“ವ್ಯಕ್ತಿ ಎಷ್ಟೇ ಅಧಿಕಾರ, ಸಂಪತ್ತು ಹಾಗೂ ಸೌಕರ್ಯಗಳನ್ನು ಹೊಂದಿದ್ದರೂ, ಅನಾರೋಗ್ಯ ಕಾಡಿ ಆತಂಕದ ವಾತಾವರಣ ಎದುರಾದಾಗ ಧೈರ್ಯ ತುಂಬಿ ಆತಂಕ ನಿವಾರಿಸಲು ವೈದ್ಯ ವೃತ್ತಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರನ್ನು ಸಾರ್ವಜನಿಕವಾಗಿ ಅಭಿನಂದಿಸುವುದು ಶ್ಲಾಘನೀಯ ಕಾರ್ಯ” ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯಪಟ್ಟರು.

ಸಿದ್ದಕಟ್ಟೆಯ ಸ್ವಾಗತ ಬಿಲ್ಡಿಂಗ್ ಆವರಣದಲ್ಲಿ ದೀಪಾವಳಿ ಪ್ರಯುಕ್ತ ಆಯೋಜಿಸಲಾಗಿದ್ದ ಲಕ್ಷ್ಮೀ ಪೂಜೆಯ ಸಮಾರಂಭದಲ್ಲಿ ಅವರು ಮಾತನಾಡಿದರು. ಸಿದ್ದಕಟ್ಟೆಯಲ್ಲಿ ಕಳೆದ 30 ವರ್ಷಗಳಿಂದ ನಿರಂತರವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಕೃಷ್ಣಮೂರ್ತಿ ಅವರಿಗೆ ಸ್ವಾಗತ ಕಾಂಪ್ಲೆಕ್ಸ್ ಮಾಲೀಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು. “ಸಮಾಜದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಮಾನರು; ತಾವು ಕರ್ತವ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಜನಸಾಮಾನ್ಯರೊಂದಿಗೆ ಎಂತಹ ಬಾಂಧವ್ಯ ಬೆಳೆಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ” ಎಂದರು.

ತೃಪ್ತಿ ತಂದ ಗ್ರಾಮೀಣ ಸೇವೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಕೃಷ್ಣಮೂರ್ತಿ ಅವರು, “ಗ್ರಾಮಾಂತರ ಪ್ರದೇಶದಲ್ಲಿ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸುವುದು ನನಗೆ ಅತೀವ ತೃಪ್ತಿ ತಂದಿದೆ. ಸಾರ್ವಜನಿಕರು ನೀಡಿದ ಈ ಪ್ರೀತಿಯ ಅಭಿನಂದನೆಗೆ ನಾನು ಸದಾ ಕೃತಜ್ಞನಾಗಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿದರು.

ಶರಣ್ ಕರ್ಕೇರ, ಆದಿತ್ಯ ಕರ್ಕೇರ, ಹಿರಿಯರಾದ ಸಂಜೀವ ಶೆಟ್ಟಿ ಉಮ್ಮೆಟ್ಟು, ಸ್ವಾಗತ್ ಕಾಂಪ್ಲೆಕ್ಸ್ ಮಾಲೀಕರಾದ ಹರೀಶ್ ಶೆಟ್ಟಿ, ಯೋಗೀಶ್ ಶೆಟ್ಟಿಗಾರ್, ಬಾಬು ಶೆಟ್ಟಿ, ಸಿ.ಎ. ಬ್ಯಾಂಕ್ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಶಿವ ಗೌಡ, ಪ್ರಮುಖರಾದ ಕೇಶವ ಶಬರೀಶ, ಪ್ರಕಾಶ್ ಶೆಟ್ಟಿ, ಸ್ವಸ್ತಿಕ್, ಡಾ. ರಕ್ಷಿತ್ ಭಟ್, ಹೇಮಚಂದ್ರ ಗೌಡ, ಗಣೇಶ ಹೊಳ್ಳ, ಸಂತೋಷ ಅಂಚನ್, ವಾರಿಜ ಮೋಹನ್, ಸುರೇಶ ಶೆಟ್ಟಿ ಕಾಮಧೇನು, ಮೀನಾಕ್ಷಿ, ಸಂಧ್ಯಾ ಮೋಹನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಸಿದ್ದಕಟ್ಟೆ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ, ವಂದಿಸಿದರು.


Be the first to comment on "ರೋಗಿಯ ಆತಂಕ ನಿವಾರಣೆ ವೈದ್ಯಕೀಯ ಸೇವೆಯಿಂದ ಮಾತ್ರ ಸಾಧ್ಯ: ಪ್ರಭಾಕರ ಪ್ರಭು"