ಪುಟ್ಟನಿಗೆ ಯುದ್ದ ಗೆದ್ದ ಸಂತಸ…!

  • ಮೌನೇಶ ವಿಶ್ವಕರ್ಮ

www.bantwalnews.com

ಜಾಹೀರಾತು

ಶಾಲೆಯಿಂದ ತಡವಾಗಿ ಮನೆಗೆ ಬಂದ ಮಗನ ಯಾಕೆ ಇವತ್ತು ಬರುವಾಗ ಲೇಟು ಎಂದು ಅಮ್ಮ ಜೋರು ಮಾಡಿದಾಗ ಅವನ ಬಾಯಲ್ಲಿ ಸುಳ್ಳು ಕಾರಣ ರೆಡಿಯಾಗಿತ್ತು.. ಶಾಲೆ ಬಿಟ್ಟ ನಂತರ ಕಸ ಹೆಕ್ಲಿಕ್ಕೆ ಇತ್ತು.. ಸ್ಕೂಲ್ಡೆಗೆ ಡೆಕೋರೇಷನ್ ಮಾಡ್ಲಿಕ್ಕೆ ಇತ್ತು.. ಎಂದಾಗ ಅಮ್ಮ ಕರಗಿ ಹೋದಳು.  ಹೌದಾ.. ಪುಟ್ಟ.. ಬಾ ಊಟ ಮಾಡು ಎಂದಾಗ ಆಟವಾಡಿ ಬಂದ  ಪುಟ್ಟನಿಗೆ ಯುದ್ದ ಗೆದ್ದ ಸಂತಸ..

ಬೆಳಗ್ಗೆ ಹೊರಡುವ ಮಗಳು ಅಮ್ಮನಲ್ಲಿ ಅಮ್ಮಾ ನಾನಿವತ್ತು ಕಾಲೇಜಿಂದ ಬರುವಾಗ ಲೇಟ್ ಆಗುತ್ತೆ, ಅಪ್ಪನ ಹತ್ರ ಹೇಳು.. ಲಾಸ್ಟ್ ಬಸ್ ನಲ್ಲಿ ಬರುತ್ತೇನೆ.. ಎಂದು ಹೊರಟ ಹುಡುಗಿಗೂ ಅಮ್ಮನನ್ನು ನಂಬಿಸಿ ಗೆದ್ದುಬಿಟ್ಟೆ, ಫ್ರೆಂಡ್ಸ್  ಜೊತೆ ಮಾಲ್‌ಗೆ ಸುತ್ತಿ ಬರಬಹುದು ಎಂಬ ಆತ್ಮವಿಶ್ವಾಸ.

ಹೌದು.. ಇಂತಹಾ ಘಟನೆಗಳು ನಮ್ಮ ನಿಮ್ಮ ಮನೆಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಸಹವಾಸ ದೋಷದಿಂದ ಹೆತ್ತವರ ಹಾದಿ ತಪ್ಪಿಸಿ, ಶಾಲಾ ಕಾಲೇಜು ದಿನಗಳನ್ನು ಎಂಜಾಯ್ ಮಾಡಬಯಸುತ್ತಾರೆ ಕೆಲಮಕ್ಕಳು. ಇಂತಹಾ ಸನ್ನಿವೇಶದಲ್ಲಿ ಅವರ ವಯಸ್ಸೇ ಅವರಿಂದ ಈ ಬಗೆಯ ಸುಳ್ಳುಗಳನು ಹೇಳಿಸುವುದು ಒಂದೆಡೆಯಾದರೆ, ಅವರ ಜೊತೆಗಿನ  ಗೆಳೆಯರ ಸಹವಾಸವೂ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.

ಜಾಹೀರಾತು

ಮಕ್ಕಳು ಎಂದಿಗಿಂತಲೂ ತಡವಾಗಿ ಬಂದಾಗೆಲ್ಲಾ ಮನೆಯಲ್ಲಿ ಹೆತ್ತವರು ಟೆನ್ಷನ್ ಮಾಡಿಕೊಂಡಿದ್ದರೆ, ಕೆಲಮಕ್ಕಳು ಸುಳ್ಳು ಕಾರಣಗಳನ್ನು ನೀಡಿ ಹೆತ್ತವರನ್ನು ಮರುಳು ಮಾಡುತ್ತಾರೆ. ಮತ್ತೆ ಅದೇ ಸುಳ್ಳನ್ನು ಸತ್ಯಮಾಡಲು ಸಾವಿರ ಸುಳ್ಳುಗಳ ಕೋಟೆ ಕಟ್ಟುತ್ತಾರೆ.

ಕಳೆದುಹೋಯ್ತು, ಯಾರೋ ಕದ್ದರು, ಅವನು ಹೊಡೆದ, ಕಾಲು ನೋವು, ಹೋಮ್ ವರ್ಕ್ ಇಲ್ಲ, ಬಸ್ಸು ಸಿಕ್ಲಿಲ್ಲ, ಬಿದ್ದು ಸಿಕ್ಕಿದ್ದು,  ಪ್ರ್ಯಾಕ್ಟೀಸ್ ಇತ್ತು,  ಓದ್ಲಿಕ್ಕೆ ಇತ್ತು,  ದುಡ್ಡು ಕೊಡ್ಬೇಕಂತೆ..ಓದ್ತಾ ಇದ್ದೆ.. ಹೀಗಿರುತ್ತದೆ ಮಕ್ಕಳ ಮಾತುಗಳು. ಆದರೆ ಕೆಲವೊಮ್ಮ ಇವೆಲ್ಲವೂ ಮಕ್ಕಳೇ ಹೇಳುವ ಸುಳ್ಳಿನ ಸರಮಾಲೆಯಾಗಿರುತ್ತದೆ.

ಆದರೆ ಮನೆಯಲ್ಲಿಯೇ ಗೃಹವಾರ್ತೆ ಮಾಡಿಕೊಂಡಿರುವ ಅಮ್ಮಂದಿರಂತೂ ಮಕ್ಕಳ ಮೇಲೆ ಧೃಡವಿಶ್ವಾಸವಿಟ್ಟುಕೊಂಡಿರುತ್ತಾರೆ, ನನ್ನ ಮಗ(ಳು) ನನ್ನ ಬಳಿ ಸುಳ್ಳು ಹೇಳಲಾರ(ಳು) ಎಂಬ ನಂಬಿಕೆಯಿಂದ ಅವರ ಮಾತುಗಳನ್ನು ಸುಲಭವಾಗಿ ನಂಬಿಬಿಡುತ್ತಾರೆ. ಕೆಲಸದ ಒತ್ತಡದಲ್ಲಿರುವ ತಂದೆಗೆ ಮಕ್ಕಳ ಬಗ್ಗೆ ಕಾಳಜಿಕಡಿಮೆ ಇರುವ ಸನ್ನಿವೇಶಗಳಲ್ಲಂತೂ ಮಕ್ಕಳು ಸುಳ್ಳಿನ ದಾರಿಯಲ್ಲೇ ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ತಂದೆ ತಾಯಿ ಉದ್ಯೋಗದಲ್ಲಿರುವ ಹಂತದಲ್ಲಂತೂ ಮನೆಯಲ್ಲಿ ಎಲ್ಲರಿದ್ದೂ ಅನಾಥ ಸ್ಥಿತಿಯನ್ನು ಎದುರಿಸುವ ಕೆಲ ಮಕ್ಕಳಂತೂ ಕೆಟ್ಟಸಹವಾಸದಿಂದ ಕಲಿಕೆಯಲ್ಲೂ ಹಿಂದುಳಿಯುತ್ತಾರೆ.

ಜಾಹೀರಾತು

ಮಕ್ಕಳನ್ನು ನಂಬಬೇಕು ಅದರ ಜೊತೆಗೆ ಅವರ ಎಲ್ಲ ಅಗುಹೋಗುಗಳಲ್ಲಿಯೂ ತಂದೆ ತಾಯಿ ಸ್ನೇಹಿತರಂತೆ ಇದ್ದಾಗ ಮಾತ್ರ ಮಕ್ಕಳೂ ತಂದೆತಾಯಿಯನ್ನು ಇಷ್ಟಪಡುತ್ತಾರೆ, ದೇವರಂತೆ ಕಾಣುತ್ತಾರೆ. ಆದರೆ ಅವರಿಗೆ ಕೆಲವೊಂದು ಹಕ್ಕುಗಳು ಸಿಗಲಿಲ್ಲ ಎಂಬ ಮನೋಭಾವ ಬಂದಾಗ ಅದನ್ನು ಪಡೆಯಲು ಸುಳ್ಳು ಹೇಳತೊಡಗುತ್ತಾರೆ.

ಮನೆಯಲ್ಲಿ ಆಟವಾಡಲು ಬಿಡುವುದಿಲ್ಲ ಎಂಬ ಕೊರಗಿನಲ್ಲಿರುವ ಮಗು, ಶಾಲೆಯಲ್ಲಿ ಆಟವಾಡಲು ಬಯಸುತ್ತದೆ. ಅದಕ್ಕಾಗಿ ತಡವಾಗಿ ಬಂದೆ ಎನ್ನುವ ಸುಳ್ಳು ಹೇಳುತ್ತದೆ.

ಸ್ನೇಹಿತರೊಂದಿಗೆ ಬೆರೆಯುವುದಕ್ಕೆ ನಿರ್ಬಂಧ ಹೇರಿದರೆ, ಆ ಮಗು ಹಠಮಾರಿಯಂತೆ ಸುಳ್ಳುಹೇಳಿ ಸ್ನೇಹಿತರಜೊತೆ ಕಾಲ ಕಳೆಯುತ್ತದೆ.  ಹೀಗೆ ಮಕ್ಕಳ ಒಂದೊಂದೇ ಸುಳ್ಳುಗಳನ್ನುಹೆತ್ತವರು ನಂಬುತ್ತಾ ಬಂದಷ್ಟು ಮಕ್ಕಳು ಸುಳ್ಳುಹೇಳುವುದರಲ್ಲಿ ನಿಸ್ಸೀಮರಾಗುತ್ತಾರೆ. ಕೊನೆಗೆ ಸುಳ್ಳಿನ ಕೋಟೆಯಲ್ಲಿಯೇ ಒದ್ದಾಡಬೇಕಾದೀತು ಎನ್ನುವ ಜ್ಞಾನವೂ ಅವರಲ್ಲಿ ಇಲ್ಲವಾದೀತು.

ಜಾಹೀರಾತು

ಹೀಗಾಗಿ ಹೆತ್ತವರು ಮಕ್ಕಳಿಗೆ ಸುಳ್ಳು ಹೇಳುವುದನ್ನು ಕಲಿಸಬಾರದು, ಪ್ರೋತ್ಸಾಹವನ್ನೂ ನೀಡಬಾರದು, ಮಕ್ಕಳ ಸುಳ್ಳುಮಾತುಗಳನ್ನು ಗ್ರಹಿಸಿಕೊಂಡು ಅವರಿಗೆ ಸತ್ಯದ ದಾರಿಯಲ್ಲೇ ಮುನ್ನಡೆಯಲು ಬುದ್ದಿ ಹೇಳುವ ಸ್ನೇಹಿತರಾಗಬೇಕು. ಚಿಕ್ಕ ಚಿಕ್ಕ ಸುಳ್ಳುಗಳೇ ದೊಡ್ಡ ದೊಡ್ಡದಾಗಿ ಮಕ್ಕಳನ್ನೇ ಕಳೆದುಕೊಳ್ಳುವ ಅಪಾಯದ ಹಂತಕ್ಕೆ ತಲುಪುವ ಮುನ್ನ ಜಾಗೃತರಾಗಬೇಕು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Mounesh Vishwakarma
ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ರಂಗಭೂಮಿ ಕಾರ್ಯಕರ್ತ, ಪತ್ರಕರ್ತ ಮೌನೇಶ ವಿಶ್ವಕರ್ಮ ಮಕ್ಕಳ ದಿನನಿತ್ಯದ ಆಗುಹೋಗುಗಳಲ್ಲಿ ಸಂಭವಿಸುವ ಘಟನೆಯ ಸೂಕ್ಷ್ಮ ನೋಟ ನೀಡುತ್ತಾರೆ. ಪತ್ರಕರ್ತರಾಗಿ ಹಲವು ವರ್ಷಗಳಿಂದ ಮಂಗಳೂರು, ಪುತ್ತೂರು ಬಂಟ್ವಾಳಗಳಲ್ಲಿ ದುಡಿಯುತ್ತಿರುವ ಅವರು ಸಂಪನ್ಮೂಲ ವ್ಯಕ್ತಿಯೂ ಹೌದು.

Be the first to comment on "ಪುಟ್ಟನಿಗೆ ಯುದ್ದ ಗೆದ್ದ ಸಂತಸ…!"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*