ಪೋಷಕರಲ್ಲಿ ತಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿತರೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಿಲ್ಲ ಎನ್ನುವ ಮಾನಸಿಕತೆ ತೊಲಗಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳ ಉಳಿವು ಸಾಧ್ಯ ಎಂದು ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.
ಅವರು ಬ್ರಹ್ಮರಕೂಟ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ 87ನೇ ವಾರ್ಷಿಕೋತ್ಸವದಲ್ಲಿ ಈ ಮಾತನ್ನು ಹೇಳಿದರು. ಸರ್ಕಾರಿ ಶಾಲೆಗಳ ಉಳಿವಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ನೀಡಿದೆ. ನಗರಕ್ಕೆ ಹತ್ತಿರವಾಗಿದ್ದರೂ ಇಲ್ಲಿನ ಶಾಲೆಯಲ್ಲಿ ೧೬೦ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯ. ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಈ ಶಾಲೆಯು ಯಶಸ್ವಿಯಾಗಿ ತನ್ನ 100 ವರ್ಷಗಳನ್ನು ಪೂರೈಸಲಿ ಎಂದು ಹಾರೈಸುತ್ತೇನೆ ಎಂದರು.
ಬೆಳಗ್ಗೆ ವಿದ್ಯಾರ್ಥಿಗಳಿಂದ ಶಾಲಾ ಮೈದಾನದಲ್ಲಿ ಕವಾಯತ್ ಪ್ರದರ್ಶನ ನಡೆಯಿತು. ಮಧ್ಯಾಹ್ನ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಶಿಕ್ಷಕರಾದ ಜನಾರ್ದನ್‌ರನ್ನು, ಶಾಲಾ ಶಿಕ್ಷಕಿ ಭಾರತಿ ಹಾಗೂ ಪತ್ರಕರ್ತ ಮೌನೇಶ್ ವಿಶ್ವಕರ್ಮರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಸದಿಂದ ರಸ ಎಂಬಂತೆ ವಿದ್ಯಾರ್ಥಿಗಳು ಪೇಪರ್‌ನಿಂದ ತಯಾರಿಸಿದ ಹೂ, ಗೂಡುದೀಪಗಳಿಂದ ಶಾಲೆಯ ಆವರಣ ಅಲಂಕಾರಗೊಳಿಸಿದ್ದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ತಾ.ಪಂ ಸದಸ್ಯ ಶಿವಪ್ರಸಾದ್ ಕನಪಾಡಿ, ಅಬ್ಬಾಸ್ ಅಲಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾಧವ ವಳವೂರು, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಯೋಗೀಶ್ ದರಿಬಾಗಿಲು, ಶಾಲಾ ಮುಖ್ಯೋಪಾಧ್ಯಾಯಿನಿ ಫ್ಲೋರಿನ್ ರೆಬೆಲ್ಲೋ, ಶಿಕ್ಷಕ ಜನಾರ್ಧನ್ ಮತ್ತಿತರರು ಉಪಸ್ಥಿತರಿದ್ದರು.

Be the first to comment on "ಬ್ರಹ್ಮರಕೂಟ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ 87ನೇ ವಾರ್ಷಿಕೋತ್ಸವ"