ಬಂಟ್ವಾಳ ಗ್ರಾಮಾಂತರ ಪೊಲೀಸರು ನಿಷೇಧಿತ ಎಂಡಿಎಂಎ ಸಾಗಾಟವನ್ನು ಪತ್ತೆಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ. ಸುಮಾರು 42,30,000 ರೂ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಬಂಟ್ವಾಳ ತಾಲೂಕಿನ ಬೋಳಂತೂರು ನಿವಾಸಿಗಳಾದ ಮೊಹಮ್ಮದ್ ನಿಜಾಮುದ್ದೀನ್ (30) ಮತ್ತು ಆತನ ಸಹೋದರ ಮೊಹಮ್ಮದ್ ಶಾಹೀಂ (19) ಎಂಬಿಬ್ಬರನ್ನು ಬಂಧಿಸಿದ್ದಾರೆ.

ಮೇ 2ರಂದು ಸಂಜೆ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಮಂಜುನಾಥ ಟಿ, ಅವರಿಗೆ ಬಂದ ಖಚಿತ ಮಾಹಿತಿಯಂತೆ ಠಾಣಾ ಸಿಬ್ಬಂದಿ ಜೊತೆ ಬಂಟ್ವಾಳ ಮಂಚಿ ಗ್ರಾಮದ ಪಂಜಾಲ ಕ್ರಾಸ್ ಎಂಬಲ್ಲಿಗೆ ತೆರಳಿದ ವೇಳೆ ಈ ಮಾರ್ಗವಾಗಿ ಬರುತ್ತಿದ್ದ ಬೊಲೆರೋ ವಾಹನವನ್ನು ತಪಾಸಣೆಗಾಗಿ ತಡೆದು ನಿಲ್ಲಿಸಿದ್ದಾರೆ. ಈ ಸಂದರ್ಭ, ವಾಹನದಲ್ಲಿ ಇಬ್ಬರು ವ್ಯಕ್ತಿಗಳಿದ್ದು, ಅವರನ್ನು ವಿಚಾರಿಸಿದಾಗ ಬೊಳಂತೂರು ನಿವಾಸಿಗಳಾದ ಮೊಹಮ್ಮದ್ ನಿಜಾಮುದ್ದೀನ್, ಆತನ ಸಹೋದರ ಮೊಹಮದ್ ಶಾಹೀಂ ಎಂದು ತಿಳಿಸಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿ ಅಪರಿಚಿತ ನೈಜೀರಿಯಾದ ವ್ಯಕ್ತಿಯೊಬ್ಬರಿಂದ ಎಂಡಿಎಂಎ ಖರೀದಿಸಿ, ಮಾರಾಟ ಮಾಡಲು ಸಾಗಿಸುತ್ತಿರುವುದು ತಿಳಿದುಬಂದಿದೆ. ಅವರ ಹಾಗೂ ವಾಹನ ತಪಾಸಣೆ ನಡೆಸಿದಾಗ ರೂ 42,30,000 ಮೌಲ್ಯದ 423 ಗ್ರಾಂ ಎಂ.ಡಿ.ಎಂ.ಎ ಪತ್ತೆಯಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಮಾದಕವಸ್ತು ಹಾಗೂ ಅರೋಪಿಗಳ ಬಳಿಯಿದ್ದ 3 ಮೊಬೈಲ್ ಫೋನ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಬೊಲೇರೊ ವಾಹನವನ್ನು ಸ್ವಾಧೀನಪಡಿಸಲಾಗಿದ್ದು, ಸೊತ್ತುಗಳ ಒಟ್ಟು ಮೊತ್ತ ರೂ 46,25,000ಗಳಾಗಿದೆ.. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Be the first to comment on "42 ಲಕ್ಷ ರೂ ಮೌಲ್ಯದ ನಿಷೇಧಿತ ಎಂಡಿಎಂಎ ಸಾಗಾಟ ಪತ್ತೆ, ಇಬ್ಬರ ಸೆರೆ"