ಸುಳ್ಯ: ವನಜ ರಂಗಮನೆ ಪ್ರಶಸ್ತಿಗೆ ಬಣ್ಣದ ಮಾಂತ್ರಿಕ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಆಯ್ಕೆ

ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್

ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಿಂದ ಪ್ರತಿವರ್ಷ ಕೊಡಮಾಡುವ ರಂಗಕರ್ಮಿ ಡಾ.ಜೀವನ್ ರಾಂ ಸುಳ್ಯರ ಮಾತೃಶ್ರೀ ದಿ| ವನಜಾಕ್ಷಿ ಜಯರಾಮ ಸ್ಮರಣಾರ್ಥ ನೀಡುವ 2024 ನೇ ಸಾಲಿನ ವನಜ ರಂಗಮನೆ ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಬಣ್ಣದ ವೇಷದಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ರವರನ್ನು ಆಯ್ಕೆ ಮಾಡಲಾಗಿದೆ.
ಸದಾಶಿವ ಶೆಟ್ಟಿಗಾರರು ಯಕ್ಷದ್ರೋಣ ಬಣ್ಣದ ಮಾಲಿಂಗರಿಂದ ಬಣ್ಣಗಾರಿಕೆ ಹಾಗೂ ರೆಂಜಾಳ ರಾಮಕೃಷ್ಣ ರಾವ್ ರಿಂದ ಹೆಜ್ಜೆಗಾರಿಕೆಯನ್ನು ಕಲಿತವರು.ತನ್ನ ಹದಿನಾರನೇ ವಯಸ್ಸಿಗೆ ಚೌಕಿಯ ನೇಪಥ್ಯ ಕಲಾವಿದರಾಗಿ ಸೇರಿಕೊಂಡ ಇವರು ಎರಡು ವರ್ಷದ ಬಳಿಕ ಬಣ್ಣದ ವೇಷಧಾರಿಯಾಗಿ ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳಾದ ಕಟೀಲು,ಎಡನೀರು,ಧರ್ಮಸ್ಥಳ ಮೇಳ, ಹೊಸನಗರ ಹಾಗೂ ಹನುಮಗಿರಿ ಮೇಳಗಳಲ್ಲಿ ಒಂದನೇ ವೇಷಧಾರಿಯಾಗಿ ಒಟ್ಟು ನಲವತ್ತೊಂದು ವರ್ಷಗಳ ಸುಧೀರ್ಘ ಸೇವೆ ಗೈದವರು. ಸಾಂಪ್ರದಾಯಿಕ ಚೌಕಟ್ಟನ್ನು ಎಂದೂ ಮೀರದೆ ತನ್ನ ವಿಶಿಷ್ಠ ಬಣ್ಣಗಾರಿಕೆಯಿಂದಲೇ ಪ್ರಸಿದ್ಧರಾದ ಇವರು ದೇಶ ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ ಯಕ್ಷಗಾನದ ಅಗ್ರಮಾನ್ಯ ಬಣ್ಣದ ವೇಷಧಾರಿ ಎನಿಸಿದ್ದಾರೆ.


ರಾವಣ, ಕುಂಭಕರ್ಣ, ಮಹಿರಾವಣ, ಮಹಿಷಾಸುರ, ಕಾಕಾಸುರ, ವರಾಹ, ಸಿಂಹ, ಗಜೇಂದ್ರ ಮುಂತಾದ ಬಣ್ಣದ ವೇಷಗಳು ಅಲ್ಲದೆ ಅಜಮುಖಿ, ಶೂರ್ಪನಖಿ, ಪೂತನಿ, ವೃತ್ರ ಜ್ವಾಲೆ ಮುಂತಾದ ಹೆಣ್ಣು ಬಣ್ಣಗಳಿಗೆ ತನ್ನದೇ ಶೈಲಿಯಲ್ಲಿ ಜೀವ ಭಾವ ತುಂಬಿ ವಿಜೃಂಭಿಸಿ , ಬಣ್ಣದ ಮಾಂತ್ರಿಕರೆಂದೇ ಪ್ರಸಿದ್ಧಿ ಪಡೆದವರು. ನೂರಾರು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾದ ಯಕ್ಷರಂಗದ‍ ಅಪರೂಪದ ಕಲಾವಿದ.
ಪ್ರಶಸ್ತಿಯು ರೇಶ್ಮೆ ಶಾಲು, ಪ್ರಶಸ್ತಿ ಫಲಕ, ಸ್ಮರಣಿಕೆ, ಫಲಪುಷ್ಪ ಹಾಗೂ ರೂ.ಹತ್ತು ಸಾವಿರ ನಗದು ಒಳಗೊಂಡಿರುತ್ತದೆ.
ಅಕ್ಟೋಬರ್ 06 ರಂದು ರಂಗಮನೆಯಲ್ಲಿ ನಡೆಯುವ ಯಕ್ಷ ಸಂಭ್ರಮದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ರಂಗಮನೆಯ ಅಧ್ಯಕ್ಷರಾದ
ಡಾ| ಜೀವನರಾಂ ಸುಳ್ಯ ತಿಳಿಸಿದ್ದಾರೆ.