
ಕಲ್ಲಡ್ಕದ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ವತಿಯಿಂದ 49ನೇ ವರ್ಷದ ಶಾರದೋತ್ಸವ ಅ. 17 ಶನಿವಾರದಿಂದ 20 ಮಂಗಳವಾರವರೆಗೆ ನಾಲ್ಕು ದಿನ ನಡೆಯಲಿದೆ. 18ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಈ ಬಾರಿಯ ಶಾಂತಶ್ರೀ ಪ್ರಶಸ್ತಿಯನ್ನು ಕಲಾರಾಧಕ, ಕಲಾಪೋಷಕ ಮತ್ತು ಬಲ್ನಾಡು ಉಳ್ಳಾಲ್ತಿ ಪಾತ್ರಿಯಾಗಿರುವ ಬಿ.ಕೆ. ರಾಜ್ ನಂದಾವರ ಅವರಿಗೆ ನೀಡಿ ಗೌರವಿಸಲಾಗುವುದು.

ಅಕ್ಟೋಬರ್ 11ರಂದು ಮಾರ್ನೆಮಿದ ಗೊಬ್ಬು ಎಂಬ ವಿಶೇಷ ಕ್ರೀಡಾಕೂಟವೂ ನಡೆಯಲಿದೆ. ಅಕ್ಟೋಬರ್ 17ರಂದು ವೇದಮೂರ್ತಿ ಪಳನೀರು ಶ್ರೀಪತಿ ಭಟ್ ಇವರಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದ್ದು ರಾತ್ರಿ ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆಯರಿಂದ ಭರತನಾಟ್ಯ ಮತ್ತು ಸ್ಥಳೀಯ ಪ್ರತಿಭೆ ಹಾಗೂ ನಾಟ್ಯ ವೇದ ಮತ್ತು ಚಿಂತಾಮಣಿ ತಂಡಗಳಿಂದ ನಾಟ್ಯ ವೈವಿಧ್ಯ ನಡೆಯಲಿದೆ.

ಅಕ್ಟೋಬರ್ 18ರಂದು ಮಧ್ಯಾಹ್ನ ದುರ್ಗಾಹೋಮದ ಪೂರ್ಣಾಹುತಿ ನಂತರ ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು ಈ ಸಂದರ್ಭ ಸುಮಾರು 45 ವರ್ಷಗಳಿಂದ ನೆಟ್ಲ ದೇವಸ್ಥಾನದಲ್ಲಿ ಡೋಲು ಬಾರಿಸುವ ಶ್ರೀನಿವಾಸ ದೇವಾಡಿಗ ನೆಟ್ಲ ಇವರಿಗೆ ಗ್ರಾಮ ಗೌರವ ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕರಾದ ಪ್ರಶಾಂತ್ ಕಲ್ಲಡ್ಕ ಇವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 90 ಶೇಕಡಾ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪನೆಯೂ ನಡೆಯಲಿದೆ. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸುಲೋಚನಾ ಜಿ.ಕೆ. ಭಟ್ ವಹಿಸಲಿದ್ದು ಧಾರ್ಮಿಕ ಉಪನ್ಯಾಸವನ್ನು ಡಾ. ರವೀಶ್ ಪಡುಮಲೆ ಇವರು ಮಾಡಲಿದ್ದಾರೆ. ಆ ದಿನ ರಾತ್ರಿ ಚಾಪರ್ಕ ಕಲಾವಿದರು ಅಭಿನಯಿಸುವ ಯಾನೊರಿ ಬರೊಲಿಯ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 19ರಂದು ಬೆಳಗ್ಗೆ ಅಕ್ಷರಭ್ಯಾಸ ಮತ್ತು ರಾತ್ರಿ ಶಾರದಾ ಆರ್ಟ್ಸ್ ಮಂಜೇಶ್ವರ ತಂಡದಿಂದ ಒಂತೆ ಲೇಟಾಂಡ್ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 20ರಂದು ಸಣ್ಣ ಹೆಣ್ಣು ಮಕ್ಕಳಿಗೆ ಮೂಗು ಚುಚ್ಚುವ ನಾಸಿಕ ವೇದ ಕಾರ್ಯಕ್ರಮ ಮತ್ತು ಆಯುಧ ಪೂಜೆಯು ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ದೇವಿಗೆ ಮಹಾಮಂಗಳಾರತಿ ನಡೆಯಲಿದ್ದು ಸಂಜೆ ಆರು ಮೂವತ್ತು ಗಂಟೆಗೆ ಕಲ್ಲಡ್ಕ ರಾಜರಸ್ತೆಯಲ್ಲಿ ವೈಭವದ ಶೋಭಯಾತ್ರೆಯೊಂದಿಗೆ ಉತ್ಸವವು ಸಮಾಪನಗೊಳ್ಳಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಯತೀನ್ ಕುಮಾರ್ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Be the first to comment on "ಶಾಂತಶ್ರೀ ಪ್ರಶಸ್ತಿಗೆ ಬಿ.ಕೆ. ರಾಜ್ ನಂದಾವರ ಆಯ್ಕೆ"