ಜನವರಿ 26ರವರೆಗೆ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ನಡೆಯಲಿರುವ ಕರಾವಳಿ ಕಲೋತ್ಸವ ಕಾರ್ಯಕ್ರಮಕ್ಕೆ ವೈಭವದ ಚಾಲನೆ ನೀಡಲಾಗಿದ್ದು, ಶುಕ್ರವಾರ ರಾತ್ರಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಸಚಿನ್ ಸುವರ್ಣ ಅವರಿಗೆ ದಿ.ಉದಯ ಚೌಟ ಅವರ ನೆನಪಿನ ಅಂಗವಾಗಿ ನೀಡುವ ಉದಯ ಚೌಟ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಬಹುಮುಖ ಪ್ರತಿಭೆ ಆಶಿಕ್ ಎಂ.ರಾವ್ ಮಂಗಳೂರು ಅವರಿಗೆ ಚಿಣ್ಣರ ಸೌರಭ ರಾಜ್ಯಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಜೆ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಿಂದ ಉತ್ಸವ ನಡೆಯುವ ಜಾಗದವರೆಗೆ ಆಕರ್ಷಕ ಜಾನಪದ ದಿಬ್ಬಣ ನಡೆಯಿತು.
ಬಳಿಕ ಕೀರ್ತಿಶೇಷ ರಘು ಸಪಲ್ಯ ಮೊಗರ್ನಾಡು ಕಲಾವೇದಿಕೆ, ಕೀರ್ತಿಶೇಷ ಫಾರೂಕ್ ಗೂಡಿನಬಳಿ ಸಭಾಂಗಣ ಉದ್ಘಾಟನೆ, ಅಮ್ಯೂಸ್ ಮೆಂಟ್ ಪಾರ್ಕ್, ವಸ್ತುಮಳಿಗೆ ಹಾಗೂ ಕರಾವಳಿ ಕಲೋತ್ಸವಕ್ಕೆ ಚಾಲನೆ ನೀಡಲಾಯಿತು.
ಗೋಲ್ಡ್ ನ್ ಪಾರ್ಕ್ ಅಸೋಸಿಯೇಟ್ಸ್ ಪಾಲುದಾರ ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ನಾನಾ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ಎಲ್ಲರಿಗೂ ಪ್ರೇರಣೆ ಕೊಡುವಂಥದ್ದಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಮುಂಚೂಣಿಯಲ್ಲಿರಲು ಇದಕ್ಕೆ ಸಂಬಂಧಿಸಿದ ಗರಿಷ್ಠ ಕಾರ್ಯಕ್ರಮಗಳು ಕಾರಣವಾಗಿದೆ ಎಂದರು.

ಸಚಿನ್ ಸುವರ್ಣ ಅವರಿಗೆ ದಿ.ಉದಯ ಚೌಟ ಅವರ ನೆನಪಿನ ಅಂಗವಾಗಿ ನೀಡುವ ಉದಯ ಚೌಟ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ದಕ್ಷಿಣ ಕನ್ನಡ ಜಿಲ್ಲಾ ಮ್ಯಾನೇಜ್ಮೆಂಟ್ ವರ್ಕಿಂಗ್ ಕಾರ್ಯದರ್ಶಿ ಕೆ.ಪಿ.ಉಮ್ಮರ್ ಮುಸ್ಲಿಯಾರ್ ಪಾಂಡವರಕಲ್ಲು ಮಾತನಾಡಿ, ಧಾರ್ಮಿಕ ಸೌಹಾರ್ದತೆಗೆ ಕರಾವಳಿ ಕಲೋತ್ಸವ ಸಾಕ್ಷಿಯಾಗಿದ್ದು, ಇಲ್ಲಿ ಎಲ್ಲ ಜಾತಿ ಬಾಂಧವರು ಒಟ್ಟಾಗಿರುವುದು ಸಂತೋಷದಾಯಕ ಎಂದರು. ಧರ್ಮಗಳು, ಜಾತಿ, ಮತ ಅನೇಕವಿರಬಹುದು, ಆದರೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಪ್ರಣೀತಾ ಉದಯ ಚೌಟ, ಜ್ಯೋತಿಷಿ ಅನಿಲ್ ಪಂಡಿತ್, ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ, ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ಚಿಣ್ಣರ ಅಧ್ಯಕ್ಷೆ ದಿಯಾ ರಾವ್, ಗೌರವಾಧ್ಯಕ್ಷ ಜಯರಾಮ ರೈ ಉಪಾಧ್ಯಕ್ಷೆ ಪೌಝಿಯಾ, ಗೌರವ ಸಲಹೆಗಾರ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ನಿರ್ದೇಶಕರಾದ ಇಬ್ರಾಹಿಂ ಕೈಲಾರ್, ಶೋಭಾ ಶೆಟ್ಟಿ, ರಾಜಾ ಚೆಂಡ್ತಿಮಾರ್, ಕಾರ್ಯಕಾರಿ ಸಮಿತಿ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಪ್ರೇಮನಾಥ ಶೆಟ್ಟಿ ಅಂತರ, ಶಶಿಧರ ಆಚಾರ್ಯ, ಅಮ್ಯೂಸ್ಮೆಂಟ್ ಪಾರ್ಕ್ ಮುಖ್ಯಸ್ಥ ನಾಗಚಂದ್ರ ಮತ್ತಿತರರು ಉಪಸ್ಥಿತರಿದ್ದರು
ಮೆರವಣಿಗೆಗೆ ಮೊಡಂಕಾಪು ಇನ್ಪೆಂಟ್ ಜೀಸಸ್ ಚರ್ಚ್ ನ ಧರ್ಮಗುರು ರೆ. ಫಾ.ವಲೇರಿಯನ್ ಡಿ.ಸೋಜ, ದ.ಕ.ಜಿ.ಮ್ಯಾನೆಜ್‌ಮೆಂಟ್ ವರ್ಕಿಂಗ್ ಕಾರ್ಯದರ್ಶಿ ಕೆ.ಪಿ.ಉಮ್ಮರ್ ಮುಸ್ಲಿಯಾರ್ ಪಾಂಡವರಕಲ್ಲು, ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಈಶ್ಚರ ಭಟ್ ಮಾದಕಟ್ಟೆ ಜೊತೆಯಾಗಿ ಚಾಲನೆ ನೀಡಿ ಧಾರ್ಮಿಕ ಸೌಹಾರ್ದತೆ ಮೆರೆದರು.
ಪ್ರಧಾನ ಸಂಚಾಲಕ ಮೋಹನ್ ದಾಸ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು ಸ್ವಾಗತಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು.
Be the first to comment on "ಕರಾವಳಿ ಕಲೋತ್ಸವಕ್ಕೆ ವೈಭವದ ಚಾಲನೆ, ಚಿಣ್ಣರ ಸೌರಭ, ಉದಯ ಚೌಟ ಪ್ರಶಸ್ತಿ ಪ್ರದಾನ"