ಭಾರತದ ಆಹಾರದ ವ್ಯವಸ್ಥೆ ಮತ್ತು ಸಂಸ್ಕೃತಿಗೆ ಪೂರಕ ಸಂಸ್ಕಾರಯುತ ಶಿಕ್ಷಣ ಅಗತ್ಯ. ಈ ಹಿನ್ನೆಲೆಯಲ್ಲಿ ಗುರುಕುಲ ಶಿಕ್ಷಣ ಪದ್ದತಿಯಡಿ ಸಂಸ್ಕೃತ ಭಾಷೆಗೆ ಒತ್ತುನೀಡಿ ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಆಯುರ್ವೇದ ಆಸ್ಪತ್ರೆ ಮತ್ತು ಆಯುರ್ವೇದ ಮಹಾ ವಿದ್ಯಾಲಯ ಆರಂಭಗೊಂಡಿರುವುದು ಸ್ತುತ್ಯರ್ಹ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಅಹಲ್ಯಾ ಹೇಳಿದರು.

ಅವರು ನ.25ರ ಬುಧವಾರ ಕೊಡುಂಗಾಯಿ ಮೂರುಕಜೆ ಅಜೇಯ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡಿರುವ 20 ಹಾಸಿಗೆಗಳ ‘ಮೈತ್ರೇಯಿ ಆಯುರ್ವೇದ ಆಸ್ಪತ್ರೆ’ಯ ಉದ್ಘಾಟನೆ ಹಾಗೂ ನೂತನ ‘ಮೈತ್ರೇಯಿ ಆಯುರ್ವೇದ ಗುರುಕುಲಂ’ ಕಟ್ಟಡದ ಶಿಲಾನ್ಯಾಸದ ಬಳಿಕ ನಡೆದ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು. ವೃತ್ತಿಯಿಂದ ನಿವೃತ್ತರಾದ ಬಳಿಕ ಅವಕಾಶ ಸಿಕ್ಕರೆ ಮೈತ್ರೇಯಿ ಗುರುಕುಲಂ ನ ಈ ಆಸ್ಪತ್ರೆ ಮತ್ತುಬವಿದಗಯಸಲಯದಲ್ಲಿ ಸೇವೆ ಸಲ್ಲಿಸಲು ಇಚ್ಛಿಸಿರುವುದಾಗಿ ತಿಳಿಸಿದರು.

ಆಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಯಕ್ ಮಾತನಾಡಿ ಸಂಸ್ಕೃತಿ ಸಂಸ್ಕಾರ ಮತ್ತು ಸಂಸ್ಕೃತ ಅಗತ್ಯ. ಸಮರ್ಪಣಾ ಮನೋಭಾವದ ಸೇವೆಗಳಿಂದ ಧರ್ಮ ಉಳಿದಿದೆ. ಆಯುರ್ವೇದ ಆಸ್ಪತ್ರೆ ಮತ್ತು ಮಹಾವಿದ್ಯಾಲಯ ಇಲ್ಲಿ ಆರಂಭ ಆಗಿರುವುದು ಹೆಮ್ಮೆಯ ವಿಷಯ ಎಂದರು. ಸಂಸ್ಕೃತ ಭಾರತಿಯ ದಿನೇಶ ಕಾಮತ್ ಮುಖ್ಯ ಅತಿಥಿಯಾಗಿದ್ದರು. ಗುರುಕುಲ ಪ್ರಕಲ್ಪದ ಅಖಿಲ ಭಾರತ ಸಂಯೋಜಕ ರಾಮಚಂದ್ರ ಭಟ್ ಕೋಟೆಮನೆ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಅಜೇಯ ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಾಗತಿಸಿ ಪ್ರಸ್ತಾವನೆಗೈದ ಆಡಳಿತ ಮಂಡಳಿ ಅಧ್ಯಕ್ಷೆ ಡಾ. ಸುಧಾ ರಾವ್ ಮಹಿಳೆಯರಿಗಾಗಿ ಮೀಸಲಾದ ಈ ವಸತಿ ಸಹಿತ ಗುರುಕುಲದಲ್ಲಿ 2 ವರ್ಷಗಳ ಪೂರ್ವ ಆಯುರ್ವೇದ, 4½ ವರ್ಷಗಳ ಬಿಎಎಂಎಸ್ ಪದವಿ ಹಾಗೂ 1 ವರ್ಷದ ಇಂಟರ್ನ್ಶಿಪ್ ಒಳಗೊಂಡ ಒಟ್ಟು 7½ ವರ್ಷಗಳ ಸಮಗ್ರ ಶಿಕ್ಷಣ ನೀಡಲಾಗುವುದು. ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಸಂಯೋಜನೆ ಹಾಗೂ ಕೇಂದ್ರ ಆಯುಷ್ ಸಚಿವಾಲಯ ಮತ್ತು (ಎನ್ ಸಿ ಐ ಎಸ್ ಎಮ್ ಅನುಮೋದನೆಯೊಂದಿಗೆ ಸಂಸ್ಕೃತ ಭಾಷೆಯಲ್ಲಿಯೇ ಮೂಲ ಗ್ರಂಥಗಳ ಅಧ್ಯಯನಕ್ಕೆ ಇಲ್ಲಿ ಒತ್ತು ನೀಡಲಾಗಿದೆ ಎಂದರು. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ ರವಿಗಣೇಶ್ ಮೊಗ್ರ ಆಶಯ ನುಡಿ ಹೇಳಿದರು. ಅಜೇಯ ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಪೈ ವಂದಿಸಿದರು. ಪಸನ್ನಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.


Be the first to comment on "ಕೊಡುಂಗಾಯಿ ಮೂರ್ಕಜೆ: ಮೈತ್ರೇಯಿ ಆಯುರ್ವೇದ ಗುರುಕುಲಂ , ಆಸ್ಪತ್ರೆ ಉದ್ಘಾಟನೆ, ನೂತನ ಕಟ್ಟಡಕ್ಕೆ ಶಿಲಾನ್ಯಾಸ"