ಬಂಟ್ವಾಳ ಕಸ ವಿಲೇವಾರಿ ಸಮಸ್ಯೆಗೆ ದೊರಕಲಿದೆಯಾ ಮುಕ್ತಿ?

  • ಹರೀಶ ಮಾಂಬಾಡಿ

www.bantwalnews.com

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕಳೆದೊಂದು ದಶಕದಿಂದ ಪೆಡಂಭೂತವಾಗಿ ಕಾಡುತ್ತಿರುವ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಇನ್ನಾದರೂ ದೊರಕಬಹುದೇ ಎಂದು ಜನ ಕಾಯುತ್ತಿದ್ದಾರೆ.

ಪುರಸಭೆ ವತಿಯಿಂದ ಕಂಚಿನಡ್ಕಪದವಿನಲ್ಲಿ ಯಾಂತ್ರೀಕೃತ ವ್ಯವಸ್ಥೆ ಮೂಲಕ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆದಿದೆ. ಇದರಿಂದ ಖರ್ಚೂ ಕಡಿಮೆ, ಜನರಿಗೆ ಸಮಸ್ಯೆಯೂ ಇಲ್ಲ. ಪರಿಸರ ಮಾಲಿನ್ಯವೂ ಇರುವುದಿಲ್ಲ ಎನ್ನುತ್ತಾರೆ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ.

ಹೀಗಾದರೆ, ಬಂಟ್ವಾಳ ಕಸದ ಸಮಸ್ಯೆಗೆ ತಕ್ಕಮಟ್ಟಿನ ಪರಿಹಾರ ದೊರಕಬಹುದೇ? ಕಾದು ನೋಡೋಣ.

ಐಕ್ಯತೆಗಾಗಿ ಓಟದಲ್ಲಿ ಸ್ವಚ್ಛತಾ ಸಂದೇಶ:

ಬಂಟ್ವಾಳ ಪುರಸಭೆ ಸ್ವಚ್ಛತಾ ಅರಿವು ಮೂಡಿಸಲು ನಾನಾ ಕಾರ್ಯಕ್ರಮಗಳನ್ನು ಆಗಾಗ್ಗೆ ಹಮ್ಮಿಕೊಳ್ಳುತ್ತಲೇ ಇರುತ್ತದೆ. ಮಂಗಳವಾರ ಬೆಳಗ್ಗೆ 7.30ಕ್ಕೆ ಪಾಣೆಮಂಗಳೂರಿನಿಂದ ಮೆಲ್ಕಾರ್ ವರೆಗೆ ಐಕ್ಯತೆಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ ಪ್ರಯುಕ್ತ ಐಕ್ಯತೆಗಾಗಿ ಓಟ ನಡೆಯುತ್ತದೆ. ಮೇಲ್ಕಾರ್ ನಲ್ಲಿ ಐಕ್ಯತೆ ಮತ್ತು ಸ್ವಚ್ಛತಾ ಸಂದೇಶ ಸಾರುವ ಬೀದಿ ನಾಟಕ ಪ್ರಸ್ತುತಪಡಿಸಲಾಗುತ್ತದೆ. ಈ ಮೂಲಕ ಕೇವಲ ರಾಷ್ಟ್ರೀಯ ಐಕ್ಯತೆಯನ್ನಷ್ಟೇ ಅಲ್ಲ, ಸ್ವಚ್ಛತಾ ಸಂದೇಶವನ್ನೂ ಸಾರುವ ಪ್ರಯತ್ನವನ್ನು ಪುರಸಭೆ ಮಾಡಲಿದೆ. ಇದಕ್ಕೆ ಲಯನ್ಸ್ ಸಹಿತ ಹಲವು ಸಂಘ, ಸಂಸ್ಥೆಗಳು ಸಹಕಾರ ನೀಡಲಿವೆ.

ಇಷ್ಟೆಲ್ಲ ನಡೆದರೂ ಪುರಜನರಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಬಿದ್ದಿಲ್ಲ. ಸಿಕ್ಕಸಿಕ್ಕಲ್ಲಿ ಕಸ ಎಸೆಯುವುದರ ವಿರುದ್ಧ ಜಾಗೃತಿ ಬೇಕು ಎನ್ನುತ್ತಾರೆ ಕಸ ವಿಲೇವಾರಿ ವಿರುದ್ಧ ಅಭಿಯಾನಕ್ಕೆ ಸಹಯೋಗ ನೀಡುತ್ತಿರುವ ಲಯನ್ಸ್ ಅಧ್ಯಕ್ಷ ಜಗದೀಶ ಎಡಪಡಿತ್ತಾಯ. ನಾವು ಪುರಸಭೆಯ ಸ್ವಚ್ಛ ಬಂಟ್ವಾಳ ಅಭಿಯಾನಕ್ಕೆ ಕೈಜೋಡಿಸಿದ್ದೇವೆ. ಎಲ್ಲ ಅಂಗಡಿ, ಮುಂಗಟ್ಟುಗಳನ್ನೂ ಸಂಪರ್ಕಿಸಿ ಕರಪತ್ರವನ್ನು ವಿತರಿಸಿ, ಪುರಸಭೆ ವಾಹನಕ್ಕೇ ಕಸವನ್ನು ಒದಗಿಸಬೇಕು ಎಂದು ವಿನಂತಿ ಮಾಡುತ್ತಿದ್ದೇವೆ. ಪ್ರತಿ ಗುರುವಾರ ಸ್ವಚ್ಛತಾ ಆಂದೋಲನ ಕೈಗೊಳ್ಳಲಾಗುತ್ತಿದೆ. ಪ್ರತಿ ತಿಂಗಳೂ ಟೀಮ್ ವಿವೇಕ್ ನಿಂದ ಅಭಿಯಾನ ನಡೆಯುತ್ತದೆ. ಜನರಲ್ಲೂ ಜಾಗೃತಿ ಮೂಡುವುದು ಅವಶ್ಯ ಎನ್ನುತ್ತಾರೆ ಅವರು.

ಕಟ್ಟುನಿಟ್ಟಿನ ಕ್ರಮ ಅಗತ್ಯ:

ತಿಂಗಳ ಹಿಂದೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್ ಎಲ್ ರೊಡ್ರಿಗಸ್ ನೇತೃತ್ವದಲ್ಲಿ  ಅಧಿಕಾರಿಗಳು ಪುರಸಭಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತಾಜ್ಯ ರಾಶಿ ಹಾಕಿರುವ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅಕಾರಿಗಳು ಭೇಟಿ ನೀಡಿದ ಬಳಿಕ ಕಸ ಹಾಕುವವರ ಮೇಲೆ ನಿಗಾ ಇಡಲು ಸಿಸಿ ಕ್ಯಾಮರ ಅಳವಡಿಸಬೇಕು ಎನ್ನುವ ಸೂಚನೆ ನೀಡಲಾಗಿತ್ತು. ಕಸ ವಿಲೇವಾರಿಗೆ ವೈಜ್ಞಾನಿಕ ವ್ಯವಸ್ಥೆ ಅಳವಡಿಸುವ ಕುರಿತು ಪುರಸಭೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸಲಹೆ ನೀಡಿತ್ತು.

ಆಯಕಟ್ಟಿನ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಸ ಎಸೆಯುವುದರ ವಿರುದ್ಧ ಪೆನಾಲ್ಟಿ ಹಾಕುವ ವಿಚಾರಕ್ಕೆ ಸಂಬಂಧಿಸಿ ದರವನ್ನು ಜಾಸ್ತಿ ಮಾಡುವ ಕುರಿತು ಸಭೆಯಲ್ಲಿ ವಿಚಾರ ಮಂಡಿಸಲಾಗುವುದು. ಪುರಸಭೆಯ ವಾಹನಗಳಿಗೇ ಕಸವನ್ನು ಒದಗಿಸಬೇಕೇ ವಿನ: ಹೊರಗೆ ಅಲ್ಲ. ಹಾಗೆಯೇ ವಾಹನಕ್ಕೆ ಕೊಟ್ಟ ಕಸವೂ ಸಮರ್ಪಕ ವಿಲೇವಾರಿಯಾಗುವ ಯಾಂತ್ರೀಕೃತ ವ್ಯವಸ್ಥೆ ಜಾರಿಯಾದರೆ ಪರಿಹಾರ ಸಾಧ್ಯ ಎನ್ನುತ್ತಾರೆ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ.

 

ಬಂಟ್ವಾಳದ ಕಸದ ಸಮಸ್ಯೆಗೆ ಏನು ಪರಿಹಾರ, ಸಾರ್ವಜನಿಕರ ಸಹಭಾಗಿತ್ವ ಹಾಗೂ ಆಡಳಿತದ ಕಾರ್ಯದಕ್ಷತೆ ಹೇಗಿರಬೇಕು? ಬರೆದು ಈ ಮೈಲ್ ಮಾಡಿರಿ

bantwalnews@gmail.com

 

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 26 years, He Started digital Media www.bantwalnews.com in 2016.

Be the first to comment on "ಬಂಟ್ವಾಳ ಕಸ ವಿಲೇವಾರಿ ಸಮಸ್ಯೆಗೆ ದೊರಕಲಿದೆಯಾ ಮುಕ್ತಿ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*