
ವಿಟ್ಲ: ಅಜೇಯ ಟ್ರಸ್ಟ್ ವತಿಯಿಂದ ಬಂಟ್ವಾಳ ತಾಲೂಕಿನ ಕೊಡಂಗಾಯಿ ಮೂರುಕಜೆಯಲ್ಲಿ ನಿರ್ಮಾಣಗೊಳ್ಳಲಿರುವ ‘ಮೈತ್ರೇಯಿ ಆಯುರ್ವೇದ ಗುರುಕುಲಂ’ (ಪೂರ್ವ ಆಯುರ್ವೇದ ಶಿಕ್ಷಣ ಹಾಗೂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ) ಮತ್ತು ನೂತನ ಆಸ್ಪತ್ರೆ ಕಟ್ಟಡದ ಶಿಲಾನ್ಯಾಸ ಹಾಗೂ ಈಗಾಗಲೇ ಸಿದ್ಧಗೊಂಡಿರುವ 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭವು ನವೆಂಬರ್ 25ರ ಬುಧವಾರ ಬೆಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಮೈತ್ರೇಯಿ ಆಯುರ್ವೇದ ಗುರುಕುಲಂನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಸುಧಾರಾವ್ ತಿಳಿಸಿದರು.

ಮೈತ್ರೇಯಿ ಗುರುಕುಲದ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್ನ ಪ್ರಮುಖ ಉದ್ದೇಶವಾಗಿದೆ. 1994ರಲ್ಲಿ ಸ್ಥಾಪನೆಯಾದ ಮೈತ್ರೇಯಿ ಗುರುಕುಲಂ, ಹೆಣ್ಣುಮಕ್ಕಳಿಗೆ ಮೌಲ್ಯಾಧಾರಿತ ವಸತಿ ಸಹಿತ ಶಿಕ್ಷಣ ನೀಡುತ್ತಾ ಬಂದಿದ್ದು, ಇದೀಗ ಆಯುರ್ವೇದ ಶಿಕ್ಷಣ ಕ್ಷೇತ್ರಕ್ಕೂ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ” ಎಂದರು.
ಕೋರ್ಸ್ ಮತ್ತು ಶಿಕ್ಷಣದ ವಿಶೇಷತೆಗಳು:
- ಸಮಗ್ರ ಶಿಕ್ಷಣ: ಮಹಿಳೆಯರಿಗಾಗಿ ಮೀಸಲಾದ ಈ ವಸತಿ ಸಹಿತ ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 7½ ವರ್ಷಗಳ ಸಮಗ್ರ ಶಿಕ್ಷಣ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದರಲ್ಲಿ 2 ವರ್ಷಗಳ ಪೂರ್ವ ಆಯುರ್ವೇದ ಶಿಕ್ಷಣ, 4½ ವರ್ಷಗಳ BAMS ಪದವಿ ಹಾಗೂ 1 ವರ್ಷದ ಕಡ್ಡಾಯ ಇಂಟರ್ನ್ಶಿಪ್ ಒಳಗೊಂಡಿರುತ್ತದೆ.
- ಮಾನ್ಯತೆ: ನವದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ ಸಂಯೋಜನೆ ಹೊಂದಿದ್ದು, ಕೇಂದ್ರ ಆಯುಷ್ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಪದ್ಧತಿಗಳ ರಾಷ್ಟ್ರೀಯ ಆಯೋಗದ (NCISM) ಮಾನ್ಯತೆ ಮತ್ತು ನಿಯಂತ್ರಣಾತ್ಮಕ ಅನುಮೋದನೆಗಳಿಗೆ ಒಳಪಟ್ಟಿದೆ.
- ಮೌಲ್ಯಾಧಾರಿತ ಕಲಿಕೆ: ಸಂಸ್ಕೃತ ಭಾಷೆಯಲ್ಲಿ ಶಾಸ್ತ್ರೀಯ ಗ್ರಂಥಗಳ ಅಧ್ಯಯನ, ಯೋಗ, ಭಾರತೀಯ ಜ್ಞಾನಪರಂಪರೆ ಹಾಗೂ ನೈತಿಕ ಮೌಲ್ಯಗಳೊಂದಿಗೆ ಜ್ಞಾನವಂತ ಮತ್ತು ಕರುಣಾಮಯಿ ಆಯುರ್ವೇದ ವೈದ್ಯರನ್ನು ರೂಪಿಸುವುದರ ಜೊತೆಗೆ, ಜನಸಾಮಾನ್ಯರಿಗೆ ಗುಣಮಟ್ಟದ ಆಯುರ್ವೇದ ಆರೋಗ್ಯ ಸೇವೆ ಒದಗಿಸುವ ಆಶಯವನ್ನು ಸಂಸ್ಥೆ ಹೊಂದಿದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಕೃತ ಭಾರತಿ ಸಂಘಟನೆಯ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ದಿನೇಶ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಗೌರವ ಅತಿಥಿಗಳಾಗಿ ಬೆಂಗಳೂರಿನ ಸೆಂಚುರಿ ಗ್ರೂಪ್ ಆಫ್ ಕಂಪನೀಸ್ನ ಅಧ್ಯಕ್ಷ ಡಾ. ಪಿ. ದಯಾನಂದ ಪೈ, ಮೈಸೂರು-ಮಂಗಳೂರು ಗಣೇಶ್ ಬೀಡಿ ವರ್ಕ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಜಗನ್ನಾಥ ಶೆಣೈ, ಬರೋಡಾದ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ. ಲಿಮಿಟೆಡ್ನ ಸಂಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಶೆಟ್ಟಿ ಹಾಗೂ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಅಹಲ್ಯಾ ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಕೋರಿದರು.ಪತ್ರಿಕಾಗೋಷ್ಠಿಯಲ್ಲಿ ಅಜೇಯ ಟ್ರಸ್ಟ್ನ ಅಧ್ಯಕ್ಷರಾದ ಸುಬ್ರಾಯ ಪೈ ಹಾಗೂ ಮೈತ್ರೇಯಿ ಆಯುರ್ವೇದ ಗುರುಕುಲಂನ ಪ್ರಾಂಶುಪಾಲರಾದ ಡಾ. ರವಿಗಣೇಶ್ ಮೊಗ್ರ ಉಪಸ್ಥಿತರಿದ್ದರು.



Be the first to comment on "ನ. 25: ಮೈತ್ರೇಯಿ ಆಯುರ್ವೇದ ಗುರುಕುಲಂ ನೂತನ ಕಟ್ಟಡ ಶಿಲಾನ್ಯಾಸ ಹಾಗೂ ಆಸ್ಪತ್ರೆ ಉದ್ಘಾಟನಾ ಸಮಾರಂಭ"