ಥ್ರಿಲ್ಲಿಂಗ್ ಪ್ರವಾಸ

  • ಅನಿತಾ ನರೇಶ್ ಮಂಚಿ

www.bantwalnews.com

ಜಾಹೀರಾತು

 

ಜಾಹೀರಾತು

Pic: INTERNET

ಮಹಿಳಾ ಸಮಾಜದ ವತಿಯಿಂದ ಈ ವರ್ಷ ಏರ್ಪಾಡಾದ ಪ್ರವಾಸವಿದು. ದಾರಿಯಲ್ಲಿ ಬಸ್ ಹಾಳಾದ ಕಾರಣ ಮದ್ಯಾಹ್ನವೇ ಶೃಂಗೇರಿ ತಲುಪಬೇಕಿದ್ದ ನಮ್ಮ ಬಸ್ ಸಂಜೆ ತಲುಪಿತ್ತು.ದೇವಸ್ಥಾನ ನೋಡಿ ಹೊರಗೆ ಬಂದಾಗ  ಊಟದ ಹೊತ್ತು ಮೀರಿತ್ತು.ಹೋಟೆಲ್ಲುಗಳಲ್ಲಿ ಸಿಕ್ಕಿದ ದೋಸೆ ಚಪಾತಿಗಳಲ್ಲೇ ಹೊಟ್ಟೆ ತುಂಬಿಸಿಕೊಂಡೆವು. ಬಸ್ಸಿನ ಡ್ರೈವರ್ ಕಂಡೆಕ್ಟರ್ ಮತ್ತು ಇನ್ನೊಬ್ಬ ಹೆಲ್ಪರ್ ಬಿಟ್ಟರೆ ಬಸ್ಸಿನಲ್ಲಿದ್ದುದೆಲ್ಲಾ ಮಹಿಳಾ ಮಣಿಗಳೇ.ಮನೆಯಲ್ಲಿ ಬಿಟ್ಟು ಬರಲು ಅನುಕೂಲವಿಲ್ಲದವರ ಒಂದೆರಡು ಪುಟಾಣಿಗಳು ಆಗಾಗ ನಗುತ್ತಾ ಮತ್ತೊಂದಷ್ಟು ಹೊತ್ತು ಅಳುತ್ತಾ ನಮ್ಮ ಗದ್ದಲಕ್ಕೆ ದ್ವನಿಗೂಡಿಸುತ್ತಿದ್ದವು.

ಈಗಾಗಲೇ ತಡವಾದ ಕಾರಣ  ಹೋಟೆಲಿನಿಂದ ಹೊರ ಬರುವಾಗಲೇ ನಮ್ಮ ಚರ್ಚೆ ನಡೆದಿತ್ತು. ಕೆಲವು ಜನರು ವಾಪಾಸು ಮನೆಗೆ ಹೋಗೋಣ ಎಂದರೆ ಮತ್ತೆ ಕೆಲವರದು ನಿಗದಿಯಾದ ಕಾರ್ಯಕ್ರಮದಂತೆ  ಹೊರನಾಡಿನ ದೇವಿ ದರ್ಶನ ಮಾಡಿಯೇ ಹಿಂದಿರುಗೋಣ ಎಂದು ಒತ್ತಾಯಿಸುತ್ತಿದ್ದರು. ಒಮ್ಮತಕ್ಕೆ ಬರುವುದು ಕಷ್ಟವಾದ್ದರಿಂದ ಡ್ರೈವರನ್ನೇ ಏನು ಮಾಡೋಣ ಎಂದು  ಕೇಳಿದೆವು. ನಮ್ಮ ಬಸ್ಸಿಂದಾಗಿಯೇ ನಿಮ್ಮ ಪ್ರೋಗ್ರಾಮ್ ತಡವಾಗಿದ್ದು. ನೀವೇನು ಹೆದರಬೇಡಿ. ಜಾಗ್ರತೆಯಾಗಿ ಹೊರನಾಡಿನ ದೇವಿ ದರ್ಶನ ಮಾಡಿಯೇ ಹಿಂದಿರುಗೋಣ ಎಂದು ನಮ್ಮನ್ನು ಹುರಿದುಂಬಿಸಿದ.

ಬಸ್ ಹೊರಟ ಸ್ವಲ್ಪ ಹೊತ್ತಿನಲ್ಲಿ ನಾವು ಪುನಃ ಪ್ರವಾಸದ ಮೂಡಿಗೆ ಬಂದೆವು. ಅಂತ್ಯಾಕ್ಷರಿ  ಹಾಡು ಜೋಕ್ಸ್ ಎಂದೆಲ್ಲ ನಮ್ಮ ಲೋಕಕ್ಕೆ ಮರಳಿದೆವು. ತಣ್ಣಗಿನ ಗಾಳಿ ಚಳಿ ಹಿಡಿಸುತ್ತಿತ್ತು. ನಮ್ಮ ಗುಂಪಿನ ಆಲ್ ರೌಂಡರ್ ವಾಸಂತಿ ಭರತನಾಟ್ಯವನ್ನು ಮಾಡಲು ಹೋಗಿ ಅದು ಅಂಕುಡೊಂಕಿನ ರಸ್ತೆಯಲ್ಲಿ ಅತ್ತಿತ್ತ ವಾಲುತ್ತಾ ನಗೆ ತರಿಸುತ್ತಿದ್ದಳು. ಉಳಿದವರು ಅದಕ್ಕೆ ಹೋ ಎಂದು  ಬೊಬ್ಬೆ ಹೊಡೆದು ಇನ್ನಷ್ಟು ನಗುತ್ತಿದ್ದರು. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅನ್ನುವಂತೆ ಕಂಡೆಕ್ಟರ್ ಮತ್ತು ಹೆಲ್ಪರ್ ಹಿಂದಿನ ಸೀಟಿನಲ್ಲಿ ಗೊರಕೆಗಳನ್ನೆಬ್ಬಿಸುತ್ತಿದ್ದರು.

ಜಾಹೀರಾತು

ಗಕ್ಕನೆ ನಡು ರಸ್ತೆಯಲ್ಲಿ ನಿಂತಿತು ಬಸ್ಸು. ನಾವೆಲ್ಲಾ ಹೋಯ್ ಏನಾಯ್ತು.. ಪುನಃ ಹಾಳಾಯ್ತಾ ಅಂತ ಕೂತಲ್ಲಿಂದ ಎದ್ದು ಕಿರುಚಿದೆವು. ಡ್ರೈವರ್ ನಮ್ಮ ಕಡೆಗೆ ತಿರುಗಿ  ಶ್ ಎಂದ.  ಗಾಡಿ ಬ್ರೇಕ್ ಹಾಕುವಾಗ ತಲೆಯನ್ನು ಎದುರಿನ ಸೀಟಿಗೆ ಕುಟ್ಟಿಸಿಕೊಂಡು ಎದ್ದಿದ್ದ ಕಂಡೆಕ್ಟರ್ ಮತ್ತು ಹೆಲ್ಪರ್ ಡ್ರೈವರ್ ಪಕ್ಕಕ್ಕೆ ಎದ್ದು ಬಂದರು. ಕಾಡಿನ ಮಾರ್ಗ ಆದ ಕಾರಣ ಯಾವುದಾದರು ಕಾಡು ಪ್ರಾಣಿ ಅಡ್ಡ ಬಂದಿದೆಯೇನೋ ಎಂದು ಕಿಟಕಿಯಿಂದ ಹೊರಗಿಣುಕಿ ನೋಡಿದೆ.

ನಾಲ್ಕೈದು ದೃಢಕಾಯ ತರುಣರು ರಸ್ತೆ ಮದ್ಯದಲ್ಲಿ ಕಲ್ಲುಗಳನ್ನು ಅಡ್ಡ ಇರಿಸಿ ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದು ಕಾಲಯಮರಂತೆ ನಿಂತಿದ್ದಾರೆ.  ಆ ಚಳಿಗೂ ಮೈಯಲ್ಲೆಲ್ಲಾ ಬೆವರ ಸೆಲೆ ಒಡೆಯಿತು. ಉಸಿರು ಬಿಗಿ ಹಿಡಿದು ಮೌನವಾದೆವು. ಅವರಲ್ಲಿಬ್ಬರು ಡ್ರೈವರ್ ಸೀಟಿನ ಹತ್ತಿರ ಬಂದು ಬಾಗಿಲು ತೆಗೀರಿ ಎಂದು ಆವಾಜ್ ಹಾಕಿದರು.ಅಸಹಾಯಕರಾಗಿ ಕಂಡೆಕ್ಟರ್ ಬಾಗಿಲು ತೆರೆದ. ದಡಬಡನೆ ಒಳನುಗ್ಗಿದರು.

ನಾವು ನಮ್ಮ ನಮ್ಮ ಸೀಟಿನ ಸ್ಥಳಗಳಲ್ಲೇ ಮುದುಡಿ ಕುಳಿತೆವು. ಆತಂಕದಿಂದ ನಮ್ಮೆದೆ ಡವಡವನೆ ಹೊಡೆದುಕೊಳ್ಳುತ್ತಿತ್ತು. ಗಂಟಲೊಣಗಿದಂತಾಗಿತ್ತು. ನೀರು ಕುಡಿಯುವ ನೆವದಲ್ಲಿ ಮೆಲ್ಲನೆ ಮೊಬೈಲ್ ಎತ್ತಿಕೊಂಡೆ. ಅವರ ಹದ್ದಿನ ಕಣ್ಣು ನಮ್ಮೆಲ್ಲರೆಡೆಗೂ ಹರಿದಾಡುತ್ತಿತ್ತು. ನನ್ನ ಮೊಬೈಲ್ ಒತ್ತಿದಾಗ ಬಂದ ಸಣ್ಣ ಶಬ್ಧವೂ ಅವರಲ್ಲೊಬ್ಬನರಿವಿಗೆ ಬಂತು. ಪಕ್ಕನೆ ನನ್ನ ಕೈಯಿಂದ ಮೊಬೈಲ್ ಕಿತ್ತುಕೊಂಡ. ಉಳಿದವರ ಕಡೆ ನೋಡುತ್ತಾ  ಎಲ್ಲರೂ ನಿಮ್ಮ ನಿಮ್ಮ ಮೊಬೈಲ್ ಇಲ್ಲಿ ಕೊಡಿ. ಯಾವುದೇ ರೀತಿಯ ಜಾಣತನದ ಪ್ರದರ್ಶನ ಬೇಡ. ಸುಮ್ಮನಿದ್ದರೆ ನಿಮಗೇ ಒಳ್ಳೇದು ಎಂದು ಕೆಂಗಣ್ಣು ಬೀರಿದ. ಎಲ್ಲರೂ ತಮ್ಮ ಮೊಬೈಲನ್ನು ಅವರ ಕೈಗಿರಿಸಿದರು.

ಜಾಹೀರಾತು

ಉಸಿರೆತ್ತಿದರೆ ಏನಾಗುತ್ತದೋ ಎಂಬ ದಿಗಿಲು. ಅತಿ ವಿರಳ ವಾಹನ ಸಂಚಾರವಿರುವ ರಸ್ತೆಯಾದ ಕಾರಣ ಬೇರೆ ವಾಹನದವರಿಗೆ ಗೊತ್ತಾಗುವಂತೆಯೂ ಇಲ್ಲ. ಜೊತೆಗೆ ಅವರ ಕೈಯಲ್ಲಿಮಾರಕಾಯುಧಗಳಾಗಿದ್ದ ಹಾಕಿ ಸ್ಟಿಕ್ ಯಾವಾಗ ನಮ್ಮ ತಲೆ ಅಪ್ಪಳಿಸುತ್ತದೋ ಎಂಬ ಭಯ ನಮಗೆ. ನಾನು ಸ್ವಲ್ಪ ಹೊತ್ತು ಅವರ ಚಲನವಲನವನ್ನೇ ನೋಡುತ್ತಾ ಕುಳಿತೆ. ಮತ್ತೊಮ್ಮೆ ಹುಚ್ಚು ಧೈರ್ಯ ಎದ್ದು ಬಂತು. ನನ್ನ ಬಳಿ ಎರಡು ಮೊಬೈಲ್ ಇತ್ತು. ಇನ್ನೊಂದನ್ನು ಅವರಿಗೆ ಕಾಣದಂತೆ ತೆಗೆದು ನನ್ನ ಕೈಯಲ್ಲಿ ಹಿಡಿದು ಚಳಿಗೆಂದು ಹೊದ್ದಿದ್ದ ಶಾಲಿನೊಳಗೆ ಕೈಯಿಟ್ಟುಕೊಂಡೆ. ಅತಿ ಪರಿಚಿತವಾದ ಮತ್ತು ಅದರ ಬಟನ್ ಗಳೆಲ್ಲಾ ನನಗೆ ಕಣ್ಣು ಮುಚ್ಚಿಯೂ ಒತ್ತಬಲ್ಲಷ್ಟು ಗೊತ್ತಿದ್ದ ಕಾರಣ ಅದನ್ನು ಒಂದೇ ಕೈಯಲ್ಲಿ ಹಿಡಿದಲ್ಲಿಂದಲೇ ಸೈಲೆಂಟ್ ಮೋಡ್ ಗೆ ಬದಲಾಯಿಸಿದೆ. ಮತ್ತೆ ಅಂದಾಜಿನ ಮೇಲೆ ಅಕ್ಷರಗಳನ್ನು ನೆನಪಿಸಿಕೊಳ್ಳುತ್ತಾ ಒಂದು ಮೆಸೇಜು ಬರೆದೆ. ನಿಧಾನಕ್ಕೆ ನನ್ನ ಮೊಬೈಲಿನ ಕಾಂಟಾಕ್ಟ್ ನಂಬರುಗಳನ್ನು ಆಲೋಚಿಸುತ್ತಾ ಅವರ ಲೀಸ್ಟನ್ನು ಸಿದ್ಧಪಡಿಸಿ ಸೆಂಡ್ ಬಟನ್ ಒತ್ತಿದೆ. ಯಾರಿಗಾದರೂ ಮೆಸೇಜ್ ಸಿಕ್ಕಿ ಏನಾದರೂ ಮಾಡಿಯಾರೆಂಬ ನಂಬಿಕೆ ನನ್ನದು. ಓರೆಗಣ್ಣಿಂದ ಪಕ್ಕನೆ ಒಮ್ಮೆ ಮೊಬೈಲಿನ ಪರದೆ ನೋಡಿದೆ. ಸೆಂಡಿಗ್ ಫೈಲ್ಡ್ ಎಂದು ಕಾಣಿಸಿತು. ಛಲ ಬಿಡದೆ ಮತ್ತೆ ಮತ್ತೆ ಅದನ್ನು ಒತ್ತುತ್ತಾ ಇದ್ದೆ. ಆದರೆ ಈ ಕಾಡು ಹಾದಿಯಲ್ಲಿ ನೆಟ್ ವರ್ಕ್ ಬೇಕಲ್ಲ.

ದೂರದಲ್ಲಿ ಪೇಟೆಯ ಟ್ಯೂಬ್ ಲೈಟ್ಗಳು ಉರಿದಂತೆ ಕಾಣಿಸಿತು. ಯಾವುದೋ ಪೇಟೆ ಹತ್ತಿರ ಬರುತ್ತಿದೆ. ಈಗೇನಾದರೂ ಉಪಾಯ ಮಾಡಿ ಪೇಟೆಯಲ್ಲಿ ಯಾರಿಗಾದರೂ ವಿಷಯ ತಿಳಿಸುವ ಸಂದರ್ಭ ಒದಗೀತೋ ಎಂಬಂತೆ ಆಸೆಯಿಂದ ಅಲ್ಲಿ ತಲುಪುವುದನ್ನು ಕಾಯುತ್ತಿದ್ದೆ. ಯಾರಿಂದಲಾದರೂ ಸಹಾಯ ಸಿಗಬಹುದೇನೋ ಎಂಬ ಆಸೆ ನನಗೆ. ಆದರೆ ಹುಡುಗರಲ್ಲೊಬ್ಬ ಡ್ರೈವರ್ ಹತ್ತಿರ ಹೋಗಿ ಅಲ್ಲೇ ಪಕ್ಕದಲ್ಲಿದ್ದ ಮಣ್ಣಿನ ರಸ್ತೆಗೆ ತಿರುಗುವಂತೆ ಆದೇಶಿಸಿದ.

ನಮ್ಮ ಬಸ್ ಈಗ ಯಾವುದೋ ಅಪರಿಚಿತ ಮಣ್ಣಿನ ರಸ್ತೆಯಲ್ಲಿ ವಾಲಾಡುತ್ತಾ ಸಾಗುತ್ತಿತ್ತು. ಮೂರು ನಾಲ್ಕು ಕಿಲೋಮೀಟರ್ ಸಾಗಿರಬಹುದು. ದೂರದಲ್ಲಿ ಜಗಮಗಿಸುವ ಬೆಳಕು ಕಾಣಿಸತೊಡಗಿತು. ಹತ್ತಿರವಾಗುತ್ತಿದ್ದಂತೇ ಅಲ್ಲಿ ಸೇರಿದ ನೂರಾರು ಜನರು ಕಾಣಿಸಿದರು. ನಮ್ಮೆಲ್ಲರ ಮುಖಗಳೂ ಹೆದರಿಕೆಯಿಂದ ಕಪ್ಪೇರತೊಡಗಿತು. ಡ್ರೈವರ್ ಹತ್ತಿರ ನಿಂತಿದ್ದವನೀಗ ಬಸ್ ನಿಲ್ಲಿಸಲು ಸನ್ನೆ ಮಾಡಿದ.

ಜಾಹೀರಾತು

ಹಾಕಿ ಸ್ಟಿಕ್ ಹಿಡಿದಿದ್ದ ಯುವಕರೆಲ್ಲಾ ಬಸ್ಸಿನ ಎದುರಿನ ಭಾಗಕ್ಕೆ ಬಂದರು. ನಮ್ಮನ್ನೆಲ್ಲಾ ಇಳಿಯುವಂತೆ ಹೇಳಿದರು. ನಾವೆಲ್ಲಾ ಹೆದರುತ್ತಾ ನಡುಗುತ್ತಾ ಇಳಿದೆವು. ಅವರಲ್ಲೊಬ್ಬ ನಮ್ಮ ಕಡೆ ಕೈ ಜೋಡಿಸಿ

ನಮ್ಮನ್ನು ದಯವಿಟ್ಟು ಕ್ಷಮಿಸಿ. ಇವತ್ತಿಲ್ಲಿ ಹೊನಲು ಬೆಳಕಿನ ಹಾಕಿ ಪಂದ್ಯಾಟ. ನಾವಿಲ್ಲಿಗೆ ಬರುವ ಕೊನೆಯ ಬಸ್ ತಪ್ಪಿ ಹೋಯಿತು. ಮತ್ತೆ ಸಿಕ್ಕ ಹಲವು ವೆಹಿಕಲ್ ಗಳಿಗೆ ಸಹಾಯ ಮಾಡಿ ಎಂದು ಬೇಡಿಕೊಂಡರೂ ಯಾರೂ ನಮ್ಮನ್ನು ಹತ್ತಿಸಲಿಲ್ಲ. ಕಳೆದ ವರ್ಷ ನಾವೇ ಗೆದ್ದು ಚಾಂಪಿಯನ್ ಗಳಾಗಿದ್ದೆವು. ಈ ಸಲವೂ ಗೆಲ್ಲುವ ಭರವಸೆ ನಮಗಿದೆ. ಅದಕ್ಕಾಗಿ ಅನಿವಾರ್ಯವಾಗಿ ನಿಮ್ಮನ್ನು ತೊಂದರೆಗೀಡುಮಾಡಿದೆವು. ಆದರೆ ನೀವೀಗ ನಮ್ಮ ಅತಿಥಿಗಳು ನಮ್ಮ ಉಪಚಾರ ಸ್ವೀಕರಿಸಿಯೇ ಮುಂದೆ ಹೋಗಬೇಕು. ನಿಮಗಾದ ಅನಾನುಕೂಲಕ್ಕೆ ಮತ್ತೊಮ್ಮೆ ಕ್ಷಮೆ ಬೇಡುತ್ತೇವೆ.. ಎಂದು ನಮ್ಮ ಮೊಬೈಲ್ಗಳನ್ನು ಮರಳಿಸಿದರು.

ಎಲ್ಲರೂ ನೆಮ್ಮದಿಯ ನಿಟ್ಟುಸಿರುಬಿಟ್ಟು ಒಬ್ಬರನ್ನೊಬ್ಬರು ನೋಡಿ ನಗುವ ಪ್ರಯತ್ನ ಮಾಡುತ್ತಿದ್ದರೆ ನನ್ನ ಮೊಬೈಲ್ಲಿನಲ್ಲಿ ಪಕ್ಕನೆ ಬೆಳಕು ಮೂಡಿ ’ಮೆಸೇಜ್ ಸೆಂಟ್’ ಎಂಬ ಅಕ್ಷರಗಳು ಮೂಡಿದವು.

ಜಾಹೀರಾತು

******

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Anitha Naresh Manchi
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿಯ ರಾಮ ನರೇಶ್ ಮಂಚಿ ಅವರ ಪತ್ನಿ ಅನಿತಾ ನರೇಶ್ ಮಂಚಿ, ಕನ್ನಡದ ಪ್ರಸಿದ್ಧ ಲೇಖಕಿ. ಕೊಡೆ ಕೊಡೆ ನನ್ನಕೊಡೆ ಕಾಲೇಜು ಪಠ್ಯವಾಗಿದೆ. ಎರಡು ಲಘು ಬರಹ ಸಂಕಲನ, ಮೂರು ಕಥಾಸಂಕಲನ ಬಿಡುಗಡೆಗೊಂಡಿವೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಕಥೆ, ಲೇಖನಗಳು ಪ್ರಕಟಗೊಂಡಿವೆ. ಅವರ ಕಥೆಗಳು ಬೇರೆ ಭಾಷೆಗೂ ಅನುವಾದಗೊಂಡಿವೆ. ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಅನಿತಾ ಅವರಿಗೆ ಮಂಗಳೂರಿನ ಕನ್ನಡ ರತ್ನ ಪ್ರಶಸ್ತಿ. ಕೊಡಗಿನ ಗೌರಮ್ಮ ಪ್ರಶಸ್ತಿ, ಅಕ್ಷರ ಶ್ರೀ ಪ್ರಶಸ್ತಿ ದೊರಕಿವೆ.

Be the first to comment on "ಥ್ರಿಲ್ಲಿಂಗ್ ಪ್ರವಾಸ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*