ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಬ್ಬರು ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಒಂದರಲ್ಲಿ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ ವ್ಯಕ್ತಿಯೊಬ್ಬರು ಕಳೆದ ವರ್ಷ ಮರಣಹೊಂದಿದ್ದು, ಅವರ ಪತ್ನಿಯಲ್ಲಿ ಮರಣದ ಉಪದಾನದ ಕುರಿತು ಬಂಟ್ವಾಳ ತಾಲೂಕು ಖಜಾನೆಯ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟ ಪ್ರಕರಣದಲ್ಲಿ ನೀಡಿದ ದೂರಿನಂತೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮಧ್ಯಾಹ್ನ ಬಂಟ್ವಾಳ ಖಜಾನೆಗೆ ದಾಳಿ ಮಾಡಿದ್ದು, ಈ ಸಂದರ್ಭ, ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಪ್ರಥಮ ದರ್ಜೆ ಸಹಾಯಕ ಬಸವೇಗೌಡ ಅವರು ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೀಗ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.
ದೂರುದಾರ ಮಹಿಳೆಯ ಪತಿ ಜೂನ್ 2024ರಂದು ಮರಣ ಹೊಂದಿರುತ್ತಾರೆ. ದೂರುದಾರ ಮಹಿಳೆ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಬಳಿ ಅವರ ಗಂಡನ ಮರಣ ಉಪದಾನದ ಬಗ್ಗೆ ಎರಡು ಬಾರಿ ಹೋಗಿ ವಿಚಾರಿಸಿದರೂ ಕೆಲಸ ಆಗಿಲ್ಲ. ಯಾಕೆ ಎಂದು ಕೇಳಿದಾಗ ಉಪದಾನವನ್ನು ಜಮೆ ಮಾಡಿದ್ದಕ್ಕೆ ಪ್ರತಿಫಲವಾಗಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ರೂ 5000 ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೆ ಗೌಡ ಬಿ.ಎನ್. ರೂ 5000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಆಪಾದಿಸಲಾಗಿದ್ದು, ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಹಾಗೂ ಬಂಟ್ವಾಳ ಖಜಾನೆಯ ಎಫ್.ಡಿ.ಎ ಬಸವೇಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಬುಧವಾರ ರೆಡ್ ಹ್ಯಾಂಡ್ ಆಗಿ ಇಬ್ಬರೂ ಸಿಕ್ಕಿಬಿದ್ದರು. ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ರವರು ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
Be the first to comment on "ಬಂಟ್ವಾಳ ತಾಲೂಕು ಖಜಾನೆಯ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಬಲೆಗೆ"