ಕಲಿತದ್ದು ಇಂಜಿನಿಯರಿಂಗ್, ಸೆಳೆದದ್ದು ಯಕ್ಷಗಾನ

ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಯಕ್ಷಪ್ರಭಾ ಪತ್ರಿಕೆಯ ಸಂಪಾದಕರೂ ಆಗಿದ್ದ ಹಿರಿಯರಾದ ಕುಬಣೂರು ಶ್ರೀಧರ್ ರಾವ್ ವಿಧಿವಶರಾಗಿದ್ದಾರೆ. ಅವರ ಕುರಿತು ಮೂಡುಬಿದಿರೆ ಎಂ.ಶಾಂತಾರಾಮ ಕುಡ್ವ ಅವರ ಬರೆಹ ಬಂಟ್ವಾಳನ್ಯೂಸ್ ಓದುಗರಿಗಾಗಿ..

  • ಎಂ.ಶಾಂತಾರಾಮ ಕುಡ್ವ, ಮೂಡುಬಿದಿರೆ

ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರು , ಪ್ರಸ್ತುತ ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತರಾದ ಕುಬಣೂರು ಶ್ರೀಧರ್ ರಾವ್ ರವರು ನಿನ್ನೆ ರಾತ್ರಿ ನಿಧನರಾದರು . ಸಂಗೀತ ಶೈಲಿಯನ್ನು ಭಾಗವತಿಕೆಯಲ್ಲಿ ಬಳಸಿ ರಂಗಸ್ಥಳದಲ್ಲಿ ಮೆರೆದ ಕುಬಣೂರರ‌ ನಿಧನ ಯಕ್ಷರಂಗಕ್ಕೆ ಒದಗಿದ ದೊಡ್ಡ ನಷ್ಟ .ದಾಮೋದರ ಮಂಡೆಚ್ಚರ ನಂತರ ಸಂಗೀತ ಶೈಲಿಯ ಭಾಗವತರೆಂದು ಗುರುತಿಸಲ್ಪಟ್ಟ ಕುಬಣೂರರ ನಿಧನ ಯಕ್ಷರಂಗಕ್ಕೆ ಆಘಾತ ಉಂಟು ಮಾಡಿದೆ.

ಜಾಹೀರಾತು

ಚಿತ್ರಕೃಪೆ: ಯಕ್ಷಲೋಕ

1956 ರಲ್ಲಿ ಭಾಗಮಂಡಲದಲ್ಲಿ ಜನಿಸಿದ ಕುಬಣೂರರು ಬೆಳೆದದ್ದು ತಮ್ಮ ಅಜ್ಜನ ಮನೆಯಾದ ಕುಬಣೂರಿನಲ್ಲಿ .ಹಾಗಾಗಿ ಅವರ ಹೆಸರಿನ ಮುಂದೆ ಕುಬಣೂರು ಶಬ್ದ ಅಂಟಿಕೊಂಡಿತು . ಮೆಕಾನಿಕಲ್ ಇಂಜಿನಿಯರಿಂಗಿನಲ್ಲಿ ಡಿಪ್ಲೋಮ ಪದವಿ ಪಡೆದವರು .ಆದರೆ ಇವರ ಕುಟುಂಬವೇ ಸಂಗೀತದ ಕಲಾವಿದರ ಸಂಗಮವಾದ ಕಾರಣ , ಕುಬಣೂರರೂ ಸಂಗೀತದತ್ತ ಹೊರಳಿದರು . ಯಕ್ಷಗಾನದಲ್ಲೂ ಆಸಕ್ತಿ ವಹಿಸಿ ಭಾಗವತರಾಗಿ ವೃತ್ತಿ ಬದುಕನ್ನು ಆರಿಸಿಕೊಂಡರು .ಕರ್ಣಾಟಕ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದ್ದ ಕಾರಣ , ಭಾಗವತಿಕೆಯಲ್ಲಿ ಸಂಗೀತ ಶೈಲಿ ಅಳವಡಿಸಿ ರಂಗದಲ್ಲಿ ವಿಜೃಂಭಿಸಿದರು .ಯಕ್ಷಗಾನದ
ಪದ್ಯಗಳಿಗೆ ಸಂಗೀತಾದಿ ರಾಗಗಳನ್ನು ಬಳಸಿ ಮಿಂಚಿದರು . ದಾಮೋದರ ಮಂಡೆಚ್ಚರ ಭಾಗವತಿಕೆಯ ಸಮರ್ಥ ಉತ್ತರಾಧಿಕಾರಿ ಎನಿಸಿಕೊಂಡವರು .

ಚಿತ್ರಕೃಪೆ: ಅಶ್ವಿತ್ ಶೆಟ್ಟಿ ತುಳುನಾಡು

ಐ.ರಘುಮಾಸ್ತರರಿಂದ ಕರ್ನಾಾಟಕ ಸಂಗೀತ ಅಭ್ಯಾಸವನ್ನೂ , ಅಡ್ಕಸ್ಥಳ ರಾಮಚಂದ್ರ ಭಟ್ಟರಿಂದ ಮದ್ದಳೆವಾದನವನ್ನೂ , ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಬೇಕೂರು ಕೇಶವರಿಂದ ನಾಟ್ಯಾಭ್ಯಾಸ , ಟಿ.ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಿಂದ ಯಕ್ಷಗಾನ ಭಾಗವತಿಕೆಯನ್ನೂ ಕಲಿತು ಪಾರಂಗತರಾದರು . ಭಾಗವತನಾದವನಿಗೆ ಬೇಕಾದ ರಾಗತಾಳಗಳ ಜ್ಞಾನ , ರಂಗಪ್ರಜ್ಞೆ , ರಂಗದ ನಡೆ , ಪ್ರಸಂಗಗಳ ಕಂಠಪಾಟ , ಪೌರಾಣಿಕ ಜ್ಞಾನ , ಛಂದಸ್ಸಿನ ಅಪಾರ ಜ್ಞಾನ ಎಲ್ಲವೂ ಕುಬಣೂರರಿಗೆ ಕರಗತವಾಗಿದ್ದ ಕಾರಣ ಭಾಗವತೋತ್ತಮ ಎನಿಸಿಕೊಂಡರು .ಪ್ರಾರಂಭದಲ್ಲಿ ತಾವೇ ಯಕ್ಷಗಾನ ಮೇಳವನ್ನು ಹೊರಡಿಸಿದರು .ಆದರೆ , ಇದರಲ್ಲಿ ಅಪಾರ ನಷ್ಟ ಹೊಂದಿದ ಕಾರಣ , ಮೇಳ ನಿಲ್ಲಿಸಿ ಭಾಗವತರಾಗಿ ವೃತ್ತಿಯನ್ನು ಕೈಗೊಂಡರು .


ನಂದಾವರ, ಅರುವ, ಬಪ್ಪನಾಡು, ಕದ್ರಿ, ಕಾಂತಾವರ ಹೀಗೆ ವಿವಿಧ ಮೇಳಗಳಲ್ಲಿ ದುಡಿದು ಕಳೆದ ಇಪ್ಪತ್ತೆರಡು ವರ್ಷಗಳಿಂದ ಶ್ರೀ ಕಟೀಲು ನಾಲ್ಕನೇ ಮೇಳವೊಂದರಲ್ಲಿ ಪ್ರಧಾನ ಭಾಗವತರಾಗಿದ್ದರು .ಕಟೀಲು ನಾಲ್ಕನೇ ಮೇಳದಲ್ಲಿ ಅಪರೂಪದ ಪ್ರಸಂಗಗಳನ್ನು ಪ್ರದರ್ಶಿಸುವಲ್ಲಿ ಕುಬಣೂರು ಉತ್ಸುಕರಾಗಿದ್ದ ಕಾರಣ , ಶ್ರೀನಿವಾಸ ಕಲ್ಯಾಣ , ಮಾನಿಷಾದ , ಕೊಲ್ಲೂರು ಕ್ಷೇತ್ರ ಮಹಾತ್ಮೆ , ಸಾರ್ವಭೌಮ ಸಂಕರ್ಷಣ , ದಾಶರಥಿ ದರ್ಶನ ಮುಂತಾದ ಪ್ರಸಂಗಗಳನ್ನು ಕಟೀಲು ಮೇಳದಲ್ಲಿ ಪ್ರಥಮವಾಗಿ ಪ್ರದರ್ಶಿಸಿದ ಕೀರ್ತಿ ಕುಬಣೂರರಿಗೆ ಸಲ್ಲುತ್ತದೆ . ಮೂವತ್ತಮೂರು ವರುಷಗಳ ತಿರುಗಾಟದ ಅನುಭವ ಹೊಂದಿದ್ದಾರೆ . ದಾಶರಥಿ ದರ್ಶನ, ಸಾರ್ವಭೌಮ ಸಂಕರ್ಷಣ, ಮನುವಂಶವಾಹಿನಿ, ಮಹಾಸತಿ ಮಂದಾಕಿನಿ, ಕಾಂತಾವರ ಕ್ಷೇತ್ರ ಮಹಾತ್ಮೆ, ಪಟ್ಟಣ ಮಣೆ ( ತುಳು ) ಮುಂತಾದ ಪ್ರಸಂಗಗಳನ್ನು ರಚಿಸಿದ್ದಾರೆ . ಕಲ್ಲಾಡಿ ವಿಠಲ ಶೆಟ್ಟರ ಜೀವನ ಚರಿತ್ರೆಯ ಯಕ್ಷವಿಜಯ ವಿಠಲ ಕೃತಿಯ ಸಂಪಾದಕರಾಗಿಯೂ ದುಡಿದಿದ್ದಾರೆ . ಯಕ್ಷಗಾನದ ಸರ್ವಾಂಗಗಳನ್ನೂ ಅರಿತಿದ್ದ ಕುಬಣೂರರು ಅರ್ಥಧಾರಿಗಳೂ , ವೇಷಧಾರಿಗಳೂ ಆಗಿದ್ದರು .ಯಕ್ಷರಂಗದ ಅಪಾರ ತಿಳುವಳಿಕೆ ಹೊಂದಿರುವ ಕಾರಣ ನೂರಾರು ಬಯಲಾಟ, ತಾಳಮದ್ದಳೆ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ , ಯಕ್ಷಗಾನ ವಿಚಾರ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಪ್ರಸಿದ್ಧರಾಗಿದ್ದರು .ತಮ್ಮ ಸುಶ್ರಾವ್ಯವಾದ ಕಂಠಶ್ರೀಯಿಂದ ಯಕ್ಷಗಾನದ ಭಾಗವತಿಕೆಯಲ್ಲಿ ತಮ್ಮದೇ ಆದ ವಿಶಿಷ್ಠ ಮಟ್ಟು ಹುಟ್ಟು ಹಾಕಿದ ಅಪರೂಪದ ಭಾಗವತರಾಗಿದ್ದರು .

ಜಾಹೀರಾತು

ಚಿತ್ರಕೃಪೆ: ಕಿರಣ್ ವಿಟ್ಲ

ಉತ್ತಮ ಲೇಖಕರೂ ಆಗಿದ್ದ ಕುಬಣೂರರು ತಮ್ಮದೇ ಸಂಪಾದಕತ್ವದಲ್ಲಿ ಯಕ್ಷಪ್ರಭಾ ಪತ್ರಿಕೆಯನ್ನು ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದರು .ಕಡತೋಕ ಮಂಜುನಾಥ ಭಾಗವತರ ನಂತರ ಯಕ್ಷಗಾನ ಪತ್ರಿಕೆ ಹೊರಡಿಸಿದ ಸಾಹಸ ಮಾಡಿದವರು ಕುಬಣೂರರು . ಯಕ್ಷಪ್ರಭಾ ಪತ್ರಿಕೆಯು ಯಕ್ಷಗಾನದ ಎಲ್ಲಾ ಘಟನೆಗಳನ್ನು ಹೊಂದಿರುವ ಕಾರಣ , ಯಕ್ಷಗಾನ ಓದುಗರ ಮೆಚ್ಚುಗೆ ಗಳಿಸಿದೆ .ಕುಬಣೂರರು ಒಮ್ಮೆ ನನ್ನಲ್ಲಿ ಮಾತಾಡುತ್ತಾ , ಕುಡ್ವರೇ ,ಯಕ್ಷಪ್ರಭಾ ಪತ್ರಿಕೆಯು ಆರ್ಥಿಕವಾಗಿ ಲಾಭದಾಯಕವಾಗದಿದ್ದರೂ , ಯಕ್ಷಗಾನಕ್ಕೊಂದು ಪತ್ರಿಕೆ ಬೇಕು ಎಂಬ ಕಾರಣಕ್ಕೆ ಈ ಪತ್ರಿಕೆ ನಡೆಸುತ್ತಿದ್ದೇನೆ ಎಂದಿದ್ದರು . ನಾನೂ ಈ ಪತ್ರಿಕೆಗೆ ಪ್ರಾರಂಭದಲ್ಲಿ ಹಲವಾರು ಚಂದಾದಾರರನ್ನು ಕುಬಣೂರರ ಅಪೇಕ್ಷೆಯಂತೆ ಸೇರಿಸಿದ್ದೆ ಮಾತ್ರವಲ್ಲ , ನಮ್ಮ ಯಕ್ಷಸಂಗಮ ದ ಎಲ್ಲಾ ಕೂಟಗಳ ಹಾಗೂ ಮಿತ್ರರ ಕೂಟಗಳ ಜಾಹೀರಾತು ನೀಡಿ ಪತ್ರಿಕೆಯನ್ನು ಪ್ರೋತ್ಸಾಹಿಸಿದ್ದೆ .

ಒಂದೂವರೆ ತಿಂಗಳ ಹಿಂದೆ ಸಿಂಗಾಪೂರ್ ನಲ್ಲಿ ನೆಲೆಸಿರುವ ತಮ್ಮ ಮಗಳಾದ ಶ್ರೀವಿದ್ಯಾರ ಮನೆಗೆ ಪತ್ನಿಯೊಂದಿಗೆ ಕುಬಣೂರರು ತೆರಳಿದ್ದರು .ಇದೇ 28 ರಂದು ಊರಿಗೆ ಬರುವವರಿದ್ದರು .ಆದರೆ ಸಿಂಗಾಪೂರ್ ನಲ್ಲಿ ಜ್ವರದಿಂದಾಗಿ ತೀವೃ ಅಸ್ವಸ್ಥರಾದ ಕುಬಣೂರರನ್ನು ನಿನ್ನೆ ಬೆಳಿಗ್ಗೆ ಬೆಂಗಳೂರಿಗೆ ಕರೆ ತರಲಾಗಿತ್ತು . ಆದರೆ , ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಅವರ ಸಂಬಂಧಿಯಾದ ಸ್ಕಂದಪ್ರಸಾದ್ ಭಟ್ ತಿಳಿಸಿದ್ದಾರೆ .

