. ತಕರಾರು ಏನಾಗಿತ್ತೆಂದರೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದ ಗೋವಿಂದಗೋಪಾಲಮೂರ್ತಿಯವರು ಪರಿಶಿಷ್ಟ ಜಾತಿಯವರೇ ಅಲ್ಲ ಎಂಬುದಾಗಿತ್ತು.

ನೋವಿಂದನೋಪಾಲಮೂರ್ತಿಯವರು ಗೋವಿಂದಗೋಪಾಲಮೂರ್ತಿಯವರ ಅಪ್ಪನ, ಅಮ್ಮನ ಕಾಲದ ದಾಖಲೆಗಳನ್ನೆಲ್ಲ ಎಲ್ಲಿಂದಲೋ ಸಂಪಾದಿಸಿ ಹಾಜರುಪಡಿಸಿ ತಮ್ಮ ಅರ್ಜಿಯ ಪರವಾಗಿ ತೀರ್ಪು ಪಡೆವಲ್ಲಿ ಯಶಸ್ವಿಯಾಗಿದ್ದರು. ಮೇಏಏಏಏಲಿನ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ನಾಲ್ಕೂವರೆ ವರ್ಷಗಳಿಗೂ ಹಿಂದೆ ಗೋವಿಂದಗೋಪಾಲಮೂರ್ತಿಯವರು ಶಾಸಕರಾಗಿ ಆಯ್ಕೆಯಾದುದನ್ನೇ ಅಸಿಂಧುಗೊಳಿಸಿ ಅವರ  ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶ ನೀಡಿತ್ತು.

ಜಾಹೀರಾತು

ಆ ದಿನ ರಾತ್ರ್ರಿ ಆಸ್ಪತ್ರೆಯ ಬೆಡ್ಡಿನಲ್ಲಿ ಕುಳಿತು ಮುರಿಯದ ಬಲಗೈಯಲ್ಲಿ ಕನಕಕೋಮಲೆ ಹೀಗೆ ಬರೆಯುತ್ತಿದ್ದಳು.- ಈ ಮದುವೆಯನ್ನು ಅನೂರ್ಜಿತಗೊಳಿಸಬೇಕು. ಯಾಕೆಂದರೆ, ನಾನು ಇವರನ್ನು ಮದುವೆಯಾಗಲು ಇವರ ನಾಯಿಮರಿ ನನ್ನ ಅಕ್ಕನ ಬೆಕ್ಕಿನ ಮರಿಯನ್ನು ಪ್ರೀತಿಸಿದ್ದು ಕಾರಣ. ಅದಕ್ಕೆ ಇವರು ನಾಯಿಮರಿ ಸಾಕಿದ್ದು ಕಾರಣ. ಅವರು ನಾಯಿಮರಿ ಸಾಕಲು ಅವರು ನನ್ನ ಅಕ್ಕನ ಊರಿಗೆ ವರ್ಗವಾಗಿ ಬಂದದ್ದೇ ಕಾರಣ. ಅವರು ವರ್ಗವಾಗಿ ಬರಲು ಕಂದಾಯ ಮಂತ್ರಿಗಳ ಆದೇಶವೇ ಕಾರಣ. ಆದರೆ ಈಗ ಅವರು ನಾಲ್ಕೂವರೆ ವರ್ಷಗಳ ಹಿಂದೆ ಶಾಸಕರಾಗಿ ಆಯ್ಕೆ ಆಗಿಲ್ಲ ಎಂದು ಮೇಏಏಏಏಲಿನ ನ್ಯಾಯಾಲಯದಿಂದಾಗಿ ಗೊತ್ತಾಗಿರುವುದರಿಂದ, ಅವರು ವರ್ಗಾವಣೆಯಾಗಿಲ್ಲ. ಅವರು ನನ್ನ ಅಕ್ಕನ ಮನೆ ಬಳಿ ಇರಲೂ ಇಲ್ಲ. ಅವರು ನಾಯಿಮರಿ ಸಾಕಿಲ್ಲ. ಅವರಿಗೆ ನನ್ನ ಅಕ್ಕನ ಪರಿಚಯವೂ ಆಗಿಲ್ಲ. ಅವರು ನನ್ನನ್ನು ಮದುವೆಯೇ ಆಗಿಲ್ಲ… … … …

ಇತ್ತ ಕಲಹಕಾಮಿನಿ ಹೊಸ ಅರ್ಜಿ ತಯಾರು ಮಾಡುತ್ತಿದ್ದಳು; –ನಾನು ಅವರ ವಿರುದ್ಧ ದೂರು ನೀಡಿ ವಿಚ್ಛೇದನ ಪಡೆಯಲು ನನ್ನ ಗಂಡನ ಮೇಲೆ ಅರೋಪ ಬಂದು ಅವರು ಅಮಾನತ್ತಾದುದು ಕಾರಣ. ಅದಕ್ಕೆ ಮಂತ್ರಿಗಳ ಆದೇಶವೇ ಕಾರಣ. ಅವರು ಆಗ ಶಾಸಕರಾಗಿರದೇ ಇದ್ದುದರಿಂದ ಮಂತ್ರಿಯೂ ಅಲ್ಲದ್ದರಿಂದ, ಅವರು ಆದೇಶವೇ ನೀಡಿಲ್ಲ ಎಂದರ್ಥವಾದ್ದರಿಂದ ನಾನು ಸಿಟ್ಟು ಮಡಿಕೊಂಡು ತವರು ಮನೆಗೆ ಹೋದುದೂ ಸುಳ್ಳು. ನನಗೂ ಶುಖರಾಯಪ್ಪರಿಗೂ ವಿಚ್ಛೇದನ ಆಗಿಲ್ಲವೆಂದೇ ಅರ್ಥ. ಹೀಗಾಗಿ ನನ್ನ ಗಂಡನನ್ನು ನನಗೆ ಒದಗಿಸಿಕೊಡಬೇಕಾಗಿ… … … …

ಕನಕಕೋಮಲೆ ಮತ್ತು ಕಲಹಕಾಮಿನಿ ಇವರಿಬ್ಬರ ಮೊಕದ್ದಮೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಯಾವುದೋ ಒಂದು ಹಂತದ ಮೇಏಲಿನ ನ್ಯಾಯಾಲಯವು ಹೀಗೆ ತೀರ್ಪಿತ್ತಿತು.– ಮಂತ್ರಿಗಳಾಗಲು ಶಾಸಕರಾಗಬೇಕೆಂದಿಲ್ಲ. ಮಂತ್ರಿಯಾಗಿ ಆರು ತಿಂಗಳೊಳಗೆ ಶಾಸಕರಾದರೆ ಸಾಕು. ಆಗಲೂ ಶಾಸಕರಾಗದಿದ್ದರೆ ಅಲ್ಲಿಂದ ಹೊಸದಾಗಿ ಆರಂಭಿಸಿದ್ದೆಂದು ತಿಳಿದು ಮತ್ತೆ ಆರು ತಿಂಗಳು ಅವಕಾಶವಿದೆಯೆಂದು ತಿಳಿದರಾಯಿತು. ಆಗಲೂ ಶಾಸಕರಲ್ಲದಿದ್ದರೆ ಮತ್ತೆ ಆರು…. … …

ಜಾಹೀರಾತು

 

           #     #    #     #      #  

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Dr. Ajakkala Girish Bhat
ವೃತ್ತಿಯಲ್ಲಿಕನ್ನಡ ಬೋಧಕ. ಬಂಟ್ವಾಳ ಸರಕಾರಿ ಪದವಿ ಕಾಲೇಜು ಪ್ರಾಂಶುಪಾಲ. ಇಂಗ್ಲಿಷನ್ನುಪಳಗಿಸೋಣ, ಬುದ್ಧಿಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ, ಅಸತ್ಯ ಅಥವಾ ಸತ್ಯ?, ಮುಂತಾದ ಹದಿನಾರು ಪುಸ್ತಕಗಳು ಪ್ರಕಟವಾಗಿವೆ. ವಿವಿಧ ಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ, ವಿಚಾರ ಮಂಡಿಸಿದ್ದಾರೆ.

Be the first to comment on "ಆದದ್ದೊಂದೂ ಆಗಿಲ್ಲ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*