
ಬಂಟ್ವಾಳ: ಸಿದ್ದಕಟ್ಟೆಯ ಕುಲಾಲ ಸುಧಾರಕ ಸಂಘದ ನೇತೃತ್ವದಲ್ಲಿ ಕುಕ್ಕಿಪಾಡಿ ಗ್ರಾಮದ ಪೇಳತ್ತಬೆಟ್ಟು ಕುದ್ಕೊಳಿ ನಿವಾಸಿ ಜಯಂತಿ ಅವರ ಕುಟುಂಬಕ್ಕೆ ನಿರ್ಮಿಸಿಕೊಡಲಾದ ‘ಸಮೃದ್ಧಿ ನಿಲಯ’ ನೂತನ ಮನೆಯನ್ನು ಹಸ್ತಾಂತರಿಸಲಾಯಿತು.

ಈ ಪ್ರಯುಕ್ತ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪೂಂಜಾದ ಕೃಷ್ಣ ಪ್ರಸಾದ್ ಆಚಾರ್ಯ ಅಸ್ರಣ್ಣರು ಆಶೀರ್ವಚನ ನೀಡಿ, “ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ಸಮಾಜಮುಖಿ ಸೇವಾ ಕಾರ್ಯ ಶ್ಲಾಘನೀಯ. ಇಂತಹ ಸತ್ಕಾರ್ಯಗಳನ್ನು ಮುಂದುವರಿಸಲು ಭಗವಂತ ಸಂಘಕ್ಕೆ ಇನ್ನಷ್ಟು ಶಕ್ತಿ ನೀಡಲಿ. ನೂತನ ಮನೆಯಲ್ಲಿ ನೆಲೆಸುವ ಕುಟುಂಬಕ್ಕೆ ಸಕಲ ಸುಖ-ಸಮೃದ್ಧಿ ಲಭಿಸಲಿ” ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, “ಸಂಘಟನೆಗಳು ಸ್ಥಾಪನೆಯಾಗುವ ಉದ್ದೇಶ ಮತ್ತು ಅವುಗಳ ಮಹತ್ವವನ್ನು ಸಿದ್ದಕಟ್ಟೆ ಕುಲಾಲ ಸಂಘ ತನ್ನ ಕಾರ್ಯಗಳ ಮೂಲಕ ಸಾಬೀತುಪಡಿಸಿದೆ. ಸಮಾಜದ ಅಶಕ್ತರ ಏಳಿಗೆಗೆ ಸಂಘಟನೆಗಳು ಹೇಗೆ ಪೂರಕವಾಗಬಹುದು ಎಂಬುದಕ್ಕೆ ಈ ಮನೆ ನಿರ್ಮಾಣ ಕಾರ್ಯವೇ ಉತ್ತಮ ನಿದರ್ಶನ” ಎಂದು ಬಣ್ಣಿಸಿದರು. ಅಲ್ಲದೆ, ಈ ಕಾರ್ಯದ ಮುಂದಾಳತ್ವ ವಹಿಸಿದ್ದ ಸಂಘದ ಅಧ್ಯಕ್ಷ ಮನೋಜ್ ಕುಲಾಲ್ ಹಾಗೂ ಸರ್ವ ಸದಸ್ಯರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ಮಾತನಾಡಿ, “2002-03ರಲ್ಲಿ ಸೋಮಯ್ಯ ಕುಲಾಲ್ ಸಂಗಬೆಟ್ಟು ಅವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಆರಂಭವಾದ ಈ ಸಂಘವು ಅಂದಿನಿಂದಲೂ ಸಮಾಜಮುಖಿ ಚಿಂತನೆಯೊಂದಿಗೆ ಮುನ್ನಡೆಯುತ್ತಿದೆ. ಇದೀಗ ಶಾಶ್ವತ ಸೇವಾ ಯೋಜನೆಯಡಿ ಬಡ ಕುಟುಂಬವೊಂದರ ಬದುಕಿಗೆ ಬೆಳಕಾಗಿರುವುದು ಅತ್ಯಂತ ಸಂತಸದ ವಿಚಾರ” ಎಂದರು.
ಕೃತಜ್ಞತೆ ಹಾಗೂ ಸನ್ಮಾನ: ನೂತನ ಮನೆಯ ಕೀಲಿ ಕೈ ಸ್ವೀಕರಿಸಿದ ಜಯಂತಿ ಅವರು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಕೃತಜ್ಞತೆ ಸಲ್ಲಿಸಿದರು. ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು ಹಾಗೂ ಪ್ರಮುಖರನ್ನು ಇದೇ ವೇಳೆ ಗೌರವ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಪ್ರಮುಖರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಬಂಟ್ವಾಳ ಕುಲಾಲ ಸೇವಾದಳದ ದಳಪತಿ ಚಂದ್ರಶೇಖರ ಕಾಮಾಜೆ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ, ಯೋಗೀಶ್ ಆಚಾರ್ಯ ಕುಕ್ಕಿಪಾಡಿ, ಯುವಮೋರ್ಚಾ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಬಜ, ರತ್ನಕುಮಾರ್ ಚೌಟ, ನಾಗೇಶ್ ಬಿಲಾಡಿ, ಸಂತೋಷ್ ಕಾರ್ಕಳ, ಯಶೋಧರ ಉಪ್ಪಿರ ಹಾಗೂ ಚೈತ್ರಾ ಸೂರ್ಯ ಉಪಸ್ಥಿತರಿದ್ದರು.
ಕುಡ್ಕೋಳಿಬೈಲು ವರ್ಷಾ ಪ್ರಾರ್ಥಿಸಿದರು. ಅಂಕಿತಾ ಸ್ವಾಗತಿಸಿ, ಸಂತೋಷ್ ಕುಲಾಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


Be the first to comment on "ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದಿಂದ ‘ಸಮೃದ್ಧಿ ನಿಲಯ’ ನೂತನ ಮನೆ ಹಸ್ತಾಂತರ"