
ಹರೀಶ ಮಾಂಬಾಡಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಮಗಳನ್ನು ಒಳಗೊಂಡಿರುವ ಪೈಕಿ ಮುಂಚೂಣಿಯಲ್ಲಿರುವ ಬಂಟ್ವಾಳ ತಾಲೂಕಿನಲ್ಲಿ ಕಂದಾಯ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಕೇವಲ ಮೂರು ಹೋಬಳಿಗಳು ಕಾರ್ಯಾಚರಿಸುತ್ತಿವೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹೋಬಳಿಗಳ ಸಂಖ್ಯೆ ಹೆಚ್ಚಾಗಬೇಕಿದ್ದು, ಜನರ ಕೆಲಸ ಕಾರ್ಯಗಳು ವೇಗ ಪಡೆಯಲು ಸಹಕಾರಿಯಾಗುತ್ತವೆ.

ಹಲವು ವರ್ಷಗಳ ಹಿಂದೆಯೇ ಕಾವಳಮುಡೂರು ಮತ್ತು ಮಾಣಿಯನ್ನು ಕೇಂದ್ರೀಕರಿಸಿ, ಹೆಚ್ಚುವರಿ ಗ್ರಾಮಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ವಿಂಗಡಿಸಿ ಪ್ರಸ್ತಾವನೆ ಕಳುಹಿಸಲಾಗಿದೆ. ಅದಿನ್ನೂ ಕಾರ್ಯರೂಪಕ್ಕೆ ಬರಬೇಕಿದೆ .
ಪ್ರಸ್ತುತ ಬಂಟ್ವಾಳ, ಪಾಣೆಮಂಗಳೂರು ಮತ್ತು ವಿಟ್ಲ ಹೋಬಳಿಗಳು ಕಾರ್ಯಾಚರಿಸುತ್ತಿದ್ದು, ಇವುಗಳ ಪೈಕಿ ವಿಟ್ಲದ ನಾಡಕಚೇರಿ ವಿಟ್ಲ ಪೇಟೆಯಲ್ಲಿದ್ದರೆ, ಉಳಿದೆರಡು ಹೋಬಳಿಯ ನಾಡಕಚೇರಿ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿದೆ.

ಬಂಟ್ವಾಳ ಹೋಬಳಿ:
ಇಲ್ಲಿಗೆ 17 ಗ್ರಾಮವೃತ್ತಗಳು (ಗ್ರಾಮಾಡಳಿತಾಧಿಕಾರಿ ಕಾರ್ಯವ್ಯಾಪ್ತಿಗೆ ಸಂಬಂಧಿಸಿ), 31 ಗ್ರಾಮಗಳು, 16 ಗ್ರಾಮ ಪಂಚಾಯಿತಿ ಒಳಗೊಂಡಿದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಒಂದು ಗ್ರಾಮವಿದೆ. ಅಜ್ಜಿಬೆಟ್ಟು, ಚೆನ್ನೈತೋಡಿ, ಮೂಡನಡುಗೋಡು, ಬುಡೋಳಿ, ಪಿಲಿಮೊಗರು, ಅಮ್ಟಾಡಿ, ಕುರಿಯಾಳ, ಬಡಗಕಜೆಕಾರು, ತೆಂಕಕಜೆಕಾರು, ಉಳಿ, ದೇವಸ್ಯಮುಡೂರು, ಕಾವಳಮುಡೂರು, ಕಾವಳಪಡೂರು, ಕುಡಂಬೆಟ್ಟು, ಕಾಡಬೆಟ್ಟು, ನಾವೂರು, ದೇವಸ್ಯಪಡೂರು, ರಾಯಿ, ಕೊಯಿಲ, ಸಂಗಬೆಟ್ಟು, ಕರ್ಪೆ, ಕುಕ್ಕಿಪ್ಪಾಡಿ, ಎಲಿಯನಡುಗೋಡು, ಪಂಜಿಕಲ್ಲು, ಬಂಟ್ವಾಳ ಕಸ್ಬಾ, ಪಿಲಾತಬೆಟ್ಟು, ಇರ್ವತ್ತೂರು,ಮೂಡಪಡುಕೋಡಿ, ಸರಪಾಡಿ, ಮಣಿನಾಲ್ಕೂರು ಗ್ರಾಮಗಳು ಇಲ್ಲಿಗೆ ಸೇರಿವೆ. ಈ ಊರಿನವರು ನಾಡಕಚೇರಿಯ ಯಾವುದೇ ಕೆಲಸವಾಗಬೇಕಿದ್ದರೂ ಬಿ.ಸಿ.ರೋಡಿಗೆ ಬರಬೇಕು.

ಪಾಣೆಮಂಗಳೂರು ಹೋಬಳಿ:
ಬಡಗಬೆಳ್ಳೂರು, ತೆಂಕಬೆಳ್ಳೂರು, ಗೋಳ್ತಮಜಲು, ಅಮ್ಟೂರು, ಕಡೇಶ್ವಾಲ್ಯ, ಬರಿಮಾರು, ಬಂಟ್ವಾಳ ಮೂಡ, ಅಮ್ಮುಂಜೆ, ಕರಿಯಂಗಳ, ಕಳ್ಳಿಗೆ, ತುಂಬೆ, ಬಾಳ್ತಿಲ, ಮೇರಮಜಲು, ಕೊಡ್ಮಣ್, ಪುದು, ಪಾಣೆಮಂಗಳೂರು, ಸಜೀಪಮುನ್ನೂರು, ಮಂಚಿ, ನರಿಕೊಂಬು ಮತ್ತು ಶಂಭೂರು ಗ್ರಾಮಗಳು ಇಲ್ಲಿಗೆ ಸೇರಿವೆ. ಒಟ್ಟು 13 ಗ್ರಾಮವೃತ್ತ, 21 ಗ್ರಾಮಗಳು, 15 ಗ್ರಾಪಂ ಸೇರಿದ್ದು, ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಎರಡು ಗ್ರಾಮಗಳು ಸೇರಿವೆ.

ವಿಟ್ಲ ಹೋಬಳಿ:
ವಿಟ್ಲ ಹೋಬಳಿಯಲ್ಲಿ ಒಟ್ಟು 18 ಗ್ರಾಮವೃತ್ತಗಳಿದ್ದು, 23 ಗ್ರಾಮಗಳು, 20 ಗ್ರಾಪಂಗಳಿವೆ. ಒಂದು ಪಟ್ಟಣ ಪಂಚಾಯಿತಿ ಇಲ್ಲಿ ಒಳಗೊಂಡಿದೆ. ವಿಟ್ಲದಲ್ಲಿ ನಾಡಕಚೇರಿ ಇದ್ದು, ಈ ವ್ಯಾಪ್ತಿಗೆ ಕೇಪು, ಕುಳ, ಕೆದಿಲ, ಇಡ್ಕಿದು, ಅಳಿಕೆ, ಅನಂತಾಡಿ, ನೆಟ್ಲಮುಡ್ನೂರು, ವಿಟ್ಲಪಡ್ನೂರು, ವೀರಕಂಭ, ಬೋಳಂತೂರು, ವಿಟ್ಲಮುಡ್ನೂರು, ವಿಟ್ಲ ಕಸಬಾ, ಪೆರ್ನೆ, ಬಿಳಿಯೂರು, ಕನ್ಯಾನ, ಪೆರುವಾಯಿ, ಮಾಣಿಲ, ಕರೋಪಾಡಿ, ಕೊಳ್ನಾಡು, ಸಾಲೆತ್ತೂರು, ಮಾಣಿ, ಪೆರಾಜೆ ಮತ್ತು ಪುಣಚ ಗ್ರಾಮಗಳು ಒಳಗೊಂಡಿವೆ.
ಹೋಬಳಿ ಕೆಲಸಗಳೇನು?
ಹೋಬಳಿ ಅಂದರೆ, ಜಿಲ್ಲೆ ಹಾಗೂ ತಾಲೂಕಿನ ನಂತರದ ಹಂತದ ಆಡಳಿತ ವಿಭಾಗ. ಇಲ್ಲಿ ಉಪತಹಸೀಲ್ದಾರ್ ಇರುತ್ತಾರೆ. ನಾಡ ಕಚೇರಿಯು ನಿರ್ವಹಣೆಯಲ್ಲಿರುತ್ತದೆ. ಭೂದಾಖಲೆಗಳು, ಕಂದಾಯ ವಿಚಾರಗಳ ನಿಭಾವಣೆ ಸೇರಿದಂತೆ ಸ್ಥಳೀಯ ನಾಗರಿಕರ ಸೇವಾ ಕೇಂದ್ರ ಇದಾಗಿರುತ್ತದೆ. ಹೀಗಾಗಿ ಹೋಬಳಿ ಕಚೇರಿಯು ಸರಕಾರಿ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಅತ್ಯವಶ್ಯಕ. ಈ ಕಾರಣದಿಂದ ಸಾರ್ವಜನಿಕರಿಗೆ ಸುಗಮ ಮತ್ತು ತ್ವರಿತವಾಗಿ ಕೆಲಸವಾಗಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಿರುವ ಹೋಬಳಿಗಳನ್ನು ವಿಭಜಿಸಿ, ಹೊಸದಾಗಿ ಹೋಬಳಿಗಳನ್ನು ಮಾಡುವುದು ಉತ್ತಮ ಎಂಬ ಬೇಡಿಕೆ ಇಂದು ನಿನ್ನೆಯದಲ್ಲ.
ಬಂಟ್ವಾಳ ತಾಲೂಕು ವಿವರ
ಹೋಬಳಿ 3
ನಾಡಕಚೇರಿ 2
ಗ್ರಾಮವೃತ್ತ 48
ಗ್ರಾಮಗಳು 75
ಗ್ರಾಪಂಗಳು 51
ಪುರಸಭೆ 1
ಪಟ್ಟಣ ಪಂಚಾಯಿತಿ 1


Be the first to comment on "ಎಪ್ಪತ್ತೈದು ಗ್ರಾಮಗಳಿಗೆ ಮೂರು ಹೋಬಳಿ ‘ಭಾರ’ | ಜನಸಾಮಾನ್ಯರಿಗೆ ಕಷ್ಟ | ನಾಡಕಚೇರಿ ಊರಿಗೆ ಹತ್ತಿರವಿರಲಿ"