ಪತ್ತನಾಜೆ ಉತ್ಸವ ಸಮಾಪ್ತಿ: ಧರ್ಮಸ್ಥಳದಲ್ಲಿ ವಿಶೇಷ ಪೂಜೆಗಳು, ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ ಪ್ರಯುಕ್ತ ಸೋಮವಾರ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ ನೆರವೇರಿತು. ಬಳಿಕ ಶ್ರೀ ದೇವರ ಉತ್ಸವಮೂರ್ತಿಯ ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ ಹಾಗೂ ಧ್ವಜಮರ ಅವರೋಹಣ ವಿಧಿವಿಧಾನಗಳೊಂದಿಗೆ ಉತ್ಸವಮೂರ್ತಿಯು ಗರ್ಭಗುಡಿಗೆ ಪ್ರವೇಶಿಸುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಸೇವೆಗಳು ಮತ್ತು ಉತ್ಸವಗಳು ಸಮಾಪ್ತಿಗೊಂಡವು.

ಕಾರ್ತಿಕ ಮಾಸದ ದೀಪೋತ್ಸವದೊಂದಿಗೆ ಎಂದಿನಂತೆ ವಿಶೇಷ ಸೇವೆಗಳು ಹಾಗೂ ಉತ್ಸವಗಳು ಪುನರಾರಂಭಗೊಳ್ಳಲಿವೆ. ಸೋಮವಾರದ ಕಾರಣ ಕ್ಷೇತ್ರದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದು, ಊರು-ಪರಊರುಗಳಿಂದ ಆಗಮಿಸಿದ ಸಾವಿರಾರು ಭಕ್ತರು ಉತ್ಸವಗಳಲ್ಲಿ ಪಾಲ್ಗೊಂಡರು.

ಯಕ್ಷಗಾನ ಮೇಳದ ತಿರುಗಾಟ ಸಮಾಪ್ತಿ

ಜಾಹೀರಾತು

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ವಾರ್ಷಿಕ ತಿರುಗಾಟವೂ ಇದೇ ಸಂದರ್ಭದಲ್ಲಿ ಸಮಾಪ್ತಿಗೊಂಡಿತು. ಈ ಅಂಗವಾಗಿ ಮೇಳದ ಶ್ರೀ ಮಹಾಗಣಪತಿ ದೇವರಿಗೆ ಧರ್ಮಸ್ಥಳದ ಮಂಜುಕೃಪಾದಲ್ಲಿ ಮಧ್ಯಾಹ್ನ ಗಣಯಾಗ ಹಾಗೂ ಮಹಾಪೂಜೆ ನೆರವೇರಿಸಲಾಯಿತು.

ಸಂಜೆ ಮಹಾಪೂಜೆಯ ನಂತರ ಕ್ಷೇತ್ರದ ಸಕಲ ಗೌರವಗಳೊಂದಿಗೆ ಶ್ರೀ ಮಹಾಗಣಪತಿ ದೇವರನ್ನು ಭವ್ಯ ಶೋಭಾಯಾತ್ರೆಯ ಮೂಲಕ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಆನೆಗಳು, ಬಸವ, ಕೇರಳದ ಚೆಂಡೆ ವಾದ್ಯ ಬಳಗ, ಜಾಗಟೆ ಹಾಗೂ ವಿವಿಧ ವಾದ್ಯಮೇಳಗಳ ವೈಭವದ ನಡುವೆ ನಡೆದ ಮೆರವಣಿಗೆಯಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡರು. ಬಳಿಕ ಶ್ರೀ ದೇವರ ದರ್ಶನ ಸೇವೆ ನೆರವೇರಿಸಿ, ಛತ್ರ ಗಣಪತಿ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪಾರುಪತ್ಯೆದಾರ ಲಕ್ಷ್ಮೀನಾರಾಯಣ ರಾವ್, ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ, ಯಕ್ಷಗಾನ ಕಲಾವಿದರು, ಕ್ಷೇತ್ರದ ಸಿಬ್ಬಂದಿ ವರ್ಗ ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.ಮಂಗಳವಾರದಿಂದ ಮೂರು ದಿನಗಳ ಕಾಲ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಸೇವೆಯಾಟಗಳು ನಡೆಯಲಿದ್ದು, ಕಲಾವಿದರು ಸಂಪ್ರದಾಯಬದ್ಧವಾಗಿ ಗೆಜ್ಜೆ ಬಿಚ್ಚುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕ ತಿರುಗಾಟಕ್ಕೆ ಮಂಗಳ ಹಾಡಲಿದ್ದಾರೆ.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಪತ್ತನಾಜೆ ಉತ್ಸವ ಸಮಾಪ್ತಿ: ಧರ್ಮಸ್ಥಳದಲ್ಲಿ ವಿಶೇಷ ಪೂಜೆಗಳು, ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*