
ಮೊಡಂಕಾಪುವಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಅದ್ಧೂರಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.

ಶಾಲಾ ಸಂಚಾಲಕರಾದ ಅತೀವಂದನೀಯ ಫಾದರ್ ವಿಕ್ಟರ್ ಡಿ’ಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಂಕಾಪುವಿನ ಕಾರ್ಮೆಲ್ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರು ಹಾಗೂ ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀ ರೋಷನ್ ಪಿಂಟೋ ಹಾಗೂ ಪೊಳಲಿಯ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಮುರಳೀಧರ ಆಚಾರ್ಯ ಅವರು ಆಗಮಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ವೇದಿಕೆಯಲ್ಲಿ ಇನ್ಫೆಂಟ್ ಜೀಸಸ್ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ಪ್ರಮೋದ್ ಕ್ರಾಸ್ತಾ, ಶಾಲೆಯ ಮುಖ್ಯ ಶಿಕ್ಷಕರಾದ ವಂದನೀಯ ಫಾದರ್ ಮೆಲ್ವಿನ್ ಲೋಬೋ, ಶಿಕ್ಷಕ-ರಕ್ಷಕ ಸಂಘದ ಕಾರ್ಯದರ್ಶಿ ಶ್ರೀ ಡೇನಿಯಲ್ ಡಿ’ಸಿಲ್ವಾ ಹಾಗೂ ಸಹಾಯಕ ಮುಖ್ಯೋಪಾಧ್ಯಾಯಿನಿ ಗ್ಲಾಡಿಸ್ ಡಿ’ಸೋಜಾ ಅವರು ಉಪಸ್ಥಿತರಿದ್ದರು.

ಕುಮಾರಿ ಸೀಹೋನ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ವರ್ಷಾ ಸ್ವಾಗತ ಕೋರಿದರು ಮತ್ತು ಕುಮಾರಿ ಮಹೀರಾ ವಂದನಾರ್ಪಣೆಗೈದರು.
ವಿದ್ಯಾರ್ಥಿಗಳಿಂದ ಸೃಜನಶೀಲತೆ ಪ್ರದರ್ಶನ: ಕಾರ್ಯಕ್ರಮದಲ್ಲಿ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಾವೇ ಸ್ವತಃ ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸುವುದರೊಂದಿಗೆ ಅತ್ಯುತ್ತಮ ರೀತಿಯಲ್ಲಿ ವಿವರಿಸಿದರು. ಇದರೊಂದಿಗೆ ವಿದ್ಯಾರ್ಥಿಗಳು ತಮ್ಮ ಕೈಯಾರೆ ತಯಾರಿಸಿದ ಆಕರ್ಷಕ ಕರಕುಶಲ ವಸ್ತುಗಳು ಹಾಗೂ ಸುಂದರ ಚಿತ್ರಕಲೆಗಳು ಎಲ್ಲರ ಗಮನ ಸೆಳೆದವು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರದರ್ಶನವನ್ನು ವೀಕ್ಷಿಸಿ, ಕಲಾಕೃತಿಗಳನ್ನು ಹಾಗೂ ವಿಜ್ಞಾನ ಮಾದರಿಗಳನ್ನು ತಯಾರಿಸಿದ ಮಕ್ಕಳ ಪ್ರತಿಭೆಯನ್ನು ಪ್ರಶಂಸಿಸಿದರು.


Be the first to comment on "ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ, ಚಿತ್ರಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ"