www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕರಾವಳಿಯಾದ್ಯಂತ ಶನಿವಾರವಿಡೀ ಭಾರಿ ಮಳೆ. ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ, ತಗ್ಗು ಪ್ರದೇಶಗಳು ಜಲಾವೃತಗೊಂಡು ಜನರು ತೊಂದರೆಗೊಳಗಾದರು.
ಶುಕ್ರವಾರ ರಾತ್ರಿಯಿಂದೀಚೆಗೆ ಬಂಟ್ವಾಳ ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಒಟ್ಟು 9 ಲಕ್ಷ ರೂ ಮೌಲ್ಯದ ಸೊತ್ತುಗಳು ಹಾನಿಯಾಗಿವೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಕೆದಿಲ ಗ್ರಾಮದ ಪೂವಮ್ಮ ಎಂಬವರು ಗೋಡೆ ಕುಸಿದು ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ೮ ಮೀಟರ್ ಎತ್ತರದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು (ಗರಿಷ್ಠ 9 ಮೀ.) ಅಪಾಯದ ಕರೆಗಂಟೆ ಬಾರಿಸುತ್ತಿದೆ. ಶನಿವಾರ ತಾಲೂಕಿನ ಹಲವು ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿತ್ತು.
ಶನಿವಾರ ಸಂಜೆ ವೇಳೆ ಶಂಭೂರು ಎಎಂಆರ್ ಡ್ಯಾಮ್ ನ 30 ಗೇಟುಗಳ ಪೈಕಿ 13 ಗೇಟುಗಳಿಂದ ನೀರು ಹೊರಬಿಡಲಾಯಿತು. ಇದರಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ ೮ ಮೀಟರ್ ನಷ್ಟು ನೀರು ರಾತ್ರಿ ವೇಳೆಗೆ ಸಂಗ್ರಹವಾಗಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿ ಸಹಿತ ತಾಲೂಕಿನ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಭಂಡಾರಿಬೆಟ್ಟು ರಾಜಾಕಾಲುವೆ ಉಕ್ಕಿ ಹರಿದಿದ್ದು ಮತ್ತೆ ದ್ವೀಪಸದೃಶ ವಾತಾವರಣ ನಿರ್ಮಾಣಗೊಂಡಿದೆ. ಪಾಣೆಮಂಗಳೂರಿನ ಆಲಡ್ಕ ಎಂಬಲ್ಲಿ ನೇತ್ರಾವತಿ ನದಿ ಏರಿಕೆಯಿಂದಾಗಿ ಮೈದಾನ ಪಕ್ಕದ ನಾಲ್ಕೈದು ಮನೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪುರಸಭಾ ವ್ಯಾಪ್ತಿಯ ಪಲ್ಲಮಜಲ್ ಎಂಬಲ್ಲಿ ಹಸನಬ್ಬ ಎಂಬವರ ಮನೆಯ ಆವರಣ ಕುಸಿದಿದ್ದು, ಮನೆ ಅಪಾಯದಲ್ಲಿದೆ. ಸುಮಾರು ೫೦ ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಪಲ್ಲಮಜಲ್ ಎಂಬಲ್ಲಿ ಅಬೂಬಕರ್ ಹಾಜಿ ಬ್ಯಾರಿ ಎಂಬವರ ಆವರಣ ಗೋಡೆ ಕುಸಿದು ೩೦ ಸಾವಿರ ರೂ. ನಷ್ಟವಾಗಿದೆ. ಬಿ.ಮೂಡ ಗ್ರಾಮದ ಮದ್ವ ಎಂಬಲ್ಲಿ ಅಬ್ದುಲ್ ಲತೀಫ್ ಎಂಬರ ಮನೆಗೆ ತಡೆಗೋಡೆ ಕುಸಿದು ಹಾನಿಯಾಗಿದ್ದು, ಸುಮಾರು ೫೦ ಸಾವಿರ ನಷ್ಟ ಉಂಟಾಗಿದೆ. ಶಂಭೂರು ಎಎಂಆರ್ ಡ್ಯಾಂಗೆ ಅಕ ಪ್ರಮಾಣದಲ್ಲಿ ನೀರು ಹರಿದ್ದು ಬಂದಿದ್ದು ನೀರು ಬಿಡುಗಡೆ ಮಾಡುವ ಸಲುವಾಗಿ ಯಾರೂ ನದಿ ತೀರಕ್ಕೆ ಬಾರದಂತೆ ಶನಿವಾರ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಿದೆ. ಭಾರಿ ಮಳೆಯಿಂದಾಗಿ ತುಂಬೆ ಡ್ಯಾಂನ ತಡೆಗೋಡೆ ಕುಸಿದು ಬಿದ್ದಿದ್ದು ಡ್ಯಾಂನ ಪಂಪ್‌ಹೌಸ್ ಅಪಾಯಕ್ಕೆ ಸಿಲುಕಿದೆ. ಮುಂಜಾನೆ ೪ ಗಂಟೆಯ ಸುಮಾರಿಗೆ ಕುಸಿತ ಉಂಟಾಗಿ ಡ್ಯಾಂನ ತಡೆಗೋಡೆ ನೀರು ಪಾಲಾಗಿದೆ.
ಪುದು ಬದಿಗುಡ್ಡೆ ಎಂಬಲ್ಲಿ ಸೇಸಮ್ಮ ಎಂಬವರ ಮನೆ ತಡೆಗೋಡೆ ಕುಸಿದಿದ್ದು, ಚಂದ್ರಾವತಿ ಎಂಬವರ ಮನೆಗೆ ಬಿದ್ದು ನಷ್ಟ ಉಂಟಾಗಿದೆ. ಉಳಿ ಊರಿಂಜೆ ಮನೆ ಚೆನ್ನಪ್ಪ ಕುಲಾಲ್ ಅವರ ಮನೆಗೆ ಹಾನಿಯಾಗಿದ್ದರೆ, ನಾವುರ ಎಂಬಲ್ಲಿ ಯಶೋಧರ ಪೂಜಾರಿ ಎಂಬವರ ಮನೆಯೊಂದು ಕುಸಿಯುವ ಹಂತದಲ್ಲಿದೆ. ಅಮ್ಟಾಡಿ ಗ್ರಾಮದ ಉದಲೆಕೋಡಿ ಎಂಬಲ್ಲಿ ಗುಡ್ಡ ಜರಿದು, ತೋಡಿನ ನೀರು ಸ್ಥಗಿತಗೊಂಡಿದ್ದು, ಸಮೀಪದ ಮನೆಯ ಅಂಗಳ ಜಲಾವೃತವಾಗಿದೆ. ತೆಂಕಕಜೆಕಾರು ಗ್ರಾಮದ ಕಜೆಕಾರು ದೇವಸ್ಥಾನ ಸಮೀಪ ಗುಡ್ಡೆ ಕುಸಿದು ಹಾನಿಯಾಗಿದೆ ಎಂದು ಬಂಟ್ವಾಳ ಕಂದಾಯ ಇಲಾಖೆ ಕಚೇರಿ ಮೂಲಗಳು ತಿಳಿಸಿವೆ.
ಮೂಲರಪಟ್ನದಲ್ಲಿ ತೂಗುಸೇತುವೆ ಸಂಪರ್ಕ ರಸ್ತೆಯೂ ಜಲಾವೃತವಾಗಿದ್ದು, ನಡೆಯಲು ಕಷ್ಟವಾಗಿದೆ. ಇಲ್ಲಿಗೆ ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಭೇಟಿ ನೀಡಿ ಅಕಾರಿಗಳಿಗೆ ಸುಗಮ ಸಂಚಾರಕ್ಕೆ ಸೂಚನೆ ನೀಡಿದರು.ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಅವರು ತಹಶೀಲ್ದಾರ್ ಪುರಂದರ ಹೆಗ್ಡೆ ಅವರೊಂದಿಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ತಾಲ್ಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಗ್ರಾಮ ಲೆಕ್ಕಾಕಾರಿ ಜನಾರ್ಧನ ಜೆ, ತಾಲೂಕು ಕಚೇರಿ ಸಿಬಂದಿ ಸದಾಶಿವ ಕೈಕಂಬ, ಸುಂದರ, ಶಿವ ಪ್ರಸಾದ್, ಲೋಕನಾಥ್ ಜತೆಗಿದ್ದರು.
ಪಾಣೆಮಂಗಳೂರು ಸಮೀಪ ಆಲಡ್ಕದಲ್ಲಿ ಜಲಾವೃತಗೊಂಡಿರುವ ಮನೆಗಳಿಂದ ದಿನಬಳಕೆಯ ವಸ್ತುಗಳನ್ನು ಸಾಗಿಸುತ್ತಿರುವ ಸ್ಥಳೀಯರು.
ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿ ಅಮ್ಟಾಡಿಗ್ರಾಮದ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿಅಮ್ಟಾಡಿಗ್ರಾ.ಪಂ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಡು, ಗ್ರಾ.ಪಂ ಸದಸ್ಯರಾದ ಬಬಿತಾಕೋಟ್ಯಾನ್, ಯೋಗೀಶ್, ಮೋಹಿನಿ, ಪಂಚಾಯತ್ ಕಾರ್‍ಯದರ್ಶಿ ಲಕ್ಷ್ಮಿನಾರಾಯಣ, ಗ್ರಾಮಕರಣಿಕಶಶಿ ಕುಮಾರ್ ಮತ್ತು ಸ್ಥಳಿಯರು ಉಪಸ್ಥಿತರಿದ್ದರು.
ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ರಸ್ತೆ ಸಹಿತ ಗದ್ದೆ-ತೋಟಗಳು ಜಲಾವೃತಗೊಂಡು ದ್ವೀಪದಂತಾಗಿರುವ ಪ್ರದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿ ನಾಗರಿಕರು.
ಮಂಚಿ ಗ್ರಾಮದ ಕುಕ್ಕಾಜೆ ಪ್ರಗತಿ ಶಾಲಾ ಬಳಿ (08-07-2018) ರಸ್ತೆಗೆ ಮರ ಉರುಳಿ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮ ಪಂಚಾಯತ್ ಸದಸ್ಯ ಸಮೀವುಲ್ಲಾ, ಗ್ರಾಮಸ್ಥರಾದ ಲತೀಫ್ ಸಾಗರ್, ಹಸೈನಾರ್, ಮೊಹಮ್ಮದ್, ಪ್ರಸಾದ್, ಡಿ.ಕೆ. ಸಾಲಿ ಸೇರಿದಂತೆ ಇತರ ಗ್ರಾಮಸ್ಥರ ಪ್ರಯತ್ನದಿಂದ ಧಾರಾಕಾರ ಮಳೆಯ ಮದ್ಯೆ ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಲಾಯಿತು.
ವರುಣನ ಅಬ್ಬರಕ್ಕೆ ವಿಟ್ಲ ಭಾಗದಲ್ಲಿ ರಸ್ತೆಗಳು ಜಲವೃತಗೊಂಡಿದೆ. ಗುಡ್ಡಗಳು ಕುಸಿದು, ರಸ್ತೆಗೆ ಮರಗಳು ಬಿದ್ದು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಟ್ಲ ಭಾಗದಲ್ಲಿ ಶುಕ್ರವಾರ ಮಧ್ಯೆರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ವಿಟ್ಲ-ಸಾಲೆತ್ತೂರು-ಮಂಗಳೂರು ರಸ್ತೆಯ ಕುಡ್ತಮುಗೇರು ಎಂಬಲ್ಲಿ ಹೊಳೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ವಿಟ್ಲ-ಸಾಲೆತ್ತೂರು-ಮಂಗಳೂರು ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಜಲವೃತಗೊಂಡಿದೆ. ರಸ್ತೆ ಜಲವೃತಗೊಂಡಿದ್ದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಲವು ತಾಸುಗಳ ವರೆಗೆ ಪರದಾಟ ನಡೆಸಿದ್ದಾರೆ. ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಅಬೂಬಕ್ಕರ್ ಹಾಜಿ ಅವರ ತೋಟಕ್ಕಿ ನೀರು ನುಗ್ಗಿ ಬೆಳೆನಾಶಗೊಂಡಿದೆ. ಮೂರುಕಜೆ ಎಂಬಲ್ಲಿ ತೋಟಕ್ಕೆ, ಕಾಪುಮಜಲು ದೇವಸ್ಥಾನ, ಪರ್ತಿಪ್ಪಾಡಿ ಮಸೀದಿ ಆವರಣಕ್ಕೆ ನೀರು ನುಗ್ಗಿದೆ. ಹಲವೆಡೆ ಕೃಷಿಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷಿದರ್ಶಿಗಳು ಮಾಹಿತಿ ನೀಡಿದ್ದಾರೆ.
ಅಮ್ಟಾಡಿ ಗ್ರಾಮದ ಪೆಟ್ರಿಕ್ ಪಿಂಟೋ ಮನೆಯ ಹಿಂಭಾಗದಲ್ಲಿ ಗುಡ್ಡೆ ಕುಸಿದು ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭ ಅಮ್ಟಾಡಿ ಪರಿಸರದ ನಾನಾ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಮಳೆಹಾನಿ ಕುರಿತು ಪರಿಶೀಲಿಸಿದರು.
ಬಿ. ಮೂಡ ಗ್ರಾಮದ ಭಂಡಾರಿಬೆಟ್ಟು ಪರಿಸರ ಮತ್ತೊಮ್ಮೆ ಕೃತಕನೆರೆಯಿಂದ ದ್ವೀಪದಂತಾಗಿದ್ದು, ವಸತಿ ಸಮುಚ್ಚಯ ಹಾಗೂ ಗ್ಯಾರೇಜ್ ಮಾಲಕ ಸಹಿತ ಇಬ್ಬರಿಗೆ ಪುರಸಭೆ ನೋಟಿಸ್ ಜಾರಿಗೊಳಿಸಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ತಿಳಿಸಿದ್ದಾರೆ. ಕಳೆದೆರೆಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆಗೆ ಭಂಡಾರಿಬೆಟ್ಟುವಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಹರಿಯಲು ಸಾಧ್ಯವಾಗದೆ ಕೃತಕನೆರೆ ಉಂಟಾಗಿದೆ. ಅಕ್ಕಪಕ್ಕದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯರು ತೊಂದರೆ ಅನುಭವಿಸುವಂತಾಯಿತು. ಎರಡು ವಾರಗಳ ಹಿಂದೆ ಇದೇ ರೀತಿ ಸುರಿದ ಮಳೆಗೆ ಭಂಡಾರಿಬೆಟ್ಟು ಪರಿಸರ ಜಲಾವೃತಗೊಂಡಿತ್ತು.ಆಗ ಸ್ಥಳಕ್ಲಾಗಮಿಸಿದ ಪುರಸಭೆಯ ಅಕಾರಿಗಳ ದಂಡು ಚರಂಡಿ ನಿರ್ಮಿಸಿ ನೀರು ಹರಿದು ಹೋಗಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರು. ಕಳೆದೆರಡು ದಿನಗಳಿಂದ ಸುರಿದ ಜಡಿಮಳೆಗೆ ಭಂಡಾರಿಬೆಟ್ಟಿನ ಈ ಪ್ರದೇಶ ಮತ್ತೆ ಜಲಾವೃತಗೊಂಡಿದೆ. ಶನಿವಾರವು ಭಂಡಾರಿಬೆಟ್ಟು ಪರಿಸರ ಜಲಾವೃತಗೊಂಡ ಹಿನ್ನಲೆಯಲ್ಲಿ ಮತ್ತೆ ಪುರಸಭಾಕಾರಿಗಳ ದಂಡು ದೌಡಾಯಿಸಿ,ಕಾಲುದಾರಿಯನ್ನು ಕಡಿತಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ,ಸಮುದಾಯ ಅಭಿವೃದ್ದಿ ಅಕಾರಿಮತ್ತಡಿ, ಸದಸ್ಯ ಜಗದೀಶ್ ಕುಂದರ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ತಕ್ಷಣ ತೆರವು ಕಾರ್ಯ ನಡೆಸಿದರು.
Be the first to comment on "ಮತ್ತೆ ಮಳೆ, ಗುಡ್ಡೆ ಜರಿತ, ತಗ್ಗು ಪ್ರದೇಶ ಜಲಾವೃತ, ನೇತ್ರಾವತಿ ಅಪಾಯದ ಮಟ್ಟಕ್ಕೆ"