
ಬಂಟ್ವಾಳ: ಕೆಲಿಂಜ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವನಿತಾ ಶೆಟ್ಟಿಗಾರ್ (58) ಅವರು ಹೃದಯಾಘಾತದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಗುರುಪುರ ಕೈಕಂಬದ ಕಂದಾವರ ಬೈಲು ನಿವಾಸಿಯಾಗಿದ್ದ ಅವರು ನ.2ರಂದು ರಾತ್ರಿ ಮನೆಯಲ್ಲಿ ತಿಂಡಿ ಸೇವಿಸುತ್ತಿದ್ದ ವೇಳೆ ಕೆಮ್ಮು ಕಾಣಿಸಿಕೊಂಡು, ಬಳಿಕ ವಾಂತಿಯಾಗಿತ್ತು. ತಕ್ಷಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ
ಅವರು ಎಂದಿನಂತೆ ನ.2ರಂದು ಕೆಲಿಂಜ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನೆಗೆ ಮರಳಿದ್ದರು. ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದ ಶಿಕ್ಷಕಿ ರಾತ್ರಿ ದಿಢೀರ್ ಅನಾರೋಗ್ಯಕ್ಕೀಡಾಗಿದ್ದಾರೆ. ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು, ಶಾಲೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು. ನ.7ರಂದು ಶಾಲೆಯಲ್ಲಿ ನಡೆಯಲಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಬಗ್ಗೆ ಚಿಂತನೆ ಹೊಂದಿದ್ದರು. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿಯೊಂದಿಗೆ ಚರ್ಚಿಸಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದರು. ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. 34 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ವನಿತಾ ಶೆಟ್ಟಿಗಾರ್ ಅವರ ನಿಧನಕ್ಕೆ ಸಹೋದ್ಯೋಗಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.



Be the first to comment on "ಕೆಲಿಂಜ ಶಾಲೆಯ ಮುಖ್ಯ ಶಿಕ್ಷಕಿ ವನಿತಾ ಶೆಟ್ಟಿಗಾರ್ ನಿಧನ"