ಕುಬಣೂರರು ಅರುವ ಮೇಳದಲ್ಲಿ ಇರುವಾಗ ನನಗೆ ಅವರ ಪರಿಚಯವಾದುದು .ತಾರಾನಾಥ ವರ್ಕಾಡಿಯವರು ರಚಿಸಿದ ಪರಕೆದ ಪಿಂಗಾರ ತುಳುಪ್ರಸಂಗ ಅಪಾರ ಯಶಸ್ಸು ಗಳಿಸಲು ಕುಬಣೂರರೂ ಕಾರಣರಾಗಿದ್ದರು.ಸಹಕಲಾವಿದರಿಗೆ ನಿರ್ದೇಶನ ನೀಡಿ , ಪ್ರಸಂಗದ ಯಶಸ್ಸಿಗೆ ಕಾರಣರಾಗಿದ್ದರು. ಆ ಪ್ರಸಂಗದ ಏರ್ ಬಾಲೆ ಒಂಚಿ ಪಯಣ , ಬಿರುವ ಕುಲೊಟು ಪುಟ್ಟಿನಂಚಿ ಬಾಲೆ ಕೇಣ್ ಎನ್ನ ಮದಿಪು ಮುಂತಾದ ಪದ್ಯಗಳು ಆ ಕಾಲದಲ್ಲಿ ಅತ್ಯಂತ ಪ್ರಸಿದ್ದಿ ಗಳಿಸಿತ್ತು .ತಮ್ಮ ಸುಶ್ರಾವ್ಯ ಕಂಠಶ್ರೀಯಿಂದ ಭಾಗವತಿಕೆ ಮಾಡುತ್ತಿದ್ದ ಕುಬಣೂರರನ್ನು ನಾನೇ ಚೌಕಿಗೆ ಹೋಗಿ ಮಾತಾಡಿಸಿ ಅವರ ಪರಿಚಯ ಮಾಡಿಕೊಂಡಿದ್ದೆ . ನಂತರ ನಮ್ಮ ಮಿತ್ರತ್ವ ವೃದ್ಧಿಸಿತ್ತು . ಸರಳ , ವಿನಯ ,ಸ್ನೇಹಶೀಲ ಗುಣದ ಕುಬಣೂರರು ನನ್ನ ಮೆಚ್ಚಿನ ಭಾಗವತರಾಗಿದ್ದರು. ಶ್ರೀದೇವಿ ಮಹಾತ್ಮೆ ಪ್ರಸಂಗದಲ್ಲಿ ಚಂಡಮುಂಡರ , ರಕ್ತಬೀಜನ ಪದ್ಯಗಳಲ್ಲಿ ಹೊಸತನ ನೀಡಿರುವಲ್ಲಿ ಕುಬಣೂರರ ರಾಗಜ್ಞಾನ ಗುರುತಿಸಬಹುದು .ನಮ್ಮ ಯಕ್ಷಸಂಗಮ ದ ಕೂಟಗಳಲ್ಲೂ ಭಾಗವಹಿಸಿದ್ದರು . ಕುಡ್ವರೇ , ಸಿಂಗಾಪುರದಿಂದ ಮರಳಿ ಬಂದ ಮೇಲೆ ನಿಮ್ಮ”ಯಕ್ಷೋಪಾಸನಮ್ “ಕೂಟಕ್ಕೆ ಭಾಗವತಿಕೆಗೆ ಬರುತ್ತೇನೆ ಎಂದಿದ್ದುದು ಈಗ ನೆನಪಾಗಿ ದುಖ ಉಮ್ಮಳಿಸಿ ಬರುತ್ತಿದೆ .ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕುಬಣೂರರ 60 ನೇ ವರ್ಷದ ಸಂಭೃಮವನ್ನು ಕಟೀಲಿನಲ್ಲಿ ಅವರ ಅಭಿಮಾನಿಗಳು ನೆರವೇರಿಸಿದ್ದರು .ಇನ್ನೂ ಹಲವಾರು ವರ್ಷಗಳ ಕಾಲ ರಂಗಸ್ಥಳವನ್ನು ತುಂಬಬೇಕಾಗಿದ್ದ ಕುಬಣೂರರ ನಿಧನದ ವಾರ್ತೆ ಬರಸಿಡಿಲಿನಂತೆ ಎರಗಿ , ಅವರ ಅಭಿಮಾನಿಗಳಲ್ಲಿ ಶೋಕವನ್ನು ಉಂಟು ಮಾಡಿದೆ ‌.ಮೃತರು ತಮ್ಮ ಧರ್ಮಪತ್ನಿ ಶಾರದಾ , ಮಗ ಶ್ರೀಕಾಂತ , ಮಗಳು ಶ್ರೀವಿದ್ಯಾ ಸಹಿತ ಕುಟುಂಬಸ್ತರನ್ನೂ , ಸಹಸ್ರಾರು ಅಭಿಮಾನಿಗಳನ್ನೂ ಅಗಲಿದ್ದಾರೆ . ಮೃತರಿಗೆ ಶೃದ್ದಾಂಜಲಿ ಅರ್ಪಿಸುತ್ತಾ , ಅವರ ಕುಟುಂಬಸ್ತರರಿಗೆ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಶ್ರೀದೇವರಲ್ಲಿ ಪ್ರಾರ್ಥಿಸುತ್ತೇನೆ .

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕಲಿತದ್ದು ಇಂಜಿನಿಯರಿಂಗ್, ಸೆಳೆದದ್ದು ಯಕ್ಷಗಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*