ಮಹಾತ್ಮಾ ಗಾಂಧೀಜಿ ಹೇಳಿದ ಸುಮಾರು ಹತ್ತು ಸಂದೇಶಗಳನ್ನು ಬರೆದ ಕರಪತ್ರಗಳನ್ನು ಮನೆ ಮನೆಗೆ ಹಂಚಿ ಗಮನ ಸೆಳೆದವರು ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕಾನತ್ತಡ್ಕದ ಶ್ರೀಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು.
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ ಸಾಹಿತಿ, ಶಾಲೆ ಸಲಹೆಗಾರ ಭಾಸ್ಕರ ಅಡ್ವಳ ಅವರ ಮಾರ್ಗದರ್ಶನದಲ್ಲಿ ಜನವರಿ 16ರಂದು ಗಾಂಧೀಜಿ ಸ್ಮರಣೆ ಪಕ್ಷಾಚರಣೆ ಆರಂಭಗೊಂಡಿತು. ಅದರ ಅಂಗವಾಗಿ ಮಕ್ಕಳು ಶಾಲೆಯಲ್ಲಿ ನಡೆದ ನಾನಾ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡದ್ದಲ್ಲದೆ, ಪರಿಸರದ ಮನೆ ಮನೆಗಳಿಗೆ ಗಾಂಧೀಜಿ ಸಂದೇಶವಿರುವ ಕರಪತ್ರಗಳನ್ನು ನೀಡುವುದರ ಮೂಲಕ ಗಾಂಧೀಜಿ ಸಂದೇಶವನ್ನು ಜನರಿಗೆ ಮತ್ತೆ ನೆನಪಿಸಿದರು.
ಈ ಸಂದರ್ಭ ಹದಿನೈದು ದಿನಗಳ ಕಾಲ ನಡೆದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದಷ್ಟೇ ಅಲ್ಲ, ಪುಸ್ತಕಗಳನ್ನು ಓದುವುದು, ಸಂದೇಶಗಳ ಅರ್ಥ, ಮಾಹಿತಿಯನ್ನು ಪಡೆದುಕೊಳ್ಳುವುದು, ಗಾಂಧೀಜಿ ಚಿತ್ರ ಬಿಡಿಸುವುದು, ಆತ್ಮಕಥನದ ಅನುಭವಗಳನ್ನು ಹಂಚಿಕೊಳ್ಳುವುದು, ಚಿತ್ರಪ್ರದರ್ಶನ, ಮೌಲ್ಯಗಳನ್ನು ಅರಿಯುವುದು ಸಹಿತ ಮಹಾತ್ಮಾ ಗಾಂಧೀಜಿ ಜೀವನಪದ್ಧತಿಯನ್ನು ಅರಿತರು. ಗಾಂಧೀ ಸ್ಮರಣೆ ಕುರಿತ ಗೀತೆಗಳನ್ನು ಹಾಡಿದರು. ಇವುಗಳೊಂದಿಗೆ ನೆರೆಕರೆಗೆ ಗಾಂಧೀಜಿ ಸಂದೇಶವನ್ನು ಹೊತ್ತುಕೊಂಡು ಹೋಗುವ ಕಾರ್ಯವನ್ನು ಮಾಡುವುದರ ಮೂಲಕ ಊರವರ ಕುತೂಹಲಕ್ಕೂ ಕಾರಣರಾದರು.
ನಮ್ಮ ಶಾಲೆಗೆ 78 ವರ್ಷಗಳ ಇತಿಹಾಸವಿದ್ದು, ಮಕ್ಕಳ ಸಂಖ್ಯೆ ಕಡಿಮೆಯಾದರೂ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ನೈತಿಕವಾಗಿ ಮಕ್ಕಳಿಗೆ ಮೌಲ್ಯಗಳ ಅರಿವು ಆಗಬೇಕು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹುಸೈನ್ ಸಹಿತ ಹೆತ್ತವರು ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಕ ಸುಂದರ ಭಟ್ ಕಾನ

Be the first to comment on "ಮಹಾತ್ಮಾ ಗಾಂಧೀಜಿ ತತ್ವ ಪ್ರಸಾರ: ಬದಲಾವಣೆ ನಮ್ಮಿಂದಲೇ ಎಂದ ಕಾನತ್ತಡ್ಕದ ಶಾಲಾ ವಿದ್ಯಾರ್ಥಿಗಳು